ಶತಕ ಸಿಡಿಸಿ ವಿಶ್ವಕಪ್ ಇತಿಹಾಸದಲ್ಲಿ ಸೌತ್ ಆಫ್ರಿಕಾ ಪರ ವಿಶೇಷ ದಾಖಲೆ ಬರೆದ ಮಿಲ್ಲರ್; ರೆಕಾರ್ಡ್ಸ್ ಪಟ್ಟಿ ಹೀಗಿದೆ
Nov 16, 2023 07:52 PM IST
ಶತಕ ಸಿಡಿಸಿ ಸಂಭ್ರಮಿಸಿದ ಡೇವಿಡ್ ಮಿಲ್ಲರ್.
- ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 116 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಿತ 101 ರನ್ ಗಳಿಸಿದರು. ಶತಕ ಸಿಡಿಸಿದ ಮಿಲ್ಲರ್ ದಾಖಲೆಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
ಏಕದಿನ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕಾಂಗಿ ಹೋರಾಟ ನಡೆಸಿ ಅಮೋಘ ಶತಕ ಸಿಡಿಸಿದರು. ಆ ಮೂಲಕ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಪರ ವಿಶೇಷ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ಮಿಲ್ಲರ್ ಹಲವು ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನಾಕೌಟ್ನಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ
48 ವರ್ಷಗಳ ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ ಸೌತ್ ಆಫ್ರಿಕಾ ಪರ ನಾಕೌಟ್ ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಡೇವಿಡ್ ಮಿಲ್ಲರ್ ಪಾತ್ರರಾಗಿದ್ದಾರೆ. ಅಲ್ಲದೆ, ನಾಕೌಟ್ನಲ್ಲಿ ಅತ್ಯಧಿಕ ರನ್ ಗಳಿಸಿದ್ದ ಫಾಫ್ ಡು ಪ್ಲೆಸಿಸ್ ದಾಖಲೆ ಮುರಿದರು. ಈ ಹಿಂದೆ ಸೆಮಿಫೈನಲ್ನಲ್ಲಿ ಪ್ಲೆಸಿಸ್ 82 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಮಿಲ್ಲರ್ 101 ರನ್ ಬಾರಿಸಿದ್ದಾರೆ.
ತಂಡಕ್ಕೆ ಆಸರೆ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ, 24 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಈ ವೇಳೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಮಿಲ್ಲರ್, ಅಮೋಘ ಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 116 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಿತ 101 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 212 ರನ್ಗಳಿಗೆ ಸರ್ವಪತನ ಕಂಡಿತು. ಮಿಲ್ಲರ್ ದಾಖಲೆಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
ಮ್ಯಾಕ್ಸಿ ನಂತರ ಸ್ಥಾನ
ಏಕದಿನ ವಿಶ್ವಕಪ್ನಲ್ಲಿ 5ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಶತಕ ಸಿಡಿಸಿದ ಆಟಗಾರರ ಪೈಕಿ ಮಿಲ್ಲರ್ 2ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಸ್ಥಾನದಲ್ಲಿದ್ದಾರೆ. ಮ್ಯಾಕ್ಸಿ 3 ಶತಕ, ಮಿಲ್ಲರ್ ಎರಡು ಶತಕ ಸಿಡಿಸಿದ್ದಾರೆ.
ಏಕದಿನದಲ್ಲಿ ಅಧಿಕ ಶತಕ
ಏಕದಿನದಲ್ಲಿ 5ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಅಧಿಕ ಶತಕ ಸಿಡಿಸಿದವರ ಪಟ್ಟಿಗೂ ಮಿಲ್ಲರ್ ಸೇರ್ಪಡೆಯಾಗಿದ್ದಾರೆ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅಧಿಕ ಶತಕ ಸಿಡಿಸಿದ್ದಾರೆ. ಬಟ್ಲರ್ ಖಾತೆಯಲ್ಲಿ 8 ಶತಕಗಳಿವೆ. ಇನ್ನು ತಲಾ 7 ಸೆಂಚುರಿ ಬಾರಿಸಿರುವ ಎಂಎಸ್ ಧೋನಿ, ಯುವರಾಜ್ ಸಿಂಗ್ 2ನೇ ಸ್ಥಾನದಲ್ಲಿದ್ದಾರೆ. ಎಬಿ ಡಿವಿಲಿಯರ್ಸ್, ಇಯಾನ್ ಮಾರ್ಗನ್, ಆ್ಯಂಡ್ರೂ ಸೈಮಂಡ್ಸ್, ಸಿಕಂದರ್ ರಾಜಾ, ಡೇವಿಡ್ ಮಿಲ್ಲರ್ ತಲಾ 6 ಶತಕ ಬಾರಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ತಂಡವೊಂದರ ವಿರುದ್ಧ ಹೆಚ್ಚು ಶತಕ ಸಿಡಿಸಿದವರು.
- 3 - ಕ್ರಿಸ್ ಕ್ರೈನ್ಸ್ (ನ್ಯೂಜಿಲೆಂಡ್) vs ಭಾರತ
- 3 - ಇಯಾನ್ ಮಾರ್ಗನ್ (ಇಂಗ್ಲೆಂಡ್) vs ಆಸ್ಟ್ರೇಲಿಯಾ
- 3 - ಕೆವಿನ್ ಪೀಟರ್ಸನ್ (ಇಂಗ್ಲೆಂಡ್)vs ಸೌತ್ ಆಫ್ರಿಕಾ
- 3 - ಡೇವಿಡ್ ಮಿಲ್ಲರ್ (ಸೌತ್ ಆಫ್ರಿಕಾ) vs ಆಸ್ಟ್ರೇಲಿಯಾ
ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ ನಡುವಿನ ಏಕದಿನಗಳಲ್ಲಿ ಹೆಚ್ಚು ಶತಕ ಸಿಡಿಸಿದವರು
- 5 - ಫಾಫ್ ಡು ಪ್ಲೆಸಿಸ್
- 5 - ಡೇವಿಡ್ ವಾರ್ನರ್
- 3 - ಕ್ವಿಂಟನ್ ಡಿ ಕಾಕ್
- 3 - ಹರ್ಷಲ್ ಗಿಬ್ಸ್
- 3 - ಡೇವಿಡ್ ಮಿಲ್ಲರ್
ಏಕದಿನದಲ್ಲಿ ಅತ್ಯಧಿಕ ಸಿಕ್ಸರ್ (ಸೌತ್ ಆಫ್ರಿಕಾ ಪರ)
- 200 - ಎಬಿ ಡಿವಿಲಿಯರ್ಸ್
- 138 - ಡೇವಿಡ್ ಮಿಲ್ಲರ್
- 137 - ಜಾಕ್ ಕಾಲಿಸ್
- 128 - ಹರ್ಷಲ್ ಗಿಬ್ಸ್
- 118 - ಕ್ವಿಂಟನ್ ಡಿ ಕಾಕ್
ವಿಶ್ವಕಪ್ ನಾಕೌಟ್ಗಳಲ್ಲಿ ಅತ್ಯಧಿಕ ರನ್ (ಸೌತ್ ಆಫ್ರಿಕಾ ಪರ)
- 101 - ಡೇವಿಡ್ ಮಿಲ್ಲರ್ vs ಆಸ್ಟ್ರೇಲಿಯಾ, ಕೋಲ್ಕತ್ತಾ, 2023ರ ವಿಶ್ವಕಪ್ ಸೆಮಿಫೈನಲ್
- 82 - ಫಾಫ್ ಡು ಪ್ಲೆಸಿಸ್ vs ನ್ಯೂಜಿಲೆಂಡ್, ಆಕ್ಲೆಂಡ್, 2015ರ ವಿಶ್ವಕಪ್ ಸೆಮಿಫೈನಲ್
- 78* - ಕ್ವಿಂಟನ್ ಡಿ ಕಾಕ್ vs ಶ್ರೀಲಂಕಾ, ಸಿಡ್ನಿ, 2015ರ ವಿಶ್ವಕಪ್ ಕ್ವಾರ್ಟರ್ ಫೈನಲ್
ಐಸಿಸಿ ಏಕದಿನ ಟೂರ್ನಿಗಳ ನಾಕೌಟ್ಗಳಲ್ಲಿ ಶತಕ (ದ.ಆಫ್ರಿಕಾ ಪರ)
- 116* - ಹರ್ಷಲ್ ಗಿಬ್ಸ್ vs ಭಾರತ, ಕೊಲೊಂಬೊ, 2002ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್
- 113* - ಜಾಕ್ ಕಾಲಿಸ್ vs ಶ್ರೀಲಂಕಾ, ಢಾಕಾ, 1998ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್
- 101 - ಡೇವಿಡ್ ಮಿಲ್ಲರ್ vs ಆಸ್ಟ್ರೇಲಿಯಾ, ಕೋಲ್ಕತ್ತಾ, 2023ರ ವಿಶ್ವಕಪ್ ಸೆಮಿಫೈನಲ್