ಡೆಲ್ಲಿ ಕ್ಯಾಪಿಟಲ್ಸ್ಗೆ ಇಬ್ಬರು ನಾಯಕರ ನೇಮಕ? ಫ್ರಾಂಚೈಸಿ ಸಹ ಮಾಲೀಕ ಪಾರ್ಥ ಜಿಂದಾಲ್ ಹೇಳಿದಿಷ್ಟು
Nov 25, 2024 07:55 PM IST
ಡೆಲ್ಲಿ ಕ್ಯಾಪಿಟಲ್ಸ್ಗೆ ಇಬ್ಬರು ನಾಯಕರ ನೇಮಕ? ಫ್ರಾಂಚೈಸಿ ಸಹ ಮಾಲೀಕ ಪಾರ್ಥ ಜಿಂದಾಲ್ ಹೇಳಿದಿಷ್ಟು
- Delhi Capitals Captain: ರಿಷಭ್ ಪಂತ್ ಅವರಿಂದ ತೆರವಾದ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದನ್ನು ಫ್ರಾಂಚೈಸಿ ಸಹ ಮಾಲೀಕ ಪಾರ್ಥ ಜಿಂದಾಲ್ ಅವರು ಬಹಿರಂಗಪಡಿಸಿದ್ದಾರೆ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಜರುಗಿದ ಐಪಿಎಲ್ 2025 ಮೆಗಾ ಹರಾಜು ಮೊದಲ ದಿನದಂದು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರು 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ಐಪಿಎಲ್ ಹರಾಜಿಗೂ ಮುನ್ನ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಬಿಡುಗಡೆ ಮಾಡಿತ್ತು. ಡೆಲ್ಲಿ ಸೇರಿದ ನಂತರ ರಿಷಭ್ ಪಂತ್ ಅವರಿಂದ ತೆರವಾದ ನಾಯಕತ್ವದ ಸ್ಥಾನವನ್ನು ರಾಹುಲ್ ತುಂಬುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಡಿಸಿ ಸಹ ಮಾಲೀಕ ಪಾರ್ಥ ಜಿಂದಾಲ್ ಹೊಸ ಟ್ವಿಸ್ ಕೊಟ್ಟಿದೆ.
ಯಾರಾಗಬಹುದು ಕ್ಯಾಪ್ಟನ್?
ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಇಬ್ಬರೂ ನಾಯಕರಾಗುತ್ತಾರೆ ಎಂದು ಖಚಿತಪಡಿಸಿದ್ದಾರೆ. ಆದರೆ ಯಾರು ನಾಯಕರಾಗುತ್ತಾರೆ ಎಂಬುದನ್ನು ಘೋಷಿಸಿಲ್ಲ. ಹರಾಜಿನ ನಂತರ ಮಾತನಾಡಿದ ಜಿಂದಾಲ್, 'ನಾವು ಅಗ್ರ ಕ್ರಮಾಂಕದಲ್ಲಿ ಸ್ಥಿರವಾಗಿ ಬ್ಯಾಟಿಂಗ್ ನಡೆಸುವ ಆಟಗಾರನಿಗಾಗಿ ಕಾಯುತ್ತಿದ್ದೆವು. ಇನಿಂಗ್ಸ್ ಕಟ್ಟಬಲ್ಲ ಅನುಭವ ಹೊಂದಿರುವ ಆಟಗಾರ ಬೇಕಿತ್ತು. ಅದಕ್ಕಾಗಿಯೇ ರಾಹುಲ್ ಖರೀದಿಸಿದೆವು ಎಂದು ಹೇಳಿಕೆ ನೀಡಿದ್ದಾರೆ.
ಕೆಎಲ್ ರಾಹುಲ್ ಅವರ ಐಪಿಎಲ್ ದಾಖಲೆ ಗಮನಿಸಿದರೆ, ಪ್ರತಿ ಆವೃತ್ತಿಯಲ್ಲೂ ಸತತವಾಗಿ 400ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಡೆಲ್ಲಿ ಪಿಚ್ಗೆ ಅವರು ಸರಿ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರನ್ನು ನಮ್ಮ ತಂಡದಲ್ಲಿ ನೋಡಲು ತುಂಬಾ ಉತ್ಸುಕರಾಗಿದ್ದೇವೆ. ಅವರು ಸಹ ಅಷ್ಟೇ ಉತ್ಸುಕರಾಗಿದ್ದಾರೆ. ಅತ್ಯಂತ ಯುವ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದೇವೆ. ಕೆಎಲ್ ಮತ್ತು ಅಕ್ಷರ್ ಇಬ್ಬರೂ ಅವರನ್ನು ಮುನ್ನಡೆಸಲಿದ್ದಾರೆ, ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕೆಎಲ್ ಅನುಭವವು ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಡಿಸಿ ಹರಾಜಿನಲ್ಲಿ ಈವರೆಗೂ ಖರೀದಿಸಿದ ಆಟಗಾರರು: ಮಿಚೆಲ್ ಸ್ಟಾರ್ಕ್ (11.75 ಕೋಟಿ), ಕೆಎಲ್ ರಾಹುಲ್ (14 ಕೋಟಿ), ಹ್ಯಾರಿ ಬ್ರೂಕ್ (6.25 ಕೋಟಿ), ಜೇಕ್ ಫ್ರೇಸರ್-ಮೆಕ್‌ಗರ್ಕ್ (9 ಕೋಟಿ), ಟಿ.ನಟರಾಜನ್ (10.75 ಕೋಟಿ), ಕರುಣ್ ನಾಯರ್ (50 ಲಕ್ಷ), ಸಮೀರ್ ರಿಜ್ವಿ (95 ಲಕ್ಷ), ಅಶುತೋಷ್ ಶರ್ಮಾ (3.80 ಕೋಟಿ), ಮೋಹಿತ್ ಶರ್ಮಾ (2.20 ಕೋಟಿ), ಫಾಫ್ ಡು ಪ್ಲೆಸಿಸ್ (2 ಕೋಟಿ), ಮುಕೇಶ್ ಕುಮಾರ್ (8 ಕೋಟಿ), ದರ್ಶನ್ ನಲ್ಕಂಡೆ (30 ಲಕ್ಷ), ದುಷ್ಮಂತಾ ಚಮೀರಾ (75 ಲಕ್ಷ), ವಿಪ್ರಜ್ ನಿಗಮ್ (50 ಲಕ್ಷ)
ಡಿಸಿ ರಿಟೈನ್ ಮಾಡಿಕೊಂಡ ಆಟಗಾರರು: ಅಕ್ಷರ್ ಪಟೇಲ್ (16.5 ಕೋಟಿ), ಕುಲ್ದೀಪ್ ಯಾದವ್ (14.25 ಕೋಟಿ), ಟ್ರಿಸ್ಟಾನ್ ಸ್ಟಬ್ಸ್ (10 ಕೋಟಿ), ಅಭಿಷೇಕ್ ಪೋರೆಲ್ (4 ಕೋಟಿ)