logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ವಿರುದ್ಧದ ಸರಣಿಗೆ ನಿರ್ಲಕ್ಷ್ಯ; ಆ ಪ್ರತಿಭಾವಂತ ವೇಗಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಬೇಕು ಎಂದ ದಿನೇಶ್‌ ಕಾರ್ತಿಕ್

ಬಾಂಗ್ಲಾದೇಶ ವಿರುದ್ಧದ ಸರಣಿಗೆ ನಿರ್ಲಕ್ಷ್ಯ; ಆ ಪ್ರತಿಭಾವಂತ ವೇಗಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಬೇಕು ಎಂದ ದಿನೇಶ್‌ ಕಾರ್ತಿಕ್

Jayaraj HT Kannada

Sep 13, 2024 08:40 PM IST

google News

ಹರ್ಷಿತ್‌ ರಾಣಾ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಬೇಕು ಎಂದ ದಿನೇಶ್‌ ಕಾರ್ತಿಕ್

    • ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದ ವೇಗದ ಬೌಲರ್‌, ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೂ ಆಯ್ಕೆಯಾಗಬೇಕಿತ್ತು ಎಂದು ದಿನೇಶ್‌ ಕಾರ್ತಿಕ್‌ ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಅವರು ಬೇಕು ಎಂದು ಆರ್‌ಸಿಬಿ ಮಾಜಿ ಆಟಗಾರ ತಿಳಿಸಿದ್ದಾರೆ.
ಹರ್ಷಿತ್‌ ರಾಣಾ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಬೇಕು ಎಂದ ದಿನೇಶ್‌ ಕಾರ್ತಿಕ್
ಹರ್ಷಿತ್‌ ರಾಣಾ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಬೇಕು ಎಂದ ದಿನೇಶ್‌ ಕಾರ್ತಿಕ್ (PTI)

ಬಾಂಗ್ಲಾದೇಶ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ಭಾರತೀಯ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಲಾಗಿದೆ. ಯುವ ಆಟಗಾರರೊಂದಿಗೆ ಪ್ರಬಲ ಆಟಗಾರರನ್ನು ಆಯ್ಕೆ ಮಾಡಿದ್ದು, ಭಾರತದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ದಿನೇಶ್ ಕಾರ್ತಿಕ್ ಬಿಸಿಸಿಐ ಆಯ್ಕೆ ಸಮಿತಿಯ ಆಯ್ಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಆರ್‌ಸಿಬಿ ವೇಗಿ ಯಶ್ ದಯಾಳ್ ಬದಲಿಗೆ ಅಥವಾ ಅವರೊಂದಿಗೆ ಮತ್ತೊಬ್ಬ ವೇಗದ ಬೌಲರ್‌ಗೆ ಸ್ಥಾನ ಸಿಗದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.  

ಸುದ್ದಿಸಂಸ್ಥೆ ಕ್ರಿಕ್‌ಬಜ್‌ ಜೊತೆಗೆ ಮಾತನಾಡಿದ ಆರ್‌ಸಿಬಿ ಮಾಜಿ ಆಟಗಾರ ಕಾರ್ತಿಕ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ ಅವರನ್ನು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಆಯ್ಕೆ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಾರ ನಡೆದ ದುಲೀಪ್ ಟ್ರೋಫಿಯ ಆರಂಭಿಕ ಸುತ್ತಿನಲ್ಲಿ ಬಲಗೈ ವೇಗಿ ನೀಡಿದ ಅಮೋಘ ಪ್ರದರ್ಶನದ ಆಧಾರದಲ್ಲಿ ಕಾರ್ತಿಕ್ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಿ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಡಿ ಪರ ಹರ್ಷಿತ್‌ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸಿದ್ದರು.

“ಭಾರತ ಟೆಸ್ಟ್‌ ತಂಡಕ್ಕೆ ಹರ್ಷಿತ್‌ ಆಯ್ಕೆಯಾಗಬಹುದು ಎಂದು ನಾನು ಯೋಚಿಸಿದ್ದೆ. ಏಕೆಂದರೆ ಆತ ಉತ್ತಮವಾಗಿ ಬೌಲಿಂಗ್ ಮಾಡಿದ್ದ ಎಂದು ನನಗನಿಸಿತು. ಆದರೆ ಭಾರತ ತಂಡವು ಈಗಾಗಲೇ ನಾಲ್ಕು ಉತ್ತಮ ಮಧ್ಯಮ ವೇಗಿಗಳನ್ನು ಹೊಂದಿದೆ,” ಎಂದು ಅವರು ಹೇಳಿದರು.

ಕೆಕೆಆರ್‌ ಪರ ಮಿಂಚಿನ ಪ್ರದರ್ಶನ

ಈ ವರ್ಷದ ಜುಲೈನಲ್ಲಿ ನಡೆದ ಐಪಿಎಲ್‌ ಪಂದ್ಯಾವಳಿಯಲ್ಲಿ ಹರ್ಷಿತ್ ಕೆಕೆಆರ್ ಪರ ಅವಿಸ್ಮರಣೀಯ ಪ್ರದರ್ಶನ ನೀಡಿದ್ದರು. ತಂಡವು ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಶಸ್ವಿ ಐಪಿಎಲ್‌ ಅಭಿಯಾನದ ಬೆನ್ನಲ್ಲೇ ಭಾರತ ತಂಡಕ್ಕೆ ಆಯ್ಕೆಯಾದರು. ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ ಆಡಿ 19 ವಿಕೆಟ್‌ ಕಬಳಿಸಿದ್ದರು. ಇದು ಅನ್‌ಕ್ಯಾಪ್ಡ್ ಬೌಲರ್‌ ಕಬಳಿಸಿದ ಅತಿ ಹೆಚ್ಚು ವಿಕೆಟ್‌. ಒಟ್ಟಾರೆಯಾಗಿ ಐದನೇ ಅತಿ ಹೆಚ್ಚು ವಿಕೆಟ್ ಸಾಧನೆ.

ಬಾರ್ಡರ್-ಗವಾಸ್ಕರ್ ಸರಣಿಗೆ ಹರ್ಷಿತ್ ರಾಣಾ?

ಆಯ್ಕೆ ಸಮಿತಿಯ ಮುಖ್ಯಸ್ಥ ಅಗರ್ಕರ್ ಮತ್ತು ಬಳಗವು ಹರ್ಷಿತ್ ಅವರನ್ನು ಪರಿಗಣಿಸಬೇಕು ಎಂಬುದು ಕಾರ್ತಿಕ್ ಅವರ ಲೆಕ್ಕಾಚಾರ. ಸದ್ಯ ತಂಡದ ಆಯ್ಕೆಯಾಗಿದ್ದು, ಮತ್ತೆ ಎರಡನೇ ಟೆಸ್ಟ್‌ ತಂಡ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು. ಹರ್ಷಿತ್‌ ಅವರನ್ನು ಟೆಸ್ಟ್‌ ತಂಡಕ್ಕೆ ಸೆಲೆಕ್ಟ್‌ ಮಾಡಿದರೆ, ಅವರು ಆಸ್ಟ್ರೇಲಿಯಾದಲ್ಲಿ ಅಬ್ಬರಿಸಬಹುದು ಎಂಬುದು ಡಿಕೆ ಅಭಿಪ್ರಾಯ.

“ಹರ್ಷಿತ್ ರಾಣಾ ವಿಶೇಷ ಕೌಶಲ್ಯಗಳನ್ನು ಹೊಂದಿದ್ದಾರೆ. ಅವರು ಪ್ರತಿಭಾವಂತ ವೇಗದ ಬೌಲರ್. ಅವರನ್ನು ಬಾರ್ಡರ್‌ ಗವಾಸ್ಕರ್‌ ಟ್ರೋಫಿಗಾಗಿ ಆಸ್ಟ್ರೇಲಿಯಾಗೆ ಕರೆದೊಯ್ಯಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅವರು ಅಲ್ಲಿ ನಿಜಕ್ಕೂ ಪರಿಣಾಮಕಾರಿ ಪ್ರದರ್ಶನ ನೀಡಬಲ್ಲರು,” ಎಂದು ಡಿಕೆ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ