ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಬೆಂಕಿ ಚೆಂಡು; ಜೈಹೋ ಭಾರತ ಎಂದ ಡಿಕೆ ಶಿವಕುಮಾರ್
Sep 18, 2023 04:06 PM IST
ಮೊಹಮ್ಮದ್ ಸಿರಾಜ್ ಸಾಧನೆಯನ್ನು ಕೊಂಡಾಡಿದ ಡಿಕೆ ಶಿವಕುಮಾರ್.
- DK Shivakumar-Mohammed Siraj: ಟೀಮ್ ಇಂಡಿಯಾ ಮುಂದಿನ ಹಾದಿಯೂ ಹೀಗೆಯೇ ಮುಂದುವರೆಯಲಿ ಎಂದೂ ಕೂಡ ಶುಭಕೋರಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಪೋಸ್ಟ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ (Asia Cup 2023) ಟೀಮ್ ಇಂಡಿಯಾ (India vs Sri Lanka) ಭರ್ಜರಿ ಗೆಲುವು ದಾಖಲಿಸಿತು. ಮೊಹಮ್ಮದ್ ಸಿರಾಜ್ (Mohammed Siraj) ಕರಾರುವಾಕ್ ದಾಳಿಗೆ ಮಂಕಾದ ಶ್ರೀಲಂಕಾ ಸುಲಭಕ್ಕೆ ಶರಣಾಯಿತು. 10 ವಿಕೆಟ್ಗಳಿಂದ ಲಂಕಾವನ್ನು ಮಣಿಸಿದ ಭಾರತ 8ನೇ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿತು. ಮೂರೇ ಗಂಟೆಯಲ್ಲಿ ಮುಕ್ತಾಯಗೊಂಡ ಈ ಪಂದ್ಯದಲ್ಲಿ ಶ್ರೀಲಂಕಾ 50 ರನ್ಗಳಿಗೆ ಆಲೌಟ್ ಆಗಿತ್ತು. ಭಾರತ 6.1 ಓವರ್‌ಗಳಲ್ಲಿ ಗೆದ್ದು ದಾಖಲೆ ಬರೆಯಿತು.
ಫೈನಲ್ನಲ್ಲಿ ಪ್ರಚಂಡ ಬೌಲಿಂಗ್ ಪ್ರದರ್ಶನ ತೋರಿದ ಸಿರಾಜ್, 7 ಓವರ್‌ಗಳಲ್ಲಿ 1 ಮೇಡನ್ ಸಹಿತ 21 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆಯುವ ಮೂಲಕ ಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಹಲವು ದಾಖಲೆಗಳನ್ನೂ ನಿರ್ಮಿಸಿದರು. ಇಡೀ ಕ್ರಿಕೆಟ್ ಜಗತ್ತೇ ಸಿರಾಜ್ ಸಾಧನೆಯನ್ನು ಕೊಂಡಾಡುತ್ತಿದೆ. ಈ ಕುರಿತು ಕರ್ನಾಟಕದದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (Deputy Chief Minister DK Shivakumar) ಕೂಡ ಸಿರಾಜ್ರ ಅದ್ಭುತ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮೊಹಮ್ಮದ್ ಸಿರಾಜ್ ಮತ್ತು ಭಾರತ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, ಟೀಮ್ ಇಂಡಿಯಾ ಮುಂದಿನ ಹಾದಿಯೂ ಹೀಗೆಯೇ ಮುಂದುವರೆಯಲಿ ಎಂದೂ ಕೂಡ ಶುಭಕೋರಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಪೋಸ್ಟ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಡಿಕೆ ಶಿವಕುಮಾರ್ ಪೋಸ್ಟ್ ಹೀಗಿದೆ...
ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು. ಏಷ್ಯಾಕಪ್ ಫೈನಲ್ಸ್ನಲ್ಲಿ ಶ್ರೀಲಂಕಾ ಪಡೆ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ ಹೃದಯಪೂರ್ವಕ ಶುಭಾಶಯಗಳು. 6 ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ದಾಳಿ ಕಂಡು ಬೆರಗಾದೆ. ಟೀಮ್ ಇಂಡಿಯಾ ಕಲಿಗಳ ಗೆಲುವಿನ ನಾಗಾಲೋಟ ಹೀಗೇ ಮುಂದುವರಿಯಲಿ. ಜೈಹೋ ಟೀಮ್ ಇಂಡಿಯಾ ಎಂದು ಪೋಸ್ಟ್ ಮಾಡಿದ್ದಾರೆ. #AsiaCup2023 ಎಂದು ಹ್ಯಾಷ್ ಟ್ಯಾಗ್ಕೂಡ ಹಾಕಿದ್ದಾರೆ.
8ನೇ ಏಷ್ಯಾಕಪ್ ಗೆದ್ದ ಭಾರತ
ಕೊಲೊಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ ಜರುಗಿದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು, ಶ್ರೀಲಂಕಾ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ 8ನೇ ಬಾರಿಗೆ ಏಷ್ಯಾಕಪ್ ಕಿರೀಟಕ್ಕೆ ಮುತ್ತಿಕ್ಕಿತು. ಈ ಹಿಂದೆ 1984, 1988, 1991, 1995, 2010, 2016, 2018ರಲ್ಲಿ ಭಾರತ ಏಷ್ಯಾಕಪ್ ಚಾಂಪಿಯನ್ ಆಗಿತ್ತು. ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ತಲಾ 2 ಏಷ್ಯಾಕಪ್ ಪ್ರಶಸ್ತಿಗಳನ್ನು ಭಾರತ ಗೆದ್ದುಕೊಂಡಿದೆ.