ವಿರಾಟ್ ಕೊಹ್ಲಿಯೊಂದಿಗೆ ವಿಶ್ವಕಪ್ ಗೆದ್ದ ಭಾರತದ ಮಾಜಿ ವೇಗಿ ಈಗ ಎಸ್‌ಬಿಐ ಉದ್ಯೋಗಿ; ನಿವೃತ್ತಿ ಬಳಿಕ ಹೊಸ ಬದುಕು
Dec 03, 2024 03:46 PM IST
ವಿರಾಟ್ ಕೊಹ್ಲಿಯೊಂದಿಗೆ ವಿಶ್ವಕಪ್ ಗೆದ್ದ ಭಾರತದ ಮಾಜಿ ವೇಗಿ ಈಗ ಎಸ್‌ಬಿಐ ಉದ್ಯೋಗಿಯಾಗಿದ್ದಾರೆ..
- ಭಾರತದ ಮಾಜಿ ವೇಗಿ ಕ್ರಿಕೆಟ್‌ಗೆ ವಿದಾಯ ಹೇಳಿ ಈಗ ಎಸ್‌ಬಿಐ ಉದ್ಯೋಗಿಯಾಗಿ ಕಚೇರಿ ಕೆಲಸಕ್ಕೆ ಹಾಜರಾಗಿದ್ದಾರೆ. ವಿರಾಟ್ ಕೊಹ್ಲಿ, ಎಂಎಸ್ ಧೊನಿ ಜೊತೆಗೆ ಆಡಿದ್ದ ಸಿದ್ಧಾರ್ಥ್ ಕೌಲ್, ಇದೀಗ ಬ್ಯಾಂಕಿಂಗ್ ಉದ್ಯೋಗಕ್ಕೆ ಜೈ ಎಂದಿದ್ದಾರೆ.
ಕ್ರಿಕೆಟಿಗರ ಸಂಪಾದನೆ ದೊಡ್ಡ ಮಟ್ಟದಲ್ಲಿರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟಿಗರು ತಮ್ಮ ಸಂಭಾವನೆ ಜೊತೆಗೆ ಜಾಹೀರಾತು ಒಪ್ಪಂದಗಳಿಂದಲೂ ಸಂಪಾದನೆ ಮಾಡುತ್ತಾರೆ. ಇದರ ಜೊತೆಗೆ ಹೆಚ್ಚಿನ ಕ್ರಿಕೆಟಿಗರು ಬ್ಯಾಕ್-ಅಪ್ ಉದ್ಯೋಗ ಅಥವಾ ತಮ್ಮದೇ ಬ್ಯುಸಿನೆಸ್ ನಡೆಸುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಭಾರತದಲ್ಲಿ ಸಾವಿರಾರು ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಅವರಲ್ಲಿ ಎಲ್ಲರಿಗೂ ಟೀಮ್ ಇಂಡಿಯಾ ಪರ ಅಥವಾ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುವುದಿಲ್ಲ. ಹೀಗಾಗಿ ಎಂಎಸ್ ಧೋನಿ, ಯಜ್ವೇಂದ್ರ ಚಾಹಲ್, ಹರ್ಭಜನ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರಂಥ ದಿಗ್ಗಜ ಕ್ರಿಕೆಟಿಗರು ಕೂಡಾ, ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಈ ಪಟ್ಟಿಯಲ್ಲಿ ಸಿದ್ಧಾರ್ಥ್ ಕೌಲ್ ಕೂಡ ಸೇರಿದ್ದಾರೆ. ಪಂಜಾಬ್‌ನ ಈ ಅನುಭವಿ ವೇಗಿ, ಇತ್ತೀಚೆಗೆ ದಿಢೀರ್ ನಿವೃತ್ತಿ ಘೋಷಿಸಿದರು. ಅದರ ಬೆನ್ನಲ್ಲೇ ಇದೀಗ ಚಂಡೀಗಢದ ಸೆಕ್ಟರ್ 17 ಶಾಖೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮತ್ತೆ ಉದ್ಯೋಗಕ್ಕೆ ಮರಳಿದ್ದಾರೆ. ಕೌಲ್ 2017ರಿಂದ ಎಸ್‌ಬಿಐ ಉದ್ಯೋಗಿಯಾಗಿದ್ದಾರೆ. ಟೀಮ್ ಇಂಡಿಯಾ ಪದಾರ್ಪಣೆ ಮಾಡುವ ಮೊದಲು, ಅವರು 2020ರಲ್ಲಿ ಬಡ್ತಿಯನ್ನೂ ಪಡೆದಿದ್ದರು. ಆದರೆ, ಸರಿಯಾಗಿ ಕೆಲಸಲ್ಲಿ ತೊಡಗಿಕೊಳ್ಳಲು ಆಗಿರಲಿಲ್ಲ.
ಇದೀಗ ಕ್ರಿಕೆಟ್ ವೃತ್ತಿಜೀವನವು ಮೊದಲಿನಂತೆ ಸಕ್ರಿಯವಾಗಿಲ್ಲದ ಕಾರಣ, ಅವರು ನಿವೃತ್ತಿ ಘೋಷಿಸಿದರು. ಈಗ ಮತ್ತೆ ಆಫೀಸ್ ಕೆಲಸಕ್ಕೆ ಸಮಯವಾಗಿದ್ದು, ಬ್ಯಾಂಕ್‌ಗೆ ತೆರಳುತ್ತಿದ್ದಾರೆ.
ಕೌಲ್ 17 ವರ್ಷಗಳ ವೃತ್ತಿಜೀವನದಲ್ಲಿ 88 ಪ್ರಥಮ ದರ್ಜೆ ಪಂದ್ಯಗಳಿಂದ 297 ವಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ 2023-24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಲಿಸ್ಟ್-ಎ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರು ಕ್ರಮವಾಗಿ 188 ಮತ್ತು 145 ಪಂದ್ಯಗಳಿಂದ 199 ಮತ್ತು 182 ವಿಕೆಟ್ ಕಬಳಿಸಿದ್ದಾರೆ.
34 ವರ್ಷದ ಕೌಲ್, 16 ವರ್ಷಗಳ ಹಿಂದೆ 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಆಗ 10 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ, ಅವರು ಭಾರತ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಲು 10 ವರ್ಷಗಳ ಕಾಲ ಕಾಯಬೇಕಾಗಿತ್ತು. ದಿಗ್ಗಜ ಆಟಗಾರ ಎಂಎಸ್ ಧೋನಿಯಿಂದ ಟೀಮ್ ಇಂಡಿಯಾ ಕ್ಯಾಪ್ ಪಡೆದ ಕೌಲ್, ತಮ್ಮ ಕನಸನ್ನು ನನಸಾಗಿಸಿದರು. ಡಬ್ಲಿನ್‌ನ ಮಲಾಹೈಡ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಮುಗಿಸಿದರು. ಭಾರತದ ಪರ ತಲಾ 3 ಟಿ20 ಹಾಗೂ ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿ ಆಡಿರುವ ಕೌಲ್, ಒಟ್ಟು 51 ಐಪಿಎಲ್ ಪಂದ್ಯಗಳಿಂದ 58 ವಿಕೆಟ್ ಕಬಳಿಸಿದ್ದಾರೆ.