ಮಳೆಯೊಂದಿಗೆ ಅಡಿಲೇಡ್ ತಲುಪಿದ ಟೀಮ್ ಇಂಡಿಯಾ; ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೂ ವರುಣನ ಭೀತಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಳೆಯೊಂದಿಗೆ ಅಡಿಲೇಡ್ ತಲುಪಿದ ಟೀಮ್ ಇಂಡಿಯಾ; ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೂ ವರುಣನ ಭೀತಿ

ಮಳೆಯೊಂದಿಗೆ ಅಡಿಲೇಡ್ ತಲುಪಿದ ಟೀಮ್ ಇಂಡಿಯಾ; ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೂ ವರುಣನ ಭೀತಿ

ಪಿಂಕ್ ಬಾಲ್ ಟೆಸ್ಟ್‌ಗಾಗಿ ಭಾರತ ಕ್ರಿಕೆಟ್‌ ತಂಡ ಅಡಿಲೇಡ್‌ ತಲುಪಿದೆ. ಆದರೆ ನಗರವು ಮಳೆಯ ಸ್ವಾಗತ ಕೊಟ್ಟಿದೆ. ಡಿಸೆಂಬರ್‌ 6ರಂದು ಆರಂಭವಾಗಲಿರುವ ಪಂದ್ಯಕ್ಕೂ ಮಳೆಯ ಭೀತಿ ಇರುವುದಾಗಿ ಹವಾಮಾನ ಮುನ್ಸೂಚನೆ ಹೇಳುತ್ತಿದೆ.

ಮಳೆಯೊಂದಿಗೆ ಅಡಿಲೇಡ್ ತಲುಪಿದ ಟೀಮ್ ಇಂಡಿಯಾ; ಪಿಂಕ್ ಬಾಲ್ ಟೆಸ್ಟ್‌ಗೂ ವರುಣನ ಭೀತಿ
ಮಳೆಯೊಂದಿಗೆ ಅಡಿಲೇಡ್ ತಲುಪಿದ ಟೀಮ್ ಇಂಡಿಯಾ; ಪಿಂಕ್ ಬಾಲ್ ಟೆಸ್ಟ್‌ಗೂ ವರುಣನ ಭೀತಿ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲು ಅಡಿಲೇಡ್‌ಗೆ ತಲುಪಿದೆ. ಎರಡನೇ ಟೆಸ್ಟ್‌ ವಿಶೇಷವಾಗಿದ್ದು, ಇದು ಹಗಲು-ರಾತ್ರಿ ಪಿಂಕ್-ಬಾಲ್ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ಟೀಮ್‌ ಇಂಡಿಯಾ ಪಾಲಿಗೆ ಇದು ಕಠಿಣ ಸವಾಲು. ಅಡಿಲೇಡ್‌ನಲ್ಲಿ ಇದುವರೆಗೂ ಆಸ್ಟ್ರೇಲಿಯಾ ಎಂದಿಗೂ ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಸೋತಿಲ್ಲ. ಇದೇ ವೇಳೆ ಪಿಂಕ್-ಬಾಲ್ ಟೆಸ್ಟ್‌ನಲ್ಲಿಯೂ ಈ ಮೈದಾನದಲ್ಲಿ ಕಾಂಗರೂಗಳು ಮುಗ್ಗರಿಸಿಲ್ಲ. ಈ ವರ್ಷದ ಜನವರಿಯಲ್ಲಿ ಗಬ್ಬಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಐತಿಹಾಸಿಕ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾವನ್ನು ದಿಗ್ಭ್ರಮೆಗೊಳಿಸಿತ್ತು. ಇದು ತವರಿನ ಯಾವುದೇ ಮೈದಾನದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಕಾಂಗರೂಗಳ ಮೊದಲ ಸೋಲಾಗಿದೆ.

ಈ ಬಾರಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸುಲಭವಾಗಿ ಗೆದ್ದಿರುವ ಭಾರತಕ್ಕೆ ಎರಡನೇ ಟೆಸ್ಟ್‌ನಲ್ಲಿ ಆಸೀಸ್‌ ದಾಖಲೆಗಳನ್ನು ಮುರಿಯುವುದು ತುಸು ಕಷ್ಟದ ಕೆಲಸವಾಗಿದೆ. ಈ ನಡುವೆ ಪಂದ್ಯದ ದಿನ ಅಡಿಲೇಡ್‌ನಲ್ಲಿ ಮಳೆ ಬರುವ ಸಾಧ್ಯತೆಯೂ ಇದ್ದು, ಪಂದ್ಯದ ಗತಿಯನ್ನು ಬದಲಾಯಿಸಬಹುದು.

ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪ್ರೈಮ್‌ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಪಿಂಕ್ ಬಾಲ್ ಪಂದ್ಯವನ್ನು ಆಡಿದ ಭಾರತ, ಗೆಲುವು ಸಾಧಿಸಿತ್ತು. ಆ ಬಳಿಕ ಭಾರತೀಯ ಆಟಗಾರರು ಅಡಿಲೇಡ್‌ಗೆ ಬಂದಿದ್ದಾರೆ. ಈ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪೋಸ್ಟ್ ಮಾಡಿದೆ.‌ ಅಡಿಲೇಡ್‌ಗೆ ಆಟಗಾರರು ಆಗಮಿಸುತ್ತಿದ್ದಂತೆ ಮಳೆ ಸ್ವಾಗತಿಸುತ್ತದೆ.

ಎರಡನೇ ಟೆಸ್ಟ್‌ ಪಂದ್ಯವು ಡಿಸೆಂಬರ್ 6ರ ಶುಕ್ರವಾರ ಆರಂಭವಾಗುತ್ತಿದೆ. ಮೊದಲ ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

ಪರ್ತ್‌ ಬಳಿಕ ಅಡಿಲೇಡ್‌ನಲ್ಲಿ ದಾಖಲೆಗೆ ಸಜ್ಜು

ಭಾರತವು ತನ್ನ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಸರಣಿ ಗೆಲುವಿನೊಂದಿಗೆ ಮರಳಿತು. ಮೂರು ದಶಕಗಳಲ್ಲಿ ಗಬ್ಬಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತವರಿನ ತಂಡವನ್ನು ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಈ ಬಾರಿ ಮತ್ತೊಮ್ಮೆ ಗೆಲುವಿನೊಂದಿಗೆ ಪ್ರವಾಸ ಆರಂಭವಾಗಿದೆ. ಪರ್ತ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಅಡಿಲೇಡ್‌ನಲ್ಲಿ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿರುವ ಭಾರತ, ಮತ್ತೊಂದು ದಾಖಲೆ ನಿರ್ಮಾಣಕ್ಕೆ ಎದುರು ನೋಡುತ್ತಿದೆ.

ಅಡಿಲೇಡ್‌ನಲ್ಲಿ ಆಸೀಸ್‌ ಅಜೇಯ

ನವೆಂಬರ್ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಅಡಿಲೇಡ್‌ನಲ್ಲಿ ನಡೆದ ದೇಶದ ಮೊದಲ ಪಿಂಕ್-ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ ಮೂರು ವಿಕೆಟ್‌ಳಿಂದ ಗೆದ್ದಿತು. ಆ ನಂತರ ಬ್ರಿಸ್ಬೇನ್‌ನಲಿ 2016, 2019ರ ಜನವರಿ ಮತ್ತು ಈ ವರ್ಷದ ಜನವರಿಯಲ್ಲಿ ಪಿಂಕ್-ಬಾಲ್ ಟೆಸ್ಟ್ ನಡೆದಿದೆ. ಡಿಸೆಂಬರ್ 2019ರಲ್ಲಿ ಪರ್ತ್ ಒಮ್ಮೆ ಆತಿಥ್ಯ ವಹಿಸಿದೆ. ಈ ವರ್ಷದ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲುವವರೆಗೂ ಆಸ್ಟ್ರೇಲಿಯಾ ಆಡಿದ ಎಲ್ಲಾ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲೂ ಗೆದ್ದಿತ್ತು. ಭಾರತವು ಆಸ್ಟ್ರೇಲಿಯಾದಲ್ಲಿ ಒಂದು ಪಿಂಕ್-ಬಾಲ್ ಟೆಸ್ಟ್ ಆಡಿದೆ. ಕೊನೆಯ ಪ್ರವಾಸದಲ್ಲಿ ಭಾರತವು ಕೇವಲ 36 ರನ್‌ಗಳಿಗೆ ಆಲೌಟ್ ಆಗಿ ಎಂಟು ವಿಕೆಟ್‌ಗಳಿಂದ ಸೋತಿತ್ತು. ಆದರೆ, ಸರಣಿಯಲ್ಲಿ ಸೋಲಿನಿಂದ ಪುಟಿದೆದ್ದ ಭಾರತ, ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

Whats_app_banner