ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ಗೆ ಭರ್ಜರಿ ಗೆಲುವು; ಆರ್ಸಿಬಿಗೆ ಚಿಗುರಿತು ಪ್ಲೇಆಫ್ ಕನಸು
Mar 11, 2024 11:29 PM IST
ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ಗೆ ಭರ್ಜರಿ ಗೆಲುವು
- Gujarat Giants vs UP Warriorz : ಪ್ಲೇಆಫ್ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಅಮೋಘ ಗೆಲುವು ಸಾಧಿಸಿದೆ.
ಆಲ್ರೌಂಡರ್ ದೀಪ್ತಿ ಶರ್ಮಾ ಅವರ ಏಕಾಂಗಿ ಹೋರಾಟದ ನಡುವೆಯೂ ಯುಪಿ ವಾರಿಯರ್ಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವಿನ ಕುದುರೆ ಏರಲು ಸಾಧ್ಯವಾಗಲಿಲ್ಲ. ಪ್ಲೇಆಫ್ ದೃಷ್ಟಿಯಿಂದ ಮಹತ್ವ ಪಡೆದಿದ್ದ ಈ ಪಂದ್ಯದಲ್ಲಿ ಯುಪಿ ವಿರುದ್ಧ ಗುಜರಾತ್ ಜೈಂಟ್ಸ್ 8 ರನ್ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ನಾಕೌಟ್ ಪ್ರವೇಶಿಸುವ ಆಸೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಯುಪಿ ಸೋತರೂ ನಾಕೌಟ್ ರೇಸ್ನಿಂದ ಹಿಂದೆ ಬೀಳದಿದ್ದರೂ ಪ್ಲೇಆಫ್ ಪ್ರವೇಶಿಸಲು ಆರ್ಸಿಬಿಗೆ ಹೆಚ್ಚಿನ ಅವಕಾಶ ಇದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿರೀಕ್ಷೆಯಂತೆ ಉತ್ತಮ ಆರಂಭ ಪಡೆಯಿತು. ಯುಪಿ ಬೌಲರ್ಗಳಿಗೆ ಬೆಂಡೆತ್ತಿದ ಲಾರಾ ವೋಲ್ವಾರ್ಡ್ಟ್ 30 ಬಾಲ್ಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ ಭರ್ಜರಿ 43 ರನ್ ಕಲೆ ಹಾಕಿ ಔಟಾದರು. ಮತ್ತೊಂದೆಡೆ ಬೆತ್ ಮೂನಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.
ಆದರೆ ಲಾರಾ ಔಟಾದ ಬೆನ್ನಲ್ಲೇ ಗುಜರಾತ್ ಕುಸಿತ ಕಂಡಿತು. ಆಟಗಾರ್ತಿಯರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ದಯಾಲನ್ ಹೇಮಲತಾ 0, ಫೀಬಿ ಲಿಚ್ಫೀಲ್ಡ್ 4, ಆ್ಯಶ್ಲೆ ಗಾರ್ಡ್ನರ್ 15, ಭಾರತಿ ಫುಲ್ಮಾಲಿ 1, ಕ್ಯಾಥರಿನ್ ಬ್ರೈಸ್ 11, ತನುಜಾ ಕನ್ವರ್ 1, ಶಬ್ನಮ್ ಶಕೀಲ್ 0 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಆರಂಭಿಕ ಆಟಗಾರ್ತಿ ಬೆತ್ ಮೂನಿ ವಿಕೆಟ್ ಕಾಯ್ದುಕೊಂಡು ತಂಡದ ಸ್ಕೋರ್ ಹೆಚ್ಚಿಸಿದರು.
52 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 74 ರನ್ ಗಳಿಸಿದ ಬೆತ್ ಮೂನಿ, ಕೊನೆಯ ಓವರ್ನಲ್ಲಿ 5 ಬೌಂಡರಿ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಿಸಿದರು. ಯುಪಿಯ ಖಡಕ್ ಬೌಲಿಂಗ್ ನಡುವೆಯೂ ಏಕಾಂಗಿ ಹೋರಾಟ ನಡೆಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಕಾರಣರಾದರು. ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದರು. ಸೋಫಿ ಎಕ್ಲೆಸ್ಟೊನ್ 3, ದೀಪ್ತಿ 2 ವಿಕೆಟ್ ಪಡೆದರು.
ಗೆಲುವಿಗಾಗಿ ಹೋರಾಡಿದ ದೀಪ್ತಿ ಶರ್ಮಾ
ಈ ಗುರಿ ಹಿಂಬಾಲಿಸಿದ ಯುಪಿ, ಅನಿರೀಕ್ಷಿತ ಎಂಬಂತೆ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಕೇವಲ 35 ರನ್ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಬ್ನಮ್ ಶಕೀಲ್ ದಾಳಿಗೆ ನಡುಗಿದ ಯುಪಿ, ಬೇಗನೇ 5 ವಿಕೆಟ್ಗಳನ್ನು ಕಳೆದುಕೊಂಡಿತು. ಅಲ್ಲದೆ, ಪವರ್ಪ್ಲೇನಲ್ಲೇ 3 ವಿಕೆಟ್ ಪಡೆದ ಶಕೀಲ್ಗೆ ಆ್ಯಶ್ಲೆ ಗಾರ್ಡ್ನರ್ ಮತ್ತು ಕ್ಯಾಥರಿನ್ ಬ್ರೈಸ್ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.
ಅಲೀಸ್ಸಾ ಹೀಲಿ 4, ಚಾಮರಿ ಅಥಾಪತ್ತು 0, ಕಿರಣ್ ನವ್ಗಿರೆ 0, ಗ್ರೇಸ್ ಹ್ಯಾರಿಸ್ 1, ಶ್ವೇತಾ ಸೆಹ್ರಾವತ್ 8 ರನ್ ಗಳಿಸಿ ಔಟಾದರು. ಆದರೆ ಸಂಕಷ್ಟದಲ್ಲಿದ್ದ ತಂಡಕ್ಕೆ ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಆಸರೆಯಾದರು. ಈ ಜೋಡಿ ಅಜೇಯ 109 ರನ್ಗಳ ಪಾಲುದಾರಿಕೆ ನೀಡಿತು. ಆರಂಭದಲ್ಲಿ ಅಬ್ಬರಿಸಿದ್ದ ಬೌಲರ್ಸ್ಗೆ ದೀಪ್ತಿ ಶರ್ಮಾ ಬೆಂಡೆತ್ತಿದರು. ತಂಡಕ್ಕೆ ಗೆಲುವು ತಂದುಕೊಡಲು ಶತಾಯಗತಾಯ ಹೋರಾಡಿದರು. ಈ ವೇಳೆ ವಿಕೆಟ್ ಪಡೆಯಲು ಬೌಲರ್ಸ್ ಸಹ ಪರದಾಡಿದರು.
60 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 88 ರನ್ ಬಾರಿಸಿದರು. ದೀಪ್ತಿಗೆ 36 ರನ್ ಗಳಿಸಿ ಸಾಥ್ ನೀಡಿದ ಪೂನಂ ಅವರು ಬ್ಯಾಟಿಂಗ್ನಲ್ಲಿ ಇನ್ನಷ್ಟು ವೇಗ ಪಡೆದುಕೊಂಡಿದ್ದರೆ, ಗೆಲುವು ಯುಪಿ ಪಾಲಾಗುತ್ತಿತ್ತು. ಕೊನೆಯ ಓವರ್ನಲ್ಲಿ ವಾರಿಯರ್ಸ್ ಗೆಲುವಿಗೆ 26 ರನ್ ಬೇಕಿತ್ತು. ಗೆಲುವಿಗಾಗಿ ತನ್ನ ಪ್ರಯತ್ನ ನಿಲ್ಲಿಸಿದ ದೀಪ್ತಿ 17 ರನ್ ಚಚ್ಚಿದರು. ಆದರೆ 8 ರನ್ಗಳಿಂದ ಸೋಲು ಕಾಣಬೇಕಾಯಿತು.
ಪ್ಲೇಆಫ್ ಲೆಕ್ಕಾಚಾರ ಹೇಗಿದೆ
ಪ್ಲೇಆಫ್ಗೆ ಪ್ರವೇಶಿಸಲು ಮೂರು ತಂಡಗಳ ನಡುವೆ ಪೈಪೋಟಿ ಮುಂದುವರೆದಿದೆ. ಆದರೆ, ಯುಪಿ ತನ್ನ ಪಂದ್ಯಗಳ ಖೋಟಾ ಮುಗಿಸಿದ್ದರೆ, ರೇಸ್ನಲ್ಲಿರುವ ಆರ್ಸಿಬಿ ಮತ್ತು ಗುಜರಾತ್ ಇನ್ನೂ ಒಂದು ಪಂದ್ಯವನ್ನಾಡಲಿವೆ. ಆದರೆ ಆರ್ಸಿಬಿ ಮತ್ತು ಯುಪಿ ತಲಾ 6 ಅಂಕ ಪಡೆದಿದ್ದರೆ, ಗುಜರಾತ್ 4 ಅಂಕ ಪಡೆದಿದೆ. ಒಂದು ವೇಳೆ ಆರ್ಸಿಬಿ ಸೋತು, ಗುಜರಾತ್ ಗೆದ್ದರೆ ಆಗ ಮೂರು ತಂಡಗಳು ಸಹ 6 ಅಂಕ ಪಡೆಯಲಿದ್ದು, ಆಗ ಉತ್ತಮ ನೆಟ್ರನ್ ರೇಟ್ ಇರುವ ತಂಡವು ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ ಆರ್ಸಿಬಿ ಗೆದ್ದರೆ ಯಾವುದೇ ಪೈಪೋಟಿ ಇಲ್ಲದೆ 8 ಅಂಕಗಳೊಂದಿಗೆ ನಾಕೌಟ್ ತಲುಪಲಿದೆ. ಹೆಚ್ಚಿನ ಸಾಧ್ಯತೆ ಆರ್ಸಿಬಿಗೆ ಇದೆ.