logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ಕ್ರಿಕೆಟ್​ನಲ್ಲಿ 5ನೇ ಶತಕ ಸಿಡಿಸಿ ರೋಹಿತ್​ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್​ವೆಲ್​

ಟಿ20 ಕ್ರಿಕೆಟ್​ನಲ್ಲಿ 5ನೇ ಶತಕ ಸಿಡಿಸಿ ರೋಹಿತ್​ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್​ವೆಲ್​

Prasanna Kumar P N HT Kannada

Feb 11, 2024 07:29 PM IST

google News

ರೋಹಿತ್​ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್​ವೆಲ್​

    • Glenn Maxwell : ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟಿ20 ಕ್ರಿಕೆಟ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್​ವೆಲ್​, ರೋಹಿತ್​ ಶರ್ಮಾ ಅವರ ಟಿ20 ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ರೋಹಿತ್​ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್​ವೆಲ್​
ರೋಹಿತ್​ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್​ವೆಲ್​

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರು ತಮ್ಮ 5ನೇ ಟಿ20ಐ ಶತಕ ಗಳಿಸುವ ಮೂಲಕ ಭಾನುವಾರ (ಫೆಬ್ರವರಿ 11) ಚುಟುಕು ಕ್ರಿಕೆಟ್​​ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ 2ನೇ ಟಿ20ಐ ಪಂದ್ಯದಲ್ಲಿ 35 ವರ್ಷದ ಆಸೀಸ್​ ಕ್ರಿಕೆಟಿಗ ಈ ಮೈಲಿಗಲ್ಲು ಸಾಧಿಸಿದರು.

ಅಡಿಲೇಡ್ ಓವಲ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್‌ವೆಲ್, ಅಬ್ಬರದ ಆಟವಾಡಿದರು. ವಿಂಡೀಸ್​ ಬೌಲರ್ಸ್​ಗೆ ಬೆಂಡೆತ್ತಿದ ಮ್ಯಾಕ್ಸಿ, ಕೇವಲ 55 ಎಸೆತಗಳಲ್ಲಿ ಸ್ಫೋಟಕ 120 ರನ್ ಗಳಿಸಿದರು. ಔಟಾಗದೆ ಉಳಿದ ಬಲಗೈ ಆಟಗಾರ​ 12 ಬೌಂಡರಿ, ಭರ್ಜರಿ 8 ಸಿಕ್ಸರ್‌ ಬಾರಿಸಿದ್ದು, ತಾನಾಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲಿ ಚಚ್ಚಿದ 2ನೇ ಶತಕ ಇದಾಗಿದೆ.

ರೋಹಿತ್ ದಾಖಲೆ ಸರಿಗಟ್ಟಿದ ಮ್ಯಾಕ್ಸ್​ವೆಲ್

2023ರ ನವೆಂಬರ್ 28ರಂದು ಭಾರತದ ವಿರುದ್ಧ ಗುವಾಹಟಿಯಲ್ಲಿ ನಡೆದ ತನ್ನ 100ನೇ ಟಿ20ಐನಲ್ಲಿ ಮ್ಯಾಕ್ಸ್‌ವೆಲ್ ಶತಕ ಚಚ್ಚಿದ್ದರು. ಅಂದು ಟಿ20ಐ ಕ್ರಿಕೆಟ್​​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ರೋಹಿತ್ ವಿಶ್ವ ದಾಖಲೆ ಸರಿಗಟ್ಟಿದ್ದರು. ಆದರೆ ರೋಹಿತ್ 2024ರ ಜ. 17ರಂದು ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ 5ನೇ ಅಂತಾರಾಷ್ಟ್ರೀಯ ಟಿ20ಐ ಶತಕ ದಾಖಲಿಸಿದ್ದರು. ಆ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಹೆಚ್ಚು ಸೆಂಚುರಿ ಸಿಡಿಸಿದ ಆಟಗಾರ ಎನಿಸಿದರು.

ಇದೀಗ ಹಿಟ್​ಮ್ಯಾನ್ ದಾಖಲೆ ಸರಿಗಟ್ಟಿದ್ದಾರೆ. ವಿಂಡೀಸ್​ ವಿರುದ್ಧದ ಎರಡನೇ ಚುಟುಕು ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅಮೋಘ ಆಟವಾಡಿ ಮೂರಂಕಿ ದಾಟಿದರು. ಇದರೊಂದಿಗೆ ರೋಹಿತ್​ ಅವರ ವಿಶ್ವ ದಾಖಲೆ ಸಮಗೊಳಿಸಿದರು. ಸದ್ಯ ಮ್ಯಾಕ್ಸಿ ಖಾತೆಯಲ್ಲೂ 5 ಟಿ20 ಶತಕಗಳು ದಾಖಲಾಗಿದ್ದು, ರೋಹಿತ್​ ಜೊತೆ ಜಂಟಿ ದಾಖಲೆಗೆ ಪಾತ್ರರಾಗಿದ್ದಾರೆ. ಇವರಿಬ್ಬರ ನಂತರ ಸೂರ್ಯಕುಮಾರ್​ ಯಾದವ್ ಸ್ಥಾನ ಪಡೆದಿದ್ದಾರೆ.

ವಿಶ್ವದ ನಂಬರ್ 1 ಟಿ20ಐ ಬ್ಯಾಟರ್ ಸೂರ್ಯಕುಮಾರ್ ಯಾದವ್ ತನ್ನ ವೃತ್ತಿಜೀವನದಲ್ಲಿ 4 ಶತಕ ಸಿಡಿಸಿದ್ದಾರೆ. 2021ರ ಮಾರ್ಚ್​​​ನಲ್ಲಿ ಚುಟುಕು ಕ್ರಿಕೆಟ್​ಗೆ ಪದಾರ್ಪಣೆಗೈದ ನಂತರ ಭಾರತ ತಂಡದ ಪರ 60 ಟಿ20ಐ ಪಂದ್ಯಗಳಲ್ಲಿ ಸೂರ್ಯ, 45.55ರ ಬ್ಯಾಟಿಂಗ್​ ಸರಾಸರಿಯಲ್ಲಿ 2141 ರನ್ ಗಳಿಸಿದ್ದಾರೆ. 17 ಅರ್ಧಶತಕ, 4 ಶತಕಗಳು ಅವರ ಇನ್ನಿಂಗ್ಸ್​​ನಲ್ಲಿವೆ.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರು

ರೋಹಿತ್ ಶರ್ಮಾ - 5

ಗ್ಲೆನ್ ಮ್ಯಾಕ್ಸ್​ವೆಲ್ - 5

ಸೂರ್ಯಕುಮಾರ್​ - 4

ಸಬಾವೂನ್ ಡೇವಿಜಿ - 3

ಕಾಲಿನ್ ಮನ್ರೋ - 3

ಬಾಬರ್ ಅಜಮ್ - 3

ಆಸೀಸ್​ಗೆ ಭರ್ಜರಿ ಗೆಲುವು

ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಆಸ್ಟ್ರೇಲಿಯಾ 34 ರನ್​​ಗಳ ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 4 ವಿಕೆಟ್ ನಷ್ಟಕ್ಕೆ 241 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಮ್ಯಾಕ್ಸ್​ವೆಲ್​ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರು. ಈ ಗುರಿ ಬೆನ್ನಟ್ಟಿದ 20 ಓವರ್​​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 207 ರನ್​ ಗಳಿಸಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ