ಜೆರ್ಸಿ ನಂ 7 ಆಯ್ಕೆ ಮಾಡಿಕೊಂಡಿದ್ದೇಕೆಂದು ವಿವರಿಸಿದ ಎಂಎಸ್ ಧೊನಿ; ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ ಮಾಹಿ ಉತ್ತರ
MS Dhoni: ಟೀಮ್ ಇಂಡಿಯಾದ ಆಟಗಾರನಾಗಿ ಜರ್ಸಿ ಸಂಖ್ಯೆ 7 ಅನ್ನು ಧರಿಸಿದ್ದ ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಅದೇ ಸಂಖ್ಯೆಯನ್ನು ಧರಿಸುತ್ತಿದ್ದಾರೆ. ಆದರೆ ಈ ಜೆರ್ಸಿ ಸಂಖ್ಯೆ ಪಡೆದಿದ್ದರ ಹಿಂದಿರುವ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ವಿಶ್ವದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಮೂರು ಐಸಿಸಿ ಟ್ರೋಫಿ ಗೆದ್ದಿರುವ ಏಕೈಕ ನಾಯಕ ಕೂಡ ಹೌದು. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ಗೆದ್ದುಕೊಟ್ಟಿರುವ ಮಾಹಿ, ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಸಜ್ಜಾಗುತ್ತಿದ್ದಾರೆ. ಅವರು ಭರ್ಜರಿ ತಯಾರಿ ನಡೆಸುತ್ತಿರುವ ವಿಡಿಯೋ ಫೋಟೋಗಳು ಈಗಾಗಲೇ ನೆಟ್ಸ್ನಲ್ಲಿ ಸಂಚಲನ ಮೂಡಿಸಿವೆ.
ಐಪಿಎಲ್ಗೂ ಮುನ್ನ ಸಿದ್ಧತೆ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇಲ್ಲಿ ಒಬ್ಬ ನಾಯಕ ಏನೆಲ್ಲಾ ಗುಣಲಕ್ಷಣ ಹೊಂದಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದರು. ಅದೇ ರೀತಿ ಭಾರತದ ಮಾಜಿ ನಾಯಕ ತಮ್ಮ ಐಕಾನಿಕ್ ಜರ್ಸಿ ಸಂಖ್ಯೆ 7 ಅನ್ನು ಆಯ್ಕೆ ಹಿಂದಿರುವ ಮತ್ತು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದರ ಬಗ್ಗೆ ಹಾಸ್ಯಮಯವಾಗಿ ವಿವರಿಸಿದ್ದಾರೆ. ಈ ಉತ್ತರಕ್ಕೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕರು.
‘ನಾನು ಭೂಮಿಗೆ ಬರಲು ಪೋಷಕರು ನಿರ್ಧರಿಸಿದ್ರು’
ಇತ್ತೀಚಿನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ತಮ್ಮ ಜೆರ್ಸಿ ಸಂಖ್ಯೆಯಾಗಿ ನಂ.7 ಅನ್ನು ಆರಿಸಿಕೊಂಡಿದ್ದೇಕೆ ಎಂದು ಧೋನಿಗೆ ಪ್ರಶ್ನೆ ಕೇಳಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಅವರು ಸ್ಪಷ್ಟವಾದ ಆಯ್ಕೆಯನ್ನು ಹೇಗೆ ಮಾಡಿದರು ಎಂದು ವಿವರಿಸಿದ್ದಾರೆ. "ನಾನು ಭೂಮಿಗೆ ಬರಬೇಕೆಂದು ನನ್ನ ಪೋಷಕರು ನಿರ್ಧರಿಸಿದ ಸಮಯ ಅಥವಾ ದಿನ ಅದು. "ಆದ್ದರಿಂದ, ನಾನು ಜುಲೈ 7 ರಂದು ಜನಿಸಿದೆ" ಎಂದು ಧೋನಿ ಪ್ರಚಾರ ಕಾರ್ಯಕ್ರಮದಲ್ಲಿ ನಗುತ್ತಾ ಹೇಳಿದ್ದಾರೆ.
ನಾನು ಹುಟ್ಟಿದ್ದು 7ನೇ ತಿಂಗಳು. ಅಲ್ಲದೆ, ಜುಲೈ ಸಹ 7ನೇ ತಿಂಗಳು. ಹಾಗೆಯೇ 1981ರ ವರ್ಷ ನಾನು ಜನಿಸಿದ್ದೆ. ಕೊನೆಯ 81 ಅಂಕಿಗಳಲ್ಲಿ 8 ಅನ್ನು 1 ರಿಂದ ಕಳೆದರೆ 7 ಉತ್ತರ ಬರುತ್ತದೆ. ಹಾಗಾಗಿ ಜೆರ್ಸಿ ಕೊಡುವ ಸಮಯಲ್ಲಿ 'ಸರಿ, ನಿಮಗೆ ಯಾವ ಸಂಖ್ಯೆ ಬೇಕು' ಎಂದು ಕೇಳಿದಾಗ ಇದನ್ನೇ ಆಯ್ಕೆ ಮಾಡಿಕೊಳ್ಳುವುದು ಸುಲಭವಾಗಿತ್ತು ಎಂದು ಮಾಹಿ ಹೇಳಿದ್ದಾರೆ. 2023ರ ಡಿಸೆಂಬರ್ನಲ್ಲಿ ಜೆರ್ಸಿ 7ಕ್ಕೆ ಬಿಸಿಸಿಐನಿಂದ ಶಾಶ್ವತ ವಿದಾಯ ಹೇಳಲಾಗಿದೆ. ಅಂದರೆ ಮುಂಬರುವ ಕ್ರಿಕೆಟಿಗರು 7 ಸಂಖ್ಯೆಯ ಜೆರ್ಸಿ ತೊಡುವಂತಿಲ್ಲ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ನಾಯಕನಾಗಿ ಗೆಲುವಿನತ್ತ ಮುನ್ನಡೆಸಿದ್ದರು. ಅಲ್ಲದೆ, ಅವರು ಹೆಚ್ಚು ಏಳನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ನಡೆಸಿದ್ದೂ ಇದೆ. ಮೈದಾನದಲ್ಲಿ ಅವರ ಅದ್ಭುತ ಕೊಡುಗೆಗಳು ದೇಶಾದ್ಯಂತದ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿವೆ, ಅತ್ಯಂತ ಮೆಚ್ಚುಗೆ ಪಡೆದ ಕ್ರಿಕೆಟಿಗರಲ್ಲಿ ಒಬ್ಬರಾಗಿ ಅವರ ಸ್ಥಾನಮಾನ ಗಟ್ಟಿಗೊಳಿಸಿದೆ.
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್ ಧೋನಿ, ನಾಯಕನಾಗಿ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ ವೈಟ್-ಬಾಲ್ ಸ್ವರೂಪದಲ್ಲಿ ದಂತಕಥೆಗಳಲ್ಲಿ ಒಬ್ಬರಾಗಿ ಎದ್ದು ಕಾಣುತ್ತಾರೆ. 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 50.57ರ ಸರಾಸರಿ ಹಾಗೂ 87.56ರ ಸ್ಟ್ರೈಕ್ ರೇಟ್ನೊಂದಿಗೆ 10,773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಮತ್ತು 73 ಅರ್ಧಶತಕಗಳು ಸೇರಿವೆ.
ಇದಲ್ಲದೆ, 90 ಟೆಸ್ಟ್ ಪಂದ್ಯಗಳು ಮತ್ತು 98 ಟಿ 20 ಪಂದ್ಯಗಳಲ್ಲಿ ಅವರು ಕ್ರಮವಾಗಿ 4,876 ಮತ್ತು 1,617 ರನ್ ಗಳಿಸಿದ್ದಾರೆ. ಧೋನಿ ಅವರ ನಾಯಕತ್ವದ ಕೌಶಲ್ಯವು 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು ನಾಯಕನಾಗಿ ಅವರ ಅಧಿಕಾರಾವಧಿಯನ್ನು ಮತ್ತೊಂದು ಐಸಿಸಿ ಪ್ರಶಸ್ತಿಯೊಂದಿಗೆ ಕೊನೆಗೊಳಿಸಿತು.