logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಕಲಚೇತನರಿಗೆ ಅಪಹಾಸ್ಯ ಮಾಡಿದ ಆರೋಪ; ಪೊಲೀಸ್‌ ದೂರು ಬೆನ್ನಲ್ಲೇ ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್

ವಿಕಲಚೇತನರಿಗೆ ಅಪಹಾಸ್ಯ ಮಾಡಿದ ಆರೋಪ; ಪೊಲೀಸ್‌ ದೂರು ಬೆನ್ನಲ್ಲೇ ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್

Jayaraj HT Kannada

Jul 16, 2024 02:38 PM IST

google News

ಪೊಲೀಸ್‌ ದೂರು ಬೆನ್ನಲ್ಲೇ ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್

    • ಯುವರಾಜ್ ಸಿಂಗ್, ಸುರೇಶ್‌ ರೈನಾ ಹಾಗೂ ಹರ್ಭಜನ್ ಸಿಂಗ್ ವಿರುದ್ಧ ವಿಕಲಚೇತನರ ಹಕ್ಕುಗಳ ಸಂಘಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಹರ್ಭಜನ್ ಕ್ಷಮೆಯಾಚಿಸಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ಪೊಲೀಸ್‌ ದೂರು ಬೆನ್ನಲ್ಲೇ ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್
ಪೊಲೀಸ್‌ ದೂರು ಬೆನ್ನಲ್ಲೇ ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್

ವಿಡಿಯೋ ಮೂಲಕ ವಿಕಲ ಚೇತನರನ್ನು ಅಪಹಾಸ್ಯ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಭಾರತ ಚಾಂಪಿಯನ್ಸ್ ತಂಡದ ಸದಸ್ಯ ಹರ್ಭಜನ್‌ ಸಿಂಗ್‌, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್‌ ಪಂದ್ಯದಲ್ಲಿ ಭಾರತ ಚಾಂಪಿಯನ್ಸ್ ತಂಡವು ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 5 ವಿಕೆಟ್‌ಳಿಂದ ಮಣಿಸಿದ ನಂತರ ಮಾಜಿ ಕ್ರಿಕೆಟಿಗರು ವಿಡಿಯೋ ಒಂದನ್ನು ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದು ವೈರಲ್ ಆಗಿ ಹಲವರ ಭಾವನೆಗಳಿಗೆ ಧಕ್ಕೆ ತಂದಿತ್ತು. ಕ್ಷಮೆಯಾಚನೆಗೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಹರ್ಭಜನ್ ಜೊತೆಗೆ ಕ್ರಿಕೆಟ್ ಐಕಾನ್‌ಗಳಾದ ಯುವರಾಜ್ ಸಿಂಗ್‌ ಮತ್ತು ರೈನಾ ಕೂಡಾ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ನಂತರ, ಈ ಮೂವರು ಕುಂಟುತ್ತಾ ಬೆನ್ನು ಬಾಗಿಸಿ ವಿಡಿಯೋ ಮಾಡಿದ್ದರು. ಇದು ಹಲವರ ವಿರೋಧಕ್ಕೆ ಕಾರಣವಾಗಿತ್ತು. ಇದು ವಿಕಲಚೇತನರಿಗೆ ಮಾಡಿದ ಅಪಹಾಸ್ಯ ಎಂದು ನೆಟ್ಟಿಗರು ಹೇಳಿದ್ದರು. ಇದಕ್ಕೆ ಸುದೀರ್ಘ ಸಂದೇಶದ ಮೂಲಕ ಹರ್ಭಜನ್ ಸ್ಪಷ್ಟನೆ ನೀಡಿದ್ದಾರೆ.

ಯಾರನ್ನೂ ನೋಯಿಸುವ ಉದ್ದೇಶ ನಮ್ಮದಲ್ಲ

“ಇಂಗ್ಲೆಂಡ್‌ನಲ್ಲಿ ಚಾಂಪಿಯನ್ ಶಿಪ್ ಗೆದ್ದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ತೌಬಾ ತೌಬಾ ವಿಡಿಯೊ ಬಗ್ಗೆ ದೂರು ನೀಡುತ್ತಿರುವವರಿಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನಾವು ಯಾರ ಭಾವನೆಗಳನ್ನು ನೋಯಿಸಲು ಬಯಸಲಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಮುದಾಯವನ್ನು ಗೌರವಿಸುತ್ತೇವೆ. ನಾವು 15 ದಿನಗಳ ಕಾಲ ಸತತ ಕ್ರಿಕೆಟ್ ಆಡಿದ ನಂತರ ನಮ್ಮ ದೇಹವನ್ನು ಪ್ರತಿಬಿಂಬಿಸಲು ಈ ವಿಡಿಯೊ ಮಾಡಿದ್ದೇವೆ. ನಾವು ಯಾರನ್ನೂ ಅವಮಾನಿಸಲು ಅಥವಾ ನೋಯಿಸಲು ಪ್ರಯತ್ನಿಸುತ್ತಿಲ್ಲ. ಆದರೂ ನಾವು ತಪ್ಪು ಮಾಡಿದ್ದೇವೆ ಎಂದು ಜನರು ಭಾವಿಸಿದರೆ, ನಾನು ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ. ದಯವಿಟ್ಟು ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ ಮುಂದೆ ಸಾಗೋಣ. ಎಲ್ಲರೂ ಸಂತೋಷ ಮತ್ತು ಆರೋಗ್ಯವಾಗಿರಿ,” ಎಂದು ಹರ್ಭಜನ್ ಸಂದೇಶದಲ್ಲಿ ಹೇಳಿದ್ದಾರೆ.

ಮೂವರು ಕ್ರಿಕೆಟಿಗ ವಿಡಿಯೋ ವೈರಲ್‌ ಆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿತ್ತು. ಹೀಗಾಗಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯು ಭಾರತದ ಮಾಜಿ ಕ್ರಿಕೆಟಿಗರ ನಡೆಯನ್ನು ಖಂಡಿಸಿದೆ.

ಪೊಲೀಸ್ ದೂರು ದಾಖಲು

ಘಟನೆ ಕುರಿತು ಮಾತನಾಡಿದ ಅಂಗವಿಕಲರ ಉದ್ಯೋಗ ಉತ್ತೇಜನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅರ್ಮಾನ್ ಅಲಿ, ಈ ವಿಡಿಯೊವನ್ನು ಗಮನಿಸುವಂತೆ ಬಿಸಿಸಿಐಗೆ ವಿನಂತಿಸಿದ್ದಾರೆ. “ಭಾರತದ ಅಗ್ರ ಕ್ರಿಕೆಟಿಗರು ಅಂಗವೈಕಲ್ಯವನ್ನು ಅಪಹಾಸ್ಯ ಮಾಡುವುದನ್ನು ನೋಡುವುದು ಅಸಹ್ಯಕರವಾಗಿದೆ. ಜನಸಮೂಹ ಆರಾಧಿಸುವಂಥಾ ಆಟಗಾರರು ಮಾಡಿರುವ ಈ ಕೆಲಸ ನಾಚಿಕೆಗೇಡಿನದ್ದು. ಅವರ ಈ ಕ್ರೂರ ನಡವಳಿಕೆಯಿಂದ ಅವರಿಗೆ ನಾಚಿಕೆಯಾಗಬೇಕು. ಬಿಸಿಸಿಐ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ,” ಎಂದು ಅವರು ಹೇಳಿದ್ದರು.‌ ಅಲ್ಲದೆ ಟೀಮ್ ಇಂಡಿಯಾದ ಮಾಜಿ ಆಟಗಾರರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ