ಸೂರ್ಯಕುಮಾರ್ ಯಾದವ್ ಅಲ್ಲ; ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ
Hardik Pandya: ಶ್ರೀಲಂಕಾ ವಿರುದ್ಧದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಈ ಕುರಿತು ಬಿಸಿಸಿಐ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಿ20 ವಿಶ್ವಕಪ್ ಹೀರೋ ಹಾಗೂ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಲಂಕಾ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಲು ಹಾರ್ದಿಕ್ ಹಾಗೂ ಸೂರ್ಯಕುಮಾರ್ ನಡುವೆ ಪ್ರಬಲ ಪೈಪೋಟಿ ಇತ್ತು. ಆದರೆ, ಚುಟುಕು ಸ್ವರೂಪದಲ್ಲಿ ಭಾರತ ತಂಡದ ಉಪನಾಯಕ ಆಗಿದ್ದ ಹಾರ್ದಿಕ್‌ಗೆ ನಾಯಕ ಸ್ಥಾನ ಸಿಕ್ಕಿದೆ. ರೋಹಿತ್ ಶರ್ಮಾ ಟಿ20 ಸ್ವರೂಪಕ್ಕೆ ವಿದಾಯ ಹೇಳಿರುವುದರಿಂದ ಮುಂದೆ ಹಾರ್ದಿಕ್ ನಾಯಕನಾಗಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.
ಪಾಂಡ್ಯ ಟಿ20 ಸ್ವರೂಪದಲ್ಲಿ ಮಾತ್ರ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ತಿಂಗಳು ಭಾರತದ ಟಿ20 ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಅವರು, ಮುಂದೆ ಆಗಸ್ಟ್‌ನಲ್ಲಿ ನಿಗದಿಯಾಗಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. "ವೈಯಕ್ತಿಕ ಕಾರಣ"ಗಳನ್ನು ತಿಳಿಸಿ ಅವರು ವಿರಾಮ ತೆಗೆದುಕೊಳ್ಳಲಿದ್ದಾರೆ.
“ರೋಹಿತ್ ಶರ್ಮಾ ನಾಯಕತ್ವದಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ಟಿ20 ತಂಡದ ಉಪನಾಯಕರಾಗಿದ್ದರು. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಲಭ್ಯವಿದ್ದಾರೆ. ಅಲ್ಲದೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿದೆ. ಜುಲೈ 27ರಿಂದ ಆರಂಭವಾಗಿ 30ರವರೆಗೆ ನಡೆಯಲಿದೆ. ಆ ಬಳಿಕ ಏಕದಿನ ಪಂದ್ಯಗಳು ಆಗಸ್ಟ್ 2ರಿಂದ 7ರವರೆಗೆ ರಾಜಧಾನಿ ಕೊಲಂಬೊದಲ್ಲಿ ನಡೆಯಲಿವೆ. ಸರಣಿಗೆ ತಂಡವನ್ನು ಮುಂದಿನ ಒಂದೆರಡು ದಿನಗಳೊಳಗೆ ಘೋಷಿಸುವ ನಿರೀಕ್ಷೆಯಿದೆ.
ತಂಡದ ಉಪನಾಯಕ ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಸ್ಥಾನಕ್ಕೆ ಶುಭ್ಮನ್ ಗಿಲ್ ಹೆಸರು ಮುಂಚೂಣಿಯಲ್ಲಿದೆ. ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ 4-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ ಗಿಲ್ ಅಥವಾ ಸೂರ್ಯಕುಮಾರ್ ಯಾದವ್ ಉಪನಾಯಕನಾಗುವ ಸಾಧ್ಯತೆ ಇದೆ.
ಭಾರತ vs ಶ್ರೀಲಂಕಾ ಟಿ20ಐ ಸರಣಿ ವೇಳಾಪಟ್ಟಿ
- ಜುಲೈ 27: 1ನೇ ಟಿ20, ಪಲ್ಲೆಕೆಲೆ
- ಜುಲೈ 28: 2ನೇ ಟಿ20, ಪಲ್ಲೆಕೆಲೆ
- ಜುಲೈ 30: 3ನೇ ಟಿ20 ಪಲ್ಲೆಕೆಲೆ
ಭಾರತ vs ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ
- ಆಗಸ್ಟ್ 2: 1ನೇ ಏಕದಿನ, ಕೊಲಂಬೊ
- ಆಗಸ್ಟ್ 4: 2ನೇ ಏಕದಿನ, ಕೊಲಂಬೊ
- ಆಗಸ್ಟ್ 7: 3ನೇ ಏಕದಿನ, ಕೊಲಂಬೊ
ಏಕದಿನ ಸರಣಿಯಿಂದ ಪಾಂಡ್ಯ ವಿರಾಮ ಕೇಳಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆದಿದ್ದಾರೆ. ಆದರೆ ಅವರಿಗೆ ಯಾವುದೇ ಫಿಟ್‌ನೆಸ್ ಸಮಸ್ಯೆ ಇಲ್ಲ ಎಂದು ಅಧಿಕಾರಿ ಹೇಳಿದರು. ಅತ್ತ ಏಕದಿನ ಪಂದ್ಯಗಳಿಗೆ ಕೆಎಲ್ ರಾಹುಲ್ ಮತ್ತು ಗಿಲ್ ನಾಯಕತ್ವಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ರಾಹುಲ್ ನಾಯಕತ್ವ ವಹಿಸಿದ್ದರು.
ಭಾರತ ಕ್ರಿಕೆಟ್ ತಂಡದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಶ್ರೀಲಂಕಾ vs ಭಾರತ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಈ ದಿನದಿಂದ ಟಿ20, ಏಕದಿನ ಸೀರೀಸ್ ಆರಂಭ