ಬಹುದೂರ ಇರುವ ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್; ಇದ್ಯಾಕೆ, ಏನಾಯ್ತು?
Nov 21, 2024 08:43 PM IST
ಬಹುದೂರ ಇರುವ ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್
- Hardik Pandya: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ 2025ರ ಮೊದಲ ಪಂದ್ಯಕ್ಕೆ ಬ್ಯಾನ್ ಆಗಿದ್ದಾರೆ. ಕಾರಣ ಏನಿರಬಹುದು? ಇಲ್ಲಿದೆ ವಿವರ.
ಐಸಿಸಿ ಟಿ20 ಕ್ರಿಕೆಟ್ ಶ್ರೇಯಾಂಕದಲ್ಲಿ ಮತ್ತೊಮ್ಮೆ ವಿಶ್ವದ ನಂಬರ್ 1 ಆಲ್‌ರೌಂಡರ್ ಪಟ್ಟಕ್ಕೇರಿರುವ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು 2025ರ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ನಲ್ಲೂ ನಾಯಕನಾಗಿ ಮುಂದುವರೆಯಲಿದ್ದಾರೆ. ಮುಂಬೈ ಇಂಡಿಯನ್ಸ್ ತಾನು ರಿಟೈನ್ ಮಾಡಿಕೊಂಡ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಸ್ಥಾನ ಪಡೆದ ನಂತರ ಮತ್ತೆ ನಾಯಕನಾಗುವುದು ಖಚಿತವಾಯಿತು. ಆದರೆ, ಟೂರ್ನಿ ಆರಂಭಕ್ಕೂ ಮುನ್ನ ಹಾರ್ದಿಕ್ ಬ್ಯಾನ್ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು 18ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯಕ್ಕೆ ನಿಷೇಧಕ್ಕೆ ಒಳಗಾಗಿದ್ದಾರೆ. ಒಂದು ಪಂದ್ಯದಿಂದ ಬ್ಯಾನ್ ಆಗುವ ಕಾರಣ ಸೂರ್ಯಕುಮಾರ್ ಯಾದವ್ ಅವರು ಮುಂಬೈ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ ಕೂಡ ಪ್ರಬಲ ಪೈಪೋಟಿಯಲ್ಲಿದ್ದಾರೆ. ಐಪಿಎಲ್ 2025ರ ಮುಂಬೈ ಮೊದಲ ಪಂದ್ಯದಿಂದ ಹಾರ್ದಿಕ್ರನ್ನು ನಿಷೇಧಿಸಿದ್ದೇಕೆ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಅವರನ್ನು ಒಂದು ವರ್ಷ ಮುಂಚಿತವಾಗಿಯೇ ಬಿಸಿಸಿಐ ನಿಷೇಧಿಸಿದ್ದೇಕೆ? ಇಲ್ಲಿದೆ ವಿವರ.
ಹಾರ್ದಿಕ್ ಪಾಂಡ್ಯ ಬ್ಯಾನ್ ಏಕೆ?
17ನೇ ಆವೃತ್ತಿಯ ಐಪಿಎಲ್ನಲ್ಲಿ ಮೂರು ಬಾರಿ ಸ್ಲೋ ಓವರ್ ರೇಟ್ ಕಾರಣ ಹಾರ್ದಿಕ್ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. ಈಗಾಗಲೇ ಮೂರು ಬಾರಿ ಈ ತಪ್ಪು ಎಸಗಿದ ಹಿನ್ನೆಲೆ ಮುಂಬರುವ ಐಪಿಎಲ್ನ ಮುಂಬೈ ಮೊದಲ ಪಂದ್ಯಕ್ಕೆ ಹಾರ್ದಿಕ್ ಬ್ಯಾನ್ ಆಗಲಿದ್ದಾರೆ. ನಿಗದಿತ ಅವಧಿಯಲ್ಲಿ ಓವರ್ಗಳನ್ನು ಮುಗಿಸದಿದ್ದರೆ ತಂಡದ ಆಟಗಾರರ ಜೊತೆಗೆ ನಾಯಕನಿಗೆ ಶಿಕ್ಷೆ ವಿಧಿಸಲಾಗುತ್ತದೆ. ಶಿಕ್ಷೆಗಳು ಹೆಚ್ಚಾದಂತೆ ದಂಡದ ಮೊತ್ತವೂ ದುಪ್ಪಾಟ್ಟಾಗುತ್ತದೆ. ಈ ಆವೃತ್ತಿಯಲ್ಲಿ ಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 3ನೇ ಬಾರಿಗೆ ನಿಗದಿತ ಅವಧಿಗೆ ಓವರ್ಗಳನ್ನು ಪೂರ್ಣಗೊಳಿಸಲು ವಿಫಲರಾಗಿದ್ದರು. ಹೀಗಾಗಿ ಹಾರ್ದಿಕ್ ಒಂದು ಪಂದ್ಯದ ನಿಷೇಧವನ್ನು ಪೂರೈಸಬೇಕಾಗಿದೆ.
ಮೊದಲ ಬಾರಿಗೆ ಸ್ಲೋ ಓವರ್ ರೇಟ್ಗೆ ಶಿಕ್ಷೆ: ನಾಯಕನಿಗೆ 12 ಲಕ್ಷ ರೂಪಾಯಿಗೆ ದಂಡ ವಿಧಿಸಲಾಗುತ್ತದೆ.
ಎರಡನೇ ಬಾರಿಗೆ ಸ್ಲೋ ಓವರ್ ರೇಟ್ಗೆ ಶಿಕ್ಷೆ: ನಾಯಕನಿಗೆ 24 ಲಕ್ಷ ರೂಪಾಯಿ ದಂಡ ಮತ್ತು ಉಳಿದ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. ಉಳಿದ ಆಟಗಾರರಿಗೆ ತಲಾ 12 ಲಕ್ಷ ದಂಡ ವಿಧಿಸಲಾಗುತ್ತದೆ.
ಮೂರನೇ ಬಾರಿಗೆ ಸ್ಲೋ ಓವರ್ ರೇಟ್ಗೆ ಶಿಕ್ಷೆ: ನಾಯಕ 30 ಲಕ್ಷ ರೂಪಾಯಿ ದಂಡ ಪಾವತಿಸಬೇಕು. ದಂಡದ ಜತೆಗೆ ನಾಯಕ ಒಂದು ಪಂದ್ಯ ಬ್ಯಾನ್ ಆಗಲಿದ್ದಾರೆ. ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. 'ಇಂಪ್ಯಾಕ್ಟ್ ಪ್ಲೇಯರ್' ಸೇರಿ 12 ಆಟಗಾರರಿಗೆ ವೈಯಕ್ತಿಕವಾಗಿ ತಲಾ ರೂ 12 ಲಕ್ಷ ಅಥವಾ ಅವರ ಆಯಾ ಪಂದ್ಯದ ಶೇಕಡಾ 50 ರಷ್ಟು ದಂಡ ವಿಧಿಸಲಾಗುತ್ತದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಳಪೆ ಪ್ರದರ್ಶನ
ಮುಂಬೈ ಇಂಡಿಯನ್ಸ್ 17ನೇ ಆವೃತ್ತಿಯ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ಗೆ ಪಟ್ಟ ಕಟ್ಟಿದ ಮುಂಬೈ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿತ್ತು. ಆದರೆ ಲೀಗ್ ಹಂತದಲ್ಲಿ ಕೊನೆಯ ಸ್ಥಾನದೊಂದಿಗೆ ಹೊರಬಿತ್ತು. ಮತ್ತೊಂದೆಡೆ ಹಾರ್ದಿಕ್ ಕೂಡ ಕಳಪೆ ಪ್ರದರ್ಶನ ನೀಡಿದರು. ಅವರು ಕೇವಲ 18.00 ಸರಾಸರಿ ಮತ್ತು 143.04 ಸ್ಟ್ರೈಕ್ ರೇಟ್‌ನಲ್ಲಿ 216 ರನ್ ಗಳಿಸಿದರು. ಬೌಲಿಂಗ್ನಲ್ಲಿ 10.75ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದರು.
ಮುಂಬೈ ಯಾರನ್ನೆಲ್ಲಾ ಉಳಿಸಿಕೊಂಡಿದೆ?
ರೋಹಿತ್ ಶರ್ಮಾ (16.30 ಕೋಟಿ), ಹಾರ್ದಿಕ್ ಪಾಂಡ್ಯ (16.35 ಕೋಟಿ), ಜಸ್ಪ್ರೀತ್ ಬುಮ್ರಾ (18 ಕೋಟಿ), ಸೂರ್ಯಕುಮಾರ್ ಯಾದವ್ (16.35 ಕೋಟಿ), ತಿಲಕ್ ವರ್ಮಾ (8 ಕೋಟಿ). ಪ್ರಸ್ತುತ ಮುಂಬೈ 45 ಕೋಟಿ ರೂಪಾಯಿಗಳ ಪರ್ಸ್‌ನೊಂದಿಗೆ ಐಪಿಎಲ್ 2025 ಮೆಗಾ-ಹರಾಜನ್ನು ಪ್ರವೇಶಿಸಲಿದೆ.