ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಮುಂದುವರೆದ ಭಾರತ-ಪಾಕಿಸ್ತಾನ ಹಗ್ಗಜಗ್ಗಾಟ, ಐಸಿಸಿ ವಿರುದ್ಧವೇ ಕಾನೂನು ಕ್ರಮ?
India vs Pakistan: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡದಿದ್ದರೆ ಐಸಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಸಾರಕರು ಎಚ್ಚರಿಕೆ ನೀಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗೆ ಭಾರತೀಯ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಡುವೆ ತಿಕ್ಕಾಟ ಮುಂದುವರೆದಿದೆ. 2 ಕ್ರಿಕೆಟ್ ಮಂಡಳಿಗಳು ಯಾವ ವಿಚಾರದಲ್ಲೂ ರಾಜಿ ಆಗದೆ, ಪಟ್ಟು ಹಿಡಿದಿವೆ. ನಾವು ಚಾಂಪಿಯನ್ಸ್ ಟ್ರೋಫಿ ಆಡಬೇಕು ಎಂದರೆ 2022ರ ಏಷ್ಯಾಕಪ್ ರೀತಿ ಹೈಬ್ರಿಡ್ ಮಾದರಿ ಟೂರ್ನಿ ಆಯೋಜಿಸಿ ಎಂದು ಬಿಸಿಸಿಐ ಬೇಡಿಕೆ ಇಟ್ಟಿದೆ. ಆದರೆ ಇದಕ್ಕೆ ಒಪ್ಪಲ್ಲ ಎನ್ನುತ್ತಿದೆ ಪಿಸಿಬಿ. ಟೂರ್ನಿ ಆರಂಭಕ್ಕೆ 100 ದಿನಕ್ಕಿಂತ ಕಡಿಮೆ ಇದ್ದು, ಈ ವಾರ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ಇತ್ತು. ಆದರೆ ಉಭಯ ದೇಶಗಳ ನಡುವೆ ಗೊಂದಲ ಪರಿಹಾರವಾಗದ ಕಾರಣ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಪ್ರಸಾರಕರು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಕಾನೂನು ಬೆದರಿಕೆ ನೀಡಿದ್ದಾರೆ. ಆ ಮೂಲಕ ಐಸಿಸಿ ತಲೆ ಕೆಡಿಸಿಕೊಂಡಿದೆ.
ಅತ್ಯಂತ ಶಕ್ತಿ ಶಾಲಿ ಮತ್ತು ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಬಿಸಿಸಿಐ ಅನ್ನು ಮನವೊಲಿಸಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದು ಅಸಾಧ್ಯ. ಅದರಲ್ಲೂ ಭಾರತ ಸರ್ಕಾರ ಯಾವುದೇ ಅನುಮತಿ ನೀಡದೆ ಇದು ಸಾಧ್ಯವಿಲ್ಲ. ಅತ್ತ ಪಾಕ್ ಸಹ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿಯಾಗಲ್ಲ. ಏಷ್ಯಾಕಪ್ಗೆ ಹೈಬ್ರಿಡ್ ಮಾದರಿ ನೀಡಲಾಗಿತ್ತು. 2023ರ ಏಕದಿನ ವಿಶ್ವಕಪ್ಗೆ ಭಾರತಕ್ಕೆ ನಾವು ಪ್ರಯಾಣಿಸಿದ್ದೆವು. ಆದರೆ ಈ ವೇಳೆ ನಾವು ನಿರ್ಧಾರಕ್ಕೆ ಬದ್ಧರಾಗುತ್ತೇವೆ. ಪೂರ್ಣ ಟೂರ್ನಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸುತ್ತೇವೆ. ನಾವು ಆತಿಥ್ಯ ವಹಿಸುತ್ತಿದ್ದೇವೆ, ನಮ್ಮ ದೇಶಕ್ಕೆ ಬರಲೇಬೇಕು ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದು 2 ದೇಶಗಳ ನಡುವೆ ಹಗ್ಗಾಜಗ್ಗಾಟ ಮುಂದುವರೆಯಲು ಕಾರಣವಾಗಿದೆ.
IND vs PAK ಇಲ್ಲದೆ ಚಾಂಪಿಯನ್ಸ್ ಟ್ರೋಫಿ ಇಲ್ಲ
ಸದ್ಯದ ಪರಿಸ್ಥಿತಿಯಲ್ಲಿ 2 ಕ್ರಿಕೆಟ್ ಮಂಡಳಿಗಳನ್ನು ಒಪ್ಪಿಸಲು ಐಸಿಸಿ ಮಧ್ಯಸ್ಥಿಕೆ ವಹಿಸಬೇಕು. ಆದರೆ ಭಾರತ ಪ್ರಯಾಣಿಸಲು ನಿರಾಕರಿಸಿದರೆ ಕೆಲವೊಂದಿಷ್ಟು ಸಾಧ್ಯತೆಗಳಿವೆ. ಒಂದು ವೇಳೆ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸದಿದ್ದರೆ ಬೇರೊಂದು ತಂಡ ಕಳುಹಿಸಲು ಐಸಿಸಿ ಸಿದ್ಧತೆ ನಡೆಸಬಹುದು. ಆದರೆ ಹೀಗೆ ಮಾಡಲು ಐಸಿಸಿ ನಿರ್ಧಾರ ಕೈಗೊಳ್ಳಲ್ಲ. ಏಕೆಂದರೆ ಭಾರತ ತಂಡವೇ ಇಲ್ಲದಿದ್ದರೆ ಎಲ್ಲಾ ಕ್ರಿಕೆಟ್ ಮಂಡಳಿಗಳ ಜೊತೆಗೆ ಐಸಿಸಿಗೆ ಯಾವುದೇ ಚಾರ್ಮ್ ಇರುವುದಿಲ್ಲ. ಇದರ ಜೊತೆಗೆ ಐಸಿಸಿಯ ಭಾರೀ ಆದಾಯಕ್ಕೂ ಕುತ್ತು ಬರಲಿದೆ. ಆತಿಥ್ಯ ವಹಿಸುವ ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಒಪ್ಪದಿದ್ದರೆ ಐಸಿಸಿ ಷೇರುದಾರರಿಗೆ ನಷ್ಟ ಭರಿಸುವುದು ಕಷ್ಟ. ಒಂದು ವೇಳೆ ಭಾರತ ಪ್ರಯಾಣಿಸದಿದ್ದರೆ ಐಸಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಸಾರಕರು ಹೇಳಿದ್ದಾರೆ.
ಐಸಿಸಿಗೆ ಕಾನೂನು ಸಂಕಷ್ಟ
ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪ್ರಸಾರಕರು ಸುಳಿವು ನೀಡಿದ್ದಾರೆ. ಪ್ರಸಾರಕರು ಮತ್ತು ವಾಣಿಜ್ಯ ಪಾಲುದಾರರು ಐಸಿಸಿಗೆ ಸ್ಪಷ್ಟಪಡಿಸಿದ್ದು, ಹೆಚ್ಚು ನಿರೀಕ್ಷಿತ ಪಾಕಿಸ್ತಾನ-ಭಾರತ ಪಂದ್ಯ ಟೂರ್ನಿಯ ಭಾಗವಾಗಿದ್ದರೆ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ವೇಳಾಪಟ್ಟಿ ಒಪ್ಪಿಕೊಳ್ಳುವುದಿಲ್ಲ. ಭಾರತ- ಪಾಕಿಸ್ತಾನ ಪಂದ್ಯವಿಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಐಸಿಸಿಗೆ ಬೆದರಿಕೆ ಹಾಕಿದ್ದಾರೆ ಎಂದು ಕ್ರಿಕೆಟ್-ಪಾಕಿಸ್ತಾನ ವರದಿ ಮಾಡಿದೆ. ಭಾರತ ಹಿಂದೆ ಸರಿದರೆ ಐಸಿಸಿ ಜೊತೆಗೆ ಕ್ರಿಕೆಟ್ ಮಂಡಳಿಗಳಿಗೆ ಆರ್ಥಿಕ ನಷ್ಟ ಉಂಟಾಗಲಿದೆ. ಭಾರತ ತನ್ನ ನಿರ್ಧಾರ ಹಿಂಪಡೆಯಲು ಸಾಧ್ಯವಾಗದಿದ್ದರೆ, ಐಸಿಸಿಯ ಇತರ ಕಾರ್ಯಕ್ರಮಗಳಲ್ಲಿ ಟೀಮ್ ಇಂಡಿಯಾವನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಬಹುದು.
ಐಸಿಸಿಯ ಕೆಲವು ಉನ್ನತ ಕ್ರಿಕೆಟ್ ನಿರ್ವಾಹಕರು ಪಾಕಿಸ್ತಾನಕ್ಕೆ ತೆರಳಿದ್ದು, ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಳ್ಳಲಿದ್ದಾರೆ. ಏಕೆಂದರೆ ಈ ವಿಷಯದಲ್ಲಿ ಮೊಂಡುತನದ ನಿಲುವು, ಭಾರಿ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಬಹುದು. ಇದಕ್ಕೆ ಪಾಕಿಸ್ತಾನ ಒಪ್ಪದಿದ್ದರೆ ಐಸಿಸಿ, ಬಿಸಿಸಿಐ ಅನ್ನು ಮನವೊಲಿಸಲಿದೆ. ಆದರೆ ಇದು ಕೂಡ ಒಪ್ಪದಿದ್ದರೆ ಐಸಿಸಿ ಕ್ರಮಕ್ಕೆ ಮುಂದಾಗಬಹುದು. ಈ ಬಿಕ್ಕಟ್ಟು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದುನೋಡೋಣ.