India squad Announce: ಟಿ20 ವಿಶ್ವಕಪ್ಗೂ ಮುನ್ನ ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್; ಈ ಸಾಧನೆಗೈದ ಮೊದಲ ನಾಯಕಿ
Aug 29, 2024 09:38 AM IST
ಟಿ20 ವಿಶ್ವಕಪ್ಗೂ ಮುನ್ನ ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್
- Harmanpreet Kaur: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಅಕ್ಟೋಬರ್ 3ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
2024ರ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ಭಾರತ ತಂಡವನ್ನು ಹೆಸರಿಸಿದೆ. ಟೀಮ್ ಇಂಡಿಯಾವನ್ನು ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿರುವ ಈ ಮೆಗಾ ಈವೆಂಟ್‌ನಲ್ಲಿ ಕೌರ್ ಕಣಕ್ಕಿಳಿದ ತಕ್ಷಣ ವಿಶಿಷ್ಟ ದಾಖಲೆಯನ್ನು ನಿರ್ಮಿಸಲಿದ್ದಾರೆ.
ಹರ್ಮನ್‌ಪ್ರೀತ್ ಅವರು ಮಹಿಳಾ ಟಿ 20 ವಿಶ್ವಕಪ್‌ನ 4 ಆವೃತ್ತಿಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಭಾರತದ ಮೊದಲ ನಾಯಕಿಯಾಗಲಿದ್ದಾರೆ. ಇವರು ಈ ಹಿಂದೆ 2018, 2020 ಮತ್ತು 2023ರಲ್ಲಿ ಭಾರತ ತಂಡದ ನಾಯಕಿರಾಗಿದ್ದರು. ಈ ಮಹತ್ವದ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ನೇತೃತ್ವದ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಟೂರ್ನಮೆಂಟ್‌ನ ಮೂರು ಆವೃತ್ತಿಗಳ ಸೆಮಿಫೈನಲ್‌ಗೆ ಟೀಮ್ ಇಂಡಿಯಾವನ್ನು ತಲುಪಿಸಿದ ಮೊದಲ ಭಾರತೀಯ ನಾಯಕಿ ಎಂಬ ದಾಖಲೆಯನ್ನು ಹರ್ಮನ್‌ಪ್ರೀತ್ ಈಗಾಗಲೇ ಹೊಂದಿದ್ದಾರೆ. ಇವರ ನಾಯಕತ್ವದಲ್ಲಿ, ಭಾರತವು 2020 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ದಾಖಲೆಯ ಪ್ರೇಕ್ಷಕರ ಮುಂದೆ ಆಸ್ಟ್ರೇಲಿಯಾ ವಿರುದ್ಧ ಸೋತಿತು. 35 ವರ್ಷ ವಯಸ್ಸಿನ ನಾಯಕತ್ವದಲ್ಲಿ, ವುಮೆನ್ ಇನ್ ಬ್ಲೂ 2018 ಮತ್ತು 2023 ಆವೃತ್ತಿಗಳಲ್ಲಿ ನಾಲ್ಕನೇ ಸ್ಥಾನ ತಲುಪಿತು. ಇಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಮಿಸ್‌ನಲ್ಲಿ ಸೋತರು.
ಜೊತೆಗೆ ಟೂರ್ನಿಯ ಮೂರು ಆವೃತ್ತಿಗಳಲ್ಲಿ ಭಾರತ ತಂಡದ ನಾಯಕಿಯಾಗಿದ್ದ ಮಿಥಾಲಿ ರಾಜ್ ಅವರ ದಾಖಲೆಯನ್ನು ಹರ್ಮನ್‌ಪ್ರೀತ್ ಮುರಿಯಲಿದ್ದಾರೆ. ಮಿಥಾಲಿ 2012, 2014 ಮತ್ತು 2016 ರಲ್ಲಿ ಭಾರತವನ್ನು ಮುನ್ನಡೆಸಿದ್ದರು.
ಜೂಲನ್ ಗೋಸ್ವಾಮಿ ಅವರು 2009 ಮತ್ತು 2010 ರಲ್ಲಿ ಮೊದಲ ಎರಡು ಆವೃತ್ತಿಗಳಲ್ಲಿ ಭಾರತದ ನಾಯಕಿಯಾಗಿದ್ದರು. ಎರಡೂ ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಿದರು, ಆದರೆ ಫೈನಲ್ಗೇರಲು ವಿಫಲರಾದರು.
ಇತ್ತ ಹರ್ಮನ್‌ಪ್ರೀತ್ ಸ್ಪರ್ಧೆಯ ಎಲ್ಲಾ ಒಂಬತ್ತು ಆವೃತ್ತಿಗಳಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಎಂಬ ದಾಖಲೆಯ ಪಟ್ಟಿಗೆ ಸೇರಲಿದ್ದಾರೆ. ಅವರು 2009 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟಿ20ಐ ಗೆ ಪದಾರ್ಪಣೆ ಮಾಡಿದರು ಮತ್ತು 2010, 2012, 2015, 2016, 2018, 2020, ಮತ್ತು 2023 ರಲ್ಲಿ ಮಹಿಳಾ ಇನ್ ಬ್ಲೂ ತಂಡದ ಭಾಗವಾಗಿದ್ದರು.
ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 4 ರಂದು ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದು, ಅಕ್ಟೋಬರ್ 6 ಮತ್ತು 9 ರಂದು ಕ್ರಮವಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಎದುರಿಸಲಿದೆ. ಒಂದು ಬಾರಿಯ ರನ್ನರ್ಸ್ ಅಪ್ ತಂಡವು ಅಕ್ಟೋಬರ್ 13 ರಂದು ಶಾರ್ಜಾದಲ್ಲಿ ತಮ್ಮ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಮಹಿಳಾ ಟಿ20 ವಿಶ್ವಕಪ್ 2024ಕ್ಕೆ ಭಾರತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಡಿ ಹೇಮಲತಾ, ಆಶಾ ಸೋಭಾನ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್ (ಕರ್ನಾಟಕದ ಆಟಗಾರ್ತಿ), ಸಜೀವನ್ ಸಜನಾ.
ಮೀಸಲು ಆಟಗಾರ್ತಿಯರು: ತನುಜಾ ಕನ್ವರ್, ಉಮಾ ಚೆಟ್ರಿ, ಸೈಮಾ ಠಾಕೋರ್.
ವರದಿ: ವಿನಯ್ ಭಟ್.
ಇದನ್ನೂ ಓದಿ: UBI Bank: ಯೂನಿಯನ್ ಬ್ಯಾಂಕ್ನಲ್ಲಿ 500 ಅಪ್ರೆಂಟಿಸ್ ಹುದ್ದೆ ಖಾಲಿ; ಅರ್ಜಿ ಸಲ್ಲಿಕೆ ಆರಂಭ, ಕರ್ನಾಟಕದಲ್ಲಿ ಎಷ್ಟು ಪೋಸ್ಟ್?