ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹರ್ಮನ್‌ಪ್ರೀತ್ ಕೌರ್ ನಾಯಕತ್ವಕ್ಕೆ ಕುತ್ತು; ಹೊಸ ನಾಯಕಿ ನೇಮಕ ಸಾಧ್ಯತೆ
Oct 16, 2024 07:17 PM IST
ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಹರ್ಮನ್‌ಪ್ರೀತ್ ಕೌರ್ ನಾಯಕತ್ವಕ್ಕೆ ಕುತ್ತು
- ಟಿ20 ವಿಶ್ವಕಪ್ ಟೂರ್ನಿಯಿಂದ ಗ್ರೂಪ್ ಹಂತದಲ್ಲೇ ಹೊರಬಿದ್ದ ನಂತರ, ಭಾರತೀಯ ವನಿತೆಯರ ತಂಡದ ನಾಯಿ ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಹೊಸ ನಾಯಕಿ ನೇಮಕ ಮಾಡಲು ಬಿಸಿಸಿಐ ಚರ್ಚೆ ನಡೆಸುತ್ತಿದೆ.
ಭಾರತ ವನಿತೆಯರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ಟೂರ್ನಿಯ ಗುಂಪು ಹಂತದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿ ಟೂರ್ನಿಗೆ ಎಂಟ್ರಿಕೊಟ್ಟ ತಂಡದ ನಿರಾಶಾದಾಯಕ ಪ್ರದರ್ಶನವು ಅಭಿಮಾನಿಗಳು ಮಾತ್ರವಲ್ಲದೆ ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್‌ಗೂ ಆಘಾತ ತಂದಿದೆ. ಹೀಗಾಗಿ ತಂಡ ಭವಿಷ್ಯದ ದೃಷ್ಟಿಯಿಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬದಲಿಗೆ ನಾಯಕಿಯಾಗಿ ಬದಲಿ ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.
ವನಿತೆಯರ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರು ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿಯನ್ನು ಭೇಟಿಯಾಗಿ ಮಹಿಳಾ ತಂಡದ ಭವಿಷ್ಯದ ಕುರಿತು ಚರ್ಚಿಸಲಿದ್ದಾರೆ ಎಂದು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಹೊಸ ನಾಯಕಿಯನ್ನು ಆಯ್ಕೆ ಮಾಡುವ ಬಗ್ಗೆ ಬಿಸಿಸಿಐ ಖಂಡಿತವಾಗಿಯೂ ಚರ್ಚಿಸುತ್ತದೆ” ಎಂದು ಮೂಲವೊಂದು ವರದಿಯಲ್ಲಿ ಉಲ್ಲೇಖಿಸಿದೆ. “ಬಿಸಿಸಿಐ ತಂಡಕ್ಕೆ ಬೇಕಾದ ಎಲ್ಲವನ್ನೂ ಒದಗಿಸಿದೆ. ಭವಿಷ್ಯದಲ್ಲಿ ಹೊಸ ಮುಖವು ವನಿತೆಯರ ತಂಡವನ್ನು ಮುನ್ನಡೆಸುವ ಸಮಯ ಬಂದಿದೆ ಎಂದು ನಾವು ಭಾವಿಸುತ್ತೇವೆ”" ಎಂದು ಉಲ್ಲೇಖಿಸಲಾಗಿದೆ.
ಕಿವೀಸ್ ಸರಣಿಗೂ ಮುನ್ನ ನಿರ್ಧಾರ
ಮಜುಂದಾರ್ ಮತ್ತು ಅಧಿಕಾರಿಗಳ ನಡುವಿನ ಮಹತ್ವದ ಸಭೆಯು ಅಕ್ಟೋಬರ್ 24ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುಂಚಿತವಾಗಿ ನಡೆಯಲಿದೆ. ಆದರೆ, ಆ ಸರಣಿಯಲ್ಲಿ ಕೌರ್ ನಾಯಕಿಯಾಗಿ ಉಳಿಯುತ್ತಾರಾ ಅಥವಾ ಅದಕ್ಕೂ ಮುನ್ನವೇ ನಾಯಕತ್ವ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಷ್ಟೆ.
ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, 2016ರಿಂದ ಭಾರತೀಯ ವನಿತೆಯರ ತಂಡದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇವರ ನಾಯಕತ್ವದಲ್ಲಿ ತಂಡವು ಹಲವು ಟೂರ್ನಿಗಳಲ್ಲಿ ಮಿಂಚಿದೆ. ಮುಂದೆ 2025ರಲ್ಲಿ ಭಾರತವು ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಅದಕ್ಕೂ ಮುನ್ನ ತಂಡವನ್ನು ಮರುರಚಿಸಲು ಎದುರು ನೋಡುತ್ತಿದೆ.
ಹೊಸ ನಾಯಕಿ ಯಾರು?
ಸದ್ಯ ವನಿತೆಯರ ತಂಡದಲ್ಲಿ ನಾಯಕತ್ವಕ್ಕೆ ಸಂಭಾವ್ಯ ಪರ್ಯಾಯ ಆಯ್ಕೆಯೆಂದರೆ ಪ್ರಸ್ತುತ ಉಪನಾಯಕಿ ಸ್ಮೃತಿ ಮಂಧಾನ. ಸತತ ಎರಡು ಆವೃತ್ತಿಗಳಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡಬ್ಲ್ಯುಪಿಎಲ್‌ನಲ್ಲಿ ಮುನ್ನಡೆಸಿದ್ದಾರೆ. ಅದರಲ್ಲೂ 2024ರಲ್ಲಿ ತಂಡವು ಯಶಸ್ವಿಯಾಗಿ ಟ್ರೋಫಿ ಗೆದ್ದಿದೆ. ಅಲ್ಲದೆ ಹಲವು ಬಾರಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಮಂಧಾನ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.