logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹರ್ಮನ್​ಪ್ರೀತ್​ ರೌದ್ರಾವತಾರಕ್ಕೆ ಬೆದರಿದ ಜೈಂಟ್ಸ್; ಮುಂಬೈ ಇಂಡಿಯನ್ಸ್​ ಪ್ಲೇಆಫ್​ಗೆ, ಗುಜರಾತ್ ಬಹುತೇಕ ಹೊರಕ್ಕೆ

ಹರ್ಮನ್​ಪ್ರೀತ್​ ರೌದ್ರಾವತಾರಕ್ಕೆ ಬೆದರಿದ ಜೈಂಟ್ಸ್; ಮುಂಬೈ ಇಂಡಿಯನ್ಸ್​ ಪ್ಲೇಆಫ್​ಗೆ, ಗುಜರಾತ್ ಬಹುತೇಕ ಹೊರಕ್ಕೆ

Prasanna Kumar P N HT Kannada

Mar 09, 2024 11:36 PM IST

ಹರ್ಮನ್​ಪ್ರೀತ್​ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಗುಜರಾತ್ ಜೈಂಟ್ಸ್

    • Harmanpreet Kaur: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೋಲುವ ಪಂದ್ಯವನ್ನು ಗೆಲ್ಲಿಸಿಕೊಟ್ಟ ನಾಯಕಿ ಹರ್ಮನ್ ಪ್ರೀತ್ ಕೌರ್​ ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ ಆಫ್​ಗೇರಿಸುವಲ್ಲಿ ಯಶಸ್ಸು ಕಂಡರು.
ಹರ್ಮನ್​ಪ್ರೀತ್​ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಗುಜರಾತ್ ಜೈಂಟ್ಸ್
ಹರ್ಮನ್​ಪ್ರೀತ್​ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಗುಜರಾತ್ ಜೈಂಟ್ಸ್ (PTI)

ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರ ಬೆಂಕಿ ಬಿರುಗಾಳಿ ಆಟದ ನೆರವಿನಿಂದ ರಣ ರೋಚಕ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್​, 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್​ ಲೀಗ್​​​ನಲ್ಲಿ ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದೆ. ಅತ್ತ ಬೃಹತ್ ಮೊತ್ತವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಗುಜರಾತ್​ ಜೈಂಟ್ಸ್​ ಲೀಗ್​​ನಿಂದ ಬಹುತೇಕ ಹೊರ ಬಿದ್ದಿದೆ. ಕೊನೆಯ 4 ಓವರ್​​​ಗಳಲ್ಲಿ 65 ರನ್ ಗಳಿಸಿದ ಮುಂಬೈ, ಸೋಲುವ ಪಂದ್ಯದಲ್ಲಿ 7 ವಿಕೆಟ್​​ಗಳಿಂದ ಗೆದ್ದು ಸಂಭ್ರಮಿಸಿತು.

ಟ್ರೆಂಡಿಂಗ್​ ಸುದ್ದಿ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಬೆಂಗಳೂರಿನಲ್ಲಿ ನಡೆದ ಮೊದಲ ಹಂತದ ವುಮೆನ್ಸ್ ಪ್ರೀಮಿಯರ್​​ ಲೀಗ್​​ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋತಿದ್ದ ಗುಜರಾತ್ ಜೈಂಟ್ಸ್​ ದೆಹಲಿಯಲ್ಲಿ ನಡೆಯುತ್ತಿರುವ ದ್ವಿತೀಯ ಹಂತದಲ್ಲಿ ಆರ್​​ಸಿಬಿ ವಿರುದ್ಧ ಗೆದ್ದು ಖಾತೆ ತೆರೆದಿತ್ತು. 2ನೇ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದ ಜೊತೆಗೆ ಪ್ಲೇ ಆಫ್​​ ಕನಸನ್ನೂ ಜೀವಂತವಾಗಿಟ್ಟುಕೊಂಡಿತ್ತು. ಆದರೆ, ಗುಜರಾತ್​ ಕನಸನ್ನು ಮುಂಬೈ ನುಚ್ಚು ನೂರು ಮಾಡಿತು. ಬೃಹತ್ ಗುರಿ ಬೆನ್ನಟ್ಟಿದ್ದಲ್ಲದೆ ಗುಜರಾತ್ ಪ್ಲೇಆಫ್​​ನಿಂದ ಬಹುತೇಕ ಹೊರಬೀಳುವಂತೆ ಮಾಡಿತು.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್​ ಉತ್ತಮ ಆರಂಭ ಪಡೆಯಲಿಲ್ಲ. ಲಾರಾ ವೊಲ್ವಾರ್ಡ್ಟ್ ಕೇವಲ 13 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಓಪನರ್​ ಮತ್ತು ನಾಯಕಿ ಬೆತ್ ಮೂನಿ ಮತ್ತು 3ನೇ ಕ್ರಮಾಂಕದಲ್ಲಿ ಆಡಲಿಳಿದ ದಯಾಲನ್ ಹೇಮಲತಾ ಆರಂಭಿಕ ಆಘಾತ ಲೆಕ್ಕಿಸದೆ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಮುಂಬೈ ಬೌಲರ್​​​ಗಳ ಬೆವರಿಳಿಸಿದ ಈ ಜೋಡಿ 2ನೇ ವಿಕೆಟ್​ಗೆ 121 ರನ್​ಗಳ ಜೊತೆಯಾಟವಾಡಿತು.

ಕಳೆದ ಪಂದ್ಯಗಳಲ್ಲಿ ವಿಫಲವಾಗಿದ್ದ ಹೇಮಲತಾ ಬಿರುಸಿನ ಬ್ಯಾಟಿಂಗ್​ ನಡೆಸಿದ್ದಲ್ಲದೆ, ಮಹತ್ವದ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದರು. 40 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 74 ರನ್ ಚಚ್ಚಿದರು. ಮತ್ತೊಂದು ಎಂಡ್​​ನಲ್ಲಿದ್ದ ಮೂನಿ 35 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್​ ಸಹಿತ 66 ರನ್ ಬಾರಿಸಿದರು. ಪರಿಣಾಮ ಗುಜರಾತ್ ಬೃಹತ್​ ಮೊತ್ತ ಪೇರಿಸಲು ನೆರವಾಯಿತು. ಉಳಿದಂತೆ ಯಾರೂ ದೊಡ್ಡ ಮೊತ್ತದ ಕಾಣಿಕೆ ನೀಡಲಿಲ್ಲ. ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತು.

19.5 ಓವರ್​​ಗಳಲ್ಲೇ ಮುಂಬೈಗೆ ಗೆಲುವು

ಆದರೆ ಈ ಗುರಿ ಬೆನ್ನಟ್ಟಿದ ಮುಂಬೈ, ಆರಂಭದಿಂದಲೂ ಭರ್ಜರಿ ಬ್ಯಾಟಿಂಗ್ ನಡೆಸಿತು. ಯಾಸ್ತಿಕಾ ಭಾಟಿಯಾ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಪರಿಣಾಮ ಪವರ್​​ಪ್ಲೇನಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ ನಿಧಾನವಾಗಿ ರನ್ ಕಲೆ ಹಾಕುತ್ತಿದ್ದ ಹೇಲಿ ಮ್ಯಾಥ್ಯೂಸ್ 18 ರನ್ ಗಳಿಸಿ ಔಟಾದರು. ನಟಾಲಿ ಸೀವರ್ ಸಹ 2 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಇದರ ನಡುವೆಯೂ ಯಾಸ್ತಿಕಾ ಬಿರುಸಿನ ಬ್ಯಾಟಿಂಗ್​ ನಡೆಸುತ್ತಲೇ ಇದ್ದರು.

ಹರ್ಮನ್ ಜೊತೆಗೂಡಿ ತಂಡದ ಮೊತ್ತವನ್ನು ಹೆಚ್ಚಿಸುತ್ತಿದ್ದ ಎಡಗೈ ಆಟಗಾರ್ತಿ 49 ರನ್​ ಗಳಿಸಿದ್ದ ವಿಕೆಟ್ ಒಪ್ಪಿಸಿ ಅರ್ಧಶತಕ ವಂಚಿತರಾದರು. ಆದರೂ ಮುಂಬೈ ಚೇಸ್ ಮಾಡುವುದು ಕಷ್ಟವೆನಿಸಿತ್ತು. 16 ಓವರ್​​ಗಳ ಮುಕ್ತಾಯಕ್ಕೆ ಮುಂಬೈ 123 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 65 ರನ್​ಗಳ ದೊಡ್ಡ ಮೊತ್ತ ಬೇಕಿತ್ತು. ಈ ವೇಳೆ ಜಿಜಿ ಬೌಲರ್​​ಗಳ ಮೇಲೆ ಚಾರ್ಜ್ ಮಾಡಿದ ಹರ್ಮನ್, ವಿಧ್ವಂಸ ಸೃಷ್ಟಿಸಿದರು. ರೌದ್ರಾವತಾರದ ಬ್ಯಾಟಿಂಗ್​​ಗೆ ಬೆಚ್ಚಿ ಬಿದ್ದ ಗುಜರಾತ್​ 1 ಎಸೆತ ಬಾಕಿ ಇರುವಂತೆಯೇ ಶರಣಾಯಿತು.

ಹರ್ಮನ್​ಪ್ರೀತ್ ರೌದ್ರಾವತಾರ

16ನೇ ಓವರ್​ ಮುಕ್ತಾಯಕ್ಕೆ 31 ಎಸೆತಗಳಲ್ಲಿ 45 ರನ್ ಗಳಿಸಿದ್ದ ಹರ್ಮನ್, 17ನೇ ಓವರ್​ನಿಂದ ಬ್ಯಾಟಿಂಗ್ ಗೇರ್​ ಬದಲಾಯಿಸಿದರು. 17ನೇ ಓವರ್​​ನಲ್ಲಿ 18 ರನ್, 18ನೇ ಓವರ್​​​ನಲ್ಲಿ 24 ರನ್ ಗಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಇದರೊಂದಿಗೆ ಗುಜರಾತ್​ ತಾನು ಗೆಲ್ಲುವ ಆಸೆಯನ್ನು ಕೈಬಿಟ್ಟಿತು. 19ನೇ ಓವರ್​​​ನಲ್ಲಿ 10 ರನ್ ಗಳಿಸಿದ ಮುಂಬೈ ಕೊನೆಯ ಓವರ್​ ಗೆಲುವಿಗೆ 13 ರನ್ ಉಳಿಸಿಕೊಂಡಿತ್ತು. ಹರ್ಮನ್ ಭರ್ಜರಿ ಸಿಕ್ಸರ್​ ಮತ್ತು ಬೌಂಡರಿ ಚಚ್ಚುವ ಮೂಲಕ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು. ಅವರು 48 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 95 ರನ್ ಚಚ್ಚಿದರು. ತನ್ನ ಕೊನೆಯ 17 ಎಸೆತಗಳಲ್ಲಿ 50 ಬಾರಿಸಿದ್ದು ವಿಶೇಷ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ