Rishabh Pant: ನಮ್ಮ ಲೆಕ್ಕಕ್ಕಷ್ಟೆ 27 ಕೋಟಿ, ಆದರೆ ರಿಷಭ್ ಪಂತ್ ಕೈಗೆ ಬರುವುದೇ ಬೇರೆ ಮೊತ್ತ!
Nov 27, 2024 07:26 PM IST
ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಆಸ್ಟ್ರೇಲಿಯಾ ಸರಣಿಗೂ ಮುನ್ನ ಅಭ್ಯಾಸದಲ್ಲಿ ಭಾಗಿಯಾಗಿದ್ದ ಕ್ಷಣದ ಚಿತ್ರ.
- IPL Auction 2025: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ 27 ಕೋಟಿ ರೂಪಾಯಿಗೆ ಐತಿಹಾಸಿಕ ಬಿಡ್ ಪಡೆದಿದ್ದಾರೆ. ಆದರೆ ಪಂತ್ಗೆ ಈ ಪೂರ್ಣ ಮೊತ್ತ ಸಿಗುವುದಿಲ್ಲ. ಏಕೆಂದರೆ ಪಡೆದ ವೇತನಕ್ಕೆ ತೆರಿಗೆ ಕಟ್ಟಬೇಕು. ಹಾಗಿದ್ದರೆ ವಿಕೆಟ್ ಕೀಪರ್ ಕೈಗೆ ಸಿಗುವ ಮೊತ್ತವೆಷ್ಟು?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ (IPL 2025 Mega Auction) ಟೀಮ್ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ನೂತನ ಇತಿಹಾಸ ಸೃಷ್ಟಿಸಿದ್ದಾರೆ. 18 ವರ್ಷಗಳ ಐಪಿಎಲ್ ಹರಾಜು ಇತಿಹಾಸದಲ್ಲಿ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿ ದುಬಾರಿ ಆಟಗಾರ ಎನಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿಯು ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ.
ಪಂತ್ ಆಡಿದ್ದ ಮಾಜಿ ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 20.75 ಕೋಟಿ ರೂಪಾಯಿಗೆ ಆರ್ಟಿಎಂ ಕಾರ್ಡ್ ಬಳಸಲು ಪ್ರಯತ್ನಿಸಿತು. ಪಂತ್ ಖರೀದಿಸಲೇಬೇಕು ಎಂದು ಸಂಕಲ್ಪ ಮಾಡಿದ್ದ ಲಕ್ನೋ, ಡೆಲ್ಲಿಗೆ ಅವಕಾಶ ನೀಡದೆ 27 ಕೋಟಿ ರೂ.ಗೆ ಏರಿಸಿತು. ನಿಮಗೆ ತಿಳಿದಿರಬೇಕಾದ ವಿಷಯ ಏನೆಂದರೆ ಬಿಕರಿಯಾದ 27 ಕೋಟಿ ರೂಪಾಯಿಯೂ ರಿಷಭ್ ಪಂತ್ ಕೈ ಸೇರುವುದಿಲ್ಲ. ಏಕೆಂದರೆ ಅವರ ಸಂಬಳಕ್ಕೆ ತೆರಿಗೆ ವಿಧಿಸಲಾಗುತ್ತದೆ. ವಿಕೆಟ್ ಕೀಪರ್ ಕೈಗುವ ಅಂತಿಮ ಮೊತ್ತವೆಷ್ಟು?
8.1 ಕೋಟಿ ತೆರಿಗೆ ಪಾವತಿಸಲಿದ್ದಾರೆ ಪಂತ್
ಆಟಗಾರರು ಹರಾಜಿನಲ್ಲಿ ಪಡೆಯುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಐಪಿಎಲ್‌ನಲ್ಲಿ ಆಟಗಾರರಿಗೆ ನಿಗದಿತ ಅವಧಿಯ ಒಪ್ಪಂದವನ್ನು ನೀಡಲಾಗುತ್ತದೆ. ಇದು ಸಾಮಾನ್ಯವಾಗಿ 3 ವರ್ಷಗಳ ತನಕ ಇರಲಿದೆ. ಒಂದು ಸೀಸನ್ಗೆ ರಿಷಭ್ ಪಂತ್ 27 ಕೋಟಿ ಪಡೆಯಲಿದ್ದಾರೆ. 3 ವರ್ಷಗಳ ಕಾಲ ಎಲ್‌ಎಸ್‌ಜಿ ತಂಡದಲ್ಲಿ ಉಳಿದರೆ ಅವರಿಗೆ 81 ಕೋಟಿ ರೂಪಾಯಿ ಸಿಗಲಿದೆ. ಆದರೆ ಪ್ರತಿ ಸೀಸನ್ಗೆ ಪಂತ್ ಪಡೆಯುವ 27 ಕೋಟಿಗೆ 8.1 ಕೋಟಿ ರೂ ತೆರಿಗೆ ಕಟ್ಟಲಿದ್ದಾರೆ. ಅಂತಿಮವಾಗಿ ಪಂತ್ ಕೈಗೆ ಬರುವುದು 18.9 ಕೋಟಿ ರೂಪಾಯಿ.
ಪಂತ್ LSG ನಾಯಕನಾಗುವ ಸಾಧ್ಯತೆ?
2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪರ ಕಣಕ್ಕಿಳಿಯುವ ಮೂಲಕ ಪಂತ್ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. 2021ರಲ್ಲಿ ತಂಡದ ನಾಯಕನೂ ಆಗಿದ್ದರು. ಇದುವರೆಗೆ 111 ಐಪಿಎಲ್ ಪಂದ್ಯಗಳಲ್ಲಿ 35.31 ಸರಾಸರಿಯಲ್ಲಿ 3284 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 18 ಅರ್ಧ ಶತಕಗಳು ಸೇರಿವೆ. ಪ್ರಸ್ತುತ ಎಲ್‌ಎಸ್‌ಜಿ ಸೇರಿರುವ ಪಂತ್, ಕೆಎಲ್ ರಾಹುಲ್ ಅವರಿಂದ ತೆರವಾದ ನಾಯಕತ್ವದ ಸ್ಥಾನ ತುಂಬುವುದು ಬಹುತೇಕ ದಟ್ಟವಾಗಿದೆ. ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಲಕ್ನೋ ನಿಕೋಲಸ್ ಪುರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಅವರನ್ನು ಹರಾಜಿಗೂ ಮುನ್ನ ಉಳಿಸಿಕೊಂಡಿತ್ತು. ನಂತರ ಹರಾಜಿನಲ್ಲಿ 19 ಆಟಗಾರರನ್ನು ಖರೀದಿಸಿತು. ಆವೇಶ್ ಖಾನ್ (ರೂ. 9.75 ಕೋಟಿ) ಮತ್ತು ಆಕಾಶ್ ದೀಪ್ (ರೂ. 8 ಕೋಟಿ) ಅವರಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡುವ ಮೂಲಕ ಎಲ್‌ಎಸ್‌ಜಿ ತಮ್ಮ ವೇಗದ ಬೌಲಿಂಗ್ ಅನ್ನು ಬಲಪಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ
ಎಲ್‌ಎಸ್‌ಜಿ ಹರಾಜಿನಲ್ಲಿ ಖರೀದಿಸಿದ ಆಟಗಾರರು: ರಿಷಭ್ ಪಂತ್ (27 ಕೋಟಿ), ಡೇವಿಡ್ ಮಿಲ್ಲರ್ (7.5 ಕೋಟಿ), ಏಡೆನ್ ಮಾರ್ಕ್ರಾಮ್ (2 ಕೋಟಿ), ಮಿಚೆಲ್ ಮಾರ್ಷ್ ( 3.40 ಕೋಟಿ), ಅವೇಶ್ ಖಾನ್ (9.75 ಕೋಟಿ), ಅಬ್ದುಲ್ ಸಮದ್ (4.20) ಕೋಟಿ), ಆರ್ಯನ್ ಜುಯಲ್ (30 ಲಕ್ಷ), ಆಕಾಶ್ ದೀಪ್ (8 ಕೋಟಿ), ಹಿಮ್ಮತ್ ಸಿಂಗ್ (30 ಲಕ್ಷ ರೂ.), ಎಂ. ಸಿದ್ಧಾರ್ಥ್ (75 ಲಕ್ಷ), ದಿಗ್ವೇಶ್ ಸಿಂಗ್ (30 ಲಕ್ಷ), ಸಾಯಿ ಕಿಶೋರ್ (2 ಕೋಟಿ), ಇಶಾಂತ್ ಶರ್ಮಾ (75 ಲಕ್ಷ), ಜಯಂತ್ ಯಾದವ್ (75 ಲಕ್ಷ), ಅರ್ಶಿನ್ ಕುಲಕರ್ಣಿ (30 ಲಕ್ಷ), ಮ್ಯಾಥ್ಯೂ ಬ್ರಿಟ್ಜ್ಕೆ (75 ಲಕ್ಷ)
ಎಲ್‌ಎಸ್‌ಜಿ ರಿಟೈನ್ ಮಾಡಿಕೊಂಡ ಆಟಗಾರರು: ನಿಕೋಲಸ್ ಪೂರನ್ (21 ಕೋಟಿ), ರವಿ ಬಿಷ್ಣೋಯ್ (11 ಕೋಟಿ), ಮಯಾಂಕ್ ಯಾದವ್ (11 ಕೋಟಿ), ಮೊಹ್ಸಿನ್ ಖಾನ್ (4 ಕೋಟಿ), ಆಯುಷ್ ಬದೋನಿ (4 ಕೋಟಿ)
ಉಳಿದ ಪರ್ಸ್ ಮೊತ್ತ - 10 ಲಕ್ಷ
ಆರ್ಟಿಎಂ ಕಾರ್ಡ್ ಬಳಕೆ - 01
ಉಳಿದ ಸ್ಲಾಟ್ - 01
ವಿದೇಶಿ ಆಟಗಾರರು - 06
ಒಟ್ಟು ಆಟಗಾರರು - 24