SA vs AFG: ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ವಿಶ್ವಕಪ್ ಅಂತಿಮ ಫೈಟ್; ಪಿಚ್, ಹವಾಮಾನ, ತಂಡಗಳ ಶಕ್ತಿ ರಿಪೋರ್ಟ್ ಇದೇ
Nov 10, 2023 07:00 AM IST
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ 42ನೇ ಪಂದ್ಯ.
ಶುಕ್ರವಾರ (ನವೆಂಬರ್ 10) ನಡೆಯಲಿರುವ ವಿಶ್ವಕಪ್‌ನ 42ನೇ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲು ಅಫ್ಘಾನಿಸ್ತಾನ ಸಿದ್ಧವಾಗಿದೆ.
ಅಹಮದಾಬಾದ್ (ಗುಜರಾತ್): ಆಸ್ಟ್ರೇಲಿಯಾ (Australia) ವಿರುದ್ಧ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿಕೊಂಡಿದ್ದ ಅಫ್ಘಾನಿಸ್ತಾನ (Afghanistan) ವಿಶ್ವಕಪ್‌ನ (ODI World Cup 2023) 42ನೇ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ (South Africa) ತಂಡವನ್ನು ಎದುರಿಸಲಿದೆ. ಈ ಪಂದ್ಯ ಮೊಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 10) ನಡೆಯಲಿದೆ.
ದಕ್ಷಿಣ ಆಫ್ರಿಕಾ ಈಗಾಗಲೇ ನಾಕೌಟ್ ಹಂತ ತಲುಪಿದ್ದು, ಅಫ್ಘಾನ್ ವಿರುದ್ಧದ ಪಂದ್ಯ ಅನೌಪಚಾರಿಕವಾಗಿದೆ. ಆದರೂ ಆಫ್ಘಾನ್ ಆಟಗಾರರ ಸವಾಲನ್ನು ಯಶಸ್ವಿಯಾಗಿ ಎದುರಿಸಿ ಗ್ರೂಪ್ ಹಂತದಲ್ಲಿ 7ನೇ ಗೆಲುವು ಪಡೆಯುವ ಯೋಚನೆಯಲ್ಲಿದೆ. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿರುವ 8 ಪಂದ್ಯಗಳಿಂದ 622 ರನ್ ಗಳಿಸಿ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮಾರ್ಕೊ ಜಾನ್ಸೆನ್ ಆಲ್‌ರೌಂಡರ್ ಆಟವಾಡುತ್ತಿದ್ದು, 17 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಮತ್ತೊಂದೆಡೆ ಅಫ್ಘಾನಿಸ್ತಾನ ಇನ್ನೂ ಕೂಡ ಸೆಮಿ ಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ. ದೊಡ್ಡ ಅಂತರದಲ್ಲಿ ಹರಿಣಗಳನ್ನು ಮಣಿಸಿ ನೆಟ್ ರನ್‌ರೇಟ್ ಹೆಚ್ಚಿಸಿಕೊಂಡರೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಅವಕಾಶ ಇದೆ. ಇನ್ನೂ ಆಫ್ಘಾನ್ ತಂಡದಲ್ಲಿ ಅತ್ಯಂತ ಪ್ರಬುದ್ಧವಾಗಿ ಆಡುವಂಥ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಇದ್ದಾರೆ. ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾದಂತಹ ತಂಡಗಳಿಗೆ ಸೋಲುಣಿಸಿರುವ ಈ ತಂಡ ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಸೋಲು ಕಂಡಿತ್ತು.
ಉಭಯ ತಂಡಗಳ ಮುಖಾಮುಖಿ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಆ ಏಕೈಕ ಪಂದ್ಯವನ್ನು ದಕ್ಷಿಣ ಆಫ್ರಿಕಾವೇ ಗೆದ್ದುಕೊಂಡಿದೆ. 2019ರ ಜೂನ್ 15 ರಂದು ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಆ ನಂತರ ಪೈಪೋಟಿಗೆ ಸಿದ್ಧವಾಗಿವೆ.
ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ
ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗತಾಣವಾಗಿದೆ. ಕನಿಷ್ಠ 300 ಪ್ಲಸ್ ರನ್ ಇಲ್ಲಿ ನಿರೀಕ್ಷಿಸಬಹುದು. ಈ ಮೈದಾನದ ಹುಲ್ಲು ಹಾಸಿನಲ್ಲಿ ತೇವಾಂಶ ಹೆಚ್ಚು ಕಾಣಸಿಗುವುದಿಲ್ಲ. ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಅಹಮದಾಬಾದ್ ವೆದರ್ ರಿಪೋರ್ಟ್
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಪಂದ್ಯ ನಡೆಯಲಿದ್ದು, ನವೆಂಬರ್ 10 ರಂದು ಇಲ್ಲಿ ಮಳೆಯಾಗುವ ಯಾವುದೇ ಸಾಧ್ಯತೆಗಳು ಇಲ್ಲ.
ಆಫ್ಘಾನಿಸ್ತಾನ ಆಡುವ ಸಂಭಾವ್ಯ 11ರ ಬಳಗ
ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್.
ದಕ್ಷಿಣ ಆಫ್ರಿಕಾ ಆಡುವ ಸಂಭಾವ್ಯ 11ರ ಬಳಗ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಲುಂಗಿ ಎನ್‌ಗಿಡಿ,
ಪಂದ್ಯದ ಸಂಪೂರ್ಣ ಮಾಹಿತಿ
ಪಂದ್ಯ: ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ, ಏಕದಿನ ವಿಶ್ವಕಪ್ 2023, 42ನೇ ಪಂದ್ಯ
ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ದಿನಾಂಕ: ನವೆಂಬರ್ 10, ಶುಕ್ರವಾರ
ಸಮಯ: ಮಧ್ಯಾಹ್ನ 2 ಗಂಟೆ (ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್