logo
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದ್ವೇಳೆ ಭಾರತ ವಿಶ್ವಕಪ್ ಗೆದ್ದರೆ 48 ವರ್ಷಗಳ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದ್ದಾರೆ ಕೊಹ್ಲಿ-ಅಶ್ವಿನ್!

ಒಂದ್ವೇಳೆ ಭಾರತ ವಿಶ್ವಕಪ್ ಗೆದ್ದರೆ 48 ವರ್ಷಗಳ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದ್ದಾರೆ ಕೊಹ್ಲಿ-ಅಶ್ವಿನ್!

Prasanna Kumar P N HT Kannada

Sep 29, 2023 07:00 AM IST

google News

ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್.

    • Virat Kohli and Ravichandran Ashwin: ಒಂದ್ವೇಳೆ ಭಾರತ ತಂಡ 2023ರ ಏಕದಿನ ವಿಶ್ವಕಪ್ ಗೆದ್ದರೆ, ಕೊಹ್ಲಿ ಮತ್ತು ಅಶ್ವಿನ್ ವಿಶೇಷ ದಾಖಲೆ ಬರೆಯಲಿದ್ದಾರೆ. ಆ ದಾಖಲೆ ಏನು ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್.
ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್.

ಐಸಿಸಿ ಏಕದಿನ ಕ್ರಿಕೆಟ್​ ವಿಶ್ವಕಪ್​​ ಜಾತ್ರೆ (ICC ODI World Cup 2023) ಬಂದೇ ಬಿಟ್ಟಿತು. ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್​​ ಪ್ರೇಮಿಗಳು ಅಕ್ಟೋಬರ್ 5ರಿಂದ ಹೊಸ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. 140 ಕೋಟಿ ಭಾರತೀಯರು ಭಾರತ ತಂಡದ (Team India) ಗೆಲುವಿಗೆ ಮೆಗಾ ಟೂರ್ನಿ ಆರಂಭಕ್ಕೂ ಮುನ್ನವೇ ಪ್ರಾರ್ಥಿಸುತ್ತಿದ್ದಾರೆ. ಭಾರತದ ಬಲಿಷ್ಠ 15 ಸದಸ್ಯರ ಸೇನೆಯೂ ಎದುರಾಳಿಯನ್ನು ಸೋಲಿಸಿ ಪರಾಕ್ರಮ ಮೆರೆಯಲು ಸಜ್ಜಾಗಿದೆ.

ಅಶ್ವಿನ್ ಆಯ್ಕೆ, ಅಕ್ಷರ್​​ ಔಟ್​

ಆದರೆ ಕ್ರಿಕೆಟ್​​ ಯುದ್ಧಕ್ಕೆ ಕೆಲವೇ ದಿನಗಳಿರುವಾಗ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಸ್ಪಿನ್​ ಆಲ್​ರೌಂಡರ್​ ಅಕ್ಷರ್​​ ಪಟೇಲ್​ಗೆ (Axar Patel) ದುರಾದೃಷ್ಟ ಬೆನ್ನು ಬಿದ್ದರೆ, ಅನುಭವಿ ಆಫ್​ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​ಗೆ (R Ashwin) ಅದೃಷ್ಟದ ಬಾಗಿಲು ತೆರೆದಿದೆ. ಗಾಯದಿಂದ ಅಕ್ಷರ್ ಪಟೇಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಕ್ಷರ್​​ ಗಾಯವೇ ವರದಾನವಾಗಿ ಅಶ್ವಿನ್​​ಗೆ ತಂಡದಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ.

2011ರ ವಿಶ್ವಕಪ್ ತಂಡದಲ್ಲಿದ್ದವರು ಇಬ್ಬರೇ!

ಅಶ್ವಿನ್ ಆಯ್ಕೆಯ ನಂತರ ಹೊಸ ಚರ್ಚೆಯೊಂದು ಶುರುವಾಗಿದೆ. ಈ ಚರ್ಚೆಗೆ ವಿರಾಟ್ ಕೊಹ್ಲಿಯೂ (Virat Kohli) ಸೇರಿದ್ದಾರೆ. ಹೌದು, 2011ರ ಏಕದಿನ ವಿಶ್ವಕಪ್​ ಆಡಿದವರ ಪೈಕಿ 2023ರ ವಿಶ್ವಕಪ್​ ಆಡುತ್ತಿರುವ ಆಟಗಾರರು ಇಬ್ಬರು ಮಾತ್ರ. ಅದು ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮಾತ್ರ. ಈ ಇಬ್ಬರು 2011ರ ಏಕದಿನ ವಿಶ್ವಕಪ್ (ICC ODI World Cup 2011) ವಿಜೇತ ಟೀಮ್ ಇಂಡಿಯಾದ ಭಾಗವಾಗಿದ್ದರು. ಇದೀಗ ಮತ್ತೆ ಒಂದಾಗಿದೆ ಈ ಜೋಡಿ.

48 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಸಜ್ಜು

ಒಂದ್ವೇಳೆ ಭಾರತ ತಂಡ 2023ರ ಏಕದಿನ ವಿಶ್ವಕಪ್ ಗೆದ್ದರೆ, ಕೊಹ್ಲಿ ಮತ್ತು ಅಶ್ವಿನ್ ವಿಶೇಷ ದಾಖಲೆ ಬರೆಯಲಿದ್ದಾರೆ. ಹೌದು, 48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದ ಭಾರತದ ಆಟಗಾರರು ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಏಕದಿನ ವಿಶ್ವಕಪ್​ ಚರಿತ್ರೆಯಲ್ಲಿ ಯಾವೊಬ್ಬ ಭಾರತದ ಆಟಗಾರನು 2 ಬಾರಿ ವಿಶ್ವಕಪ್ ಗೆದ್ದಿಲ್ಲ. ಇದೀಗ ಕೊಹ್ಲಿ-ಅಶ್ವಿನ್​ಗೆ ಅದ್ಭುತ ಅವಕಾಶ ಸಿಕ್ಕಿದೆ. ಈ ಜೋಡಿ 2011ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. ಆದರೆ ಬೇರೆ ದೇಶಗಳಲ್ಲಿ ಎರಡೆರಡು ವಿಶ್ವಕಪ್ ಗೆದ್ದಿರುವ ಉದಾಹರಣೆ ಇದೆ. ಅದರಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್​ ಇಂಡೀಸ್​​ (1975, 1979ರ ಏಕದಿನ ವಿಶ್ವಕಪ್) ಆಟಗಾರರು ಇದ್ದಾರೆ ಎಂಬುದು ವಿಶೇಷ.

ಇಂದು ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯ

ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ಸರಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತ ತಂಡವು, ಏಕದಿನ ವಿಶ್ವಕಪ್​ ಟೂರ್ನಿಯ ಮೆಗಾ ಟಾಸ್ಕ್​ಗೆ ಸಿದ್ಧಗೊಂಡಿದೆ. ಅಕ್ಟೋಬರ್ 5ರಿಂದ ವಿಶ್ವಕಪ್​ ಆರಂಭವಾಗಲಿದೆ. ಅದಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ತೊಡಗಲಿದ್ದು, ಭಾರತ ತಂಡವು ಇಂದು ಇಂಗ್ಲೆಂಡ್​ ತಂಡದ ಸವಾಲಿಗೆ ಸಿದ್ಧವಾಗಿದೆ. ಇನ್ನು ಅಕ್ಟೋಬರ್​ 8ರಂದು ವಿಶ್ವಕಪ್​​ನಲ್ಲಿ ಶ್ರೀಲಂಕಾ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಏಕದಿನ ವಿಶ್ವಕಪ್​ಗೆ ಭಾರತ ಅಂತಿಮ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ