logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೈಫ್​ನಿಂದ ಸಹರಾನ್​ವರೆಗೆ 9 ಫೈನಲ್, 5 ಪ್ರಶಸ್ತಿ; ಅಂಡರ್-19 ವಿಶ್ವಕಪ್ ಗೆದ್ದು-ಸೋತ ಭಾರತದ ಒಂದು ನೋಟ

ಕೈಫ್​ನಿಂದ ಸಹರಾನ್​ವರೆಗೆ 9 ಫೈನಲ್, 5 ಪ್ರಶಸ್ತಿ; ಅಂಡರ್-19 ವಿಶ್ವಕಪ್ ಗೆದ್ದು-ಸೋತ ಭಾರತದ ಒಂದು ನೋಟ

Prasanna Kumar P N HT Kannada

Feb 11, 2024 09:17 PM IST

google News

ಕೈಫ್​ನಿಂದ ಸಹರಾನ್​ವರೆಗೆ 9 ಫೈನಲ್, 5 ಪ್ರಶಸ್ತಿ; ಅಂಡರ್-19 ವಿಶ್ವಕಪ್ ಗೆದ್ದು-ಸೋತ ಭಾರತದ ಒಂದು ನೋಟ

    • India at U19 World Cup Finals: ಅಂಡರ್​-19 ವಿಶ್ವಕಪ್ ಇತಿಹಾಸದಲ್ಲಿ 9 ಬಾರಿ ಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾ 5 ಸಲ ಟ್ರೋಫಿ ಗೆದ್ದಿದೆ. ಹಾಗಾದರೆ ಯಾವ ವರ್ಷ ಭಾರತ ಪ್ರಶಸ್ತಿ ಗೆದ್ದಿದೆ ಎಂಬುದರ ಪಟ್ಟಿ ಈ ಮುಂದಿನಂತಿದೆ.
ಕೈಫ್​ನಿಂದ ಸಹರಾನ್​ವರೆಗೆ 9 ಫೈನಲ್, 5 ಪ್ರಶಸ್ತಿ; ಅಂಡರ್-19 ವಿಶ್ವಕಪ್ ಗೆದ್ದು-ಸೋತ ಭಾರತದ ಒಂದು ನೋಟ
ಕೈಫ್​ನಿಂದ ಸಹರಾನ್​ವರೆಗೆ 9 ಫೈನಲ್, 5 ಪ್ರಶಸ್ತಿ; ಅಂಡರ್-19 ವಿಶ್ವಕಪ್ ಗೆದ್ದು-ಸೋತ ಭಾರತದ ಒಂದು ನೋಟ

ಅಂಡರ್​-19 ಕ್ರಿಕೆಟ್ ವಿಶ್ವಕಪ್​ ಟೂರ್ನಿಯ ಫೈನಲ್​​ನಲ್ಲಿ ಭಾರತ ಯುವಕರ ತಂಡ ಎಡವಿದೆ. ದಾಖಲೆಯ ಆರನೇ ಕಿರಿಯರ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಕನಸು ಭಗ್ನಗೊಂಡಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆಸ್ಟ್ರೇಲಿಯಾ 79 ರನ್​ಗಳ ಅಂತರದ ಗೆಲುವು ದಾಖಲಿಸಿ 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗಾದರೆ ಭಾರತ ಎಷ್ಟು ಬಾರಿ ಫೈನಲ್ ಪ್ರವೇಶಿಸಿದೆ, ಎಷ್ಟು ಸಲ ಚಾಂಪಿಯನ್ ಆಗಿದೆ, ಎಷ್ಟು ಬಾರಿ ಎಡವಿದೆ ಎನ್ನುವುದರ ಮಾಹಿತಿ ಇಲ್ಲಿದೆ.

2000 ವಿಶ್ವಕಪ್​ನಲ್ಲಿ ಚೊಚ್ಚಲ ಟ್ರೋಫಿ

2000 ರಲ್ಲಿ ಶ್ರೀಲಂಕಾ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ ಭಾರತವು ತನ್ನ ಮೊದಲ ಅಂಡರ್ 19 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತು. ಮೊಹಮ್ಮದ್ ಕೈಫ್ ತಂಡದ ನಾಯಕನಾಗಿದ್ದರು. ಯುವರಾಜ್ ಸಿಂಗ್ ಸಹ ಈ ತಂಡದಲ್ಲಿದ್ದರು. ಶಲಭ್ ಶ್ರೀವಾಸ್ತವ 3 ವಿಕೆಟ್ ಕಬಳಿಸುವ ಮೂಲಕ ಲಂಕಾವನ್ನು 178 ರನ್​​ಗಳಿಗೆ ಆಲೌಟ್ ಮಾಡಲು ಸಾಧ್ಯವಾಯಿತು. ರನ್ ಚೇಸ್​​ನಲ್ಲಿ ಭಾರತ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ಗಳ ಕೊಡುಗೆಯೊಂದಿಗೆ 179 ರನ್​ಗಳ ಗುರಿ ತಲುಪಿತು.

2006ರ ವಿಶ್ವಕಪ್​​ನಲ್ಲಿ ಸೋಲು

2006ರ ಫೆಬ್ರವರಿಯಲ್ಲಿ ಭಾರತವು ಮತ್ತೊಮ್ಮೆ ಅಂಡರ್ -19 ವಿಶ್ವಕಪ್ ಫೈನಲ್​ಗೆ ಪ್ರವೇಶಿಸಿತು. ಆದರೆ, ರನ್ನರ್​ಅಪ್​ಗೆ ತೃಪ್ತಿಗೊಂಡು ನಿರಾಸೆ ಅನುಭವಿಸಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 38 ರನ್​ಗಳಿಂದ ಸೋಲನುಭವಿಸಿತು. 110 ರನ್​​​ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡ 71 ರನ್​​ಗಳಿಗೆ ಆಲೌಟ್​ ಆಗಿತ್ತು. ರವಿಕಾಂತ್ ಶುಕ್ಲಾ ಭಾರತ ತಂಡದ ನಾಯಕನಾಗಿದ್ದರು.

2008ರ ವಿಶ್ವಕಪ್​​ನಲ್ಲಿ ಮತ್ತೊಂದು ಟ್ರೋಫಿ

ತಮ್ಮ ಬಲವಾದ ಪ್ರದರ್ಶನ ಮುಂದುವರಿಸಿದ ಭಾರತವು ಟೂರ್ನಿಯ ಮುಂದಿನ ಆವೃತ್ತಿಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ವಿರಾಟ್ ಕೊಹ್ಲಿ ನೇತೃತ್ವದ ಯುವ ಭಾರತೀಯ ತಂಡವು ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಡಕ್ವರ್ಥ್ ಲೂಯಿಸ್ ನಿಯಮದಡಿ 12 ರನ್​​ಗಳ ಅಂತರದಿಂದ ಸೋಲಿಸಿತು. ಆ ಮೂಲಕ ಭಾರತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು.

2012ರ ವಿಶ್ವಕಪ್​​ನಲ್ಲೂ ಭಾರತವೇ ಜಯಭೇರಿ

ಆಸ್ಟ್ರೇಲಿಯಾದಲ್ಲಿ ನಡೆದ 2012ರ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದು ಭಾರತಕ್ಕೆ ಸಿಕ್ಕ ಮೂರನೇ ಪ್ರಶಸ್ತಿಯಾಗಿದೆ. ಉನ್ಮುಕ್ತ್ ಚಾಂದ್ ನಾಯಕತ್ವದಲ್ಲಿ ಭಾರತ ತಂಡವು ಫೈನಲ್​​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಆರು ವಿಕೆಟ್​​ಗಳಿಂದ ಸೋಲಿಸಿತು. ಚಾಂದ್ ಅವರು ಭರ್ಜರಿ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

2016ರ ವಿಶ್ವಕಪ್​​ ಫೈನಲ್​ನಲ್ಲಿ ಸೋಲು

2016ರ ಅಂಡರ್​ 19 ವಿಶ್ವಕಪ್​ನಲ್ಲಿ ಫೈನಲ್ ತಲುಪಿದರೂ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತು. ಇಶಾನ್ ಕಿಶನ್ ನೇತೃತ್ವದಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿತ್ತು. ಮೊದಲು ಬ್ಯಾಟಿಂಗ್ ನಡೆಸಿ 145 ರನ್​ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ಮೂರು ಎಸೆತಗಳು ಬಾಕಿ ಇರುವಂತೆ ವಿಂಡೀಸ್ ಗೆದ್ದು ಬೀಗಿತು.

2018ರ ವಿಶ್ವಕಪ್​​ನಲ್ಲೂ ಇಂಡಿಯಾಗೆ ಟ್ರೋಫಿ

2018ರ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಿದ ಪೃಥ್ವಿ ಶಾ ನೇತೃತ್ವದ ಭಾರತ ತಂಡವು ಆಸೀಸ್​ ತಂಡವನ್ನು ಎಂಟು ವಿಕೆಟ್​ಗಳಿಂದ ಮಣಿಸಿತು. ಮನ್ಜೋತ್ ಕಲ್ರಾ ಅವರ ಶತಕದ ನೆರವಿನಿಂದ ತಂಡವು 11 ಓವರ್​​​ಗಳು ಬಾಕಿ ಇರುವಾಗಲೇ 219 ರನ್​ಗಳ ಗುರಿಯನ್ನು ಬೆನ್ನಟ್ಟಿತು. ಇದು ಭಾರತಕ್ಕೆ ಸಿಕ್ಕ ನಾಲ್ಕನೇ ಪ್ರಶಸ್ತಿಯಾಗಿದೆ.

2020ರ ವಿಶ್ವಕಪ್​ನಲ್ಲಿ ಬಾಂಗ್ಲಾ ವಿರುದ್ಧ ಸೋಲು

2020ರ ಅಂಡರ್ 19 ವಿಶ್ವಕಪ್​ನಲ್ಲಿ ಭಾರತದ ಪ್ರಯಾಣವು ನೆರೆಯ ಬಾಂಗ್ಲಾದೇಶ ವಿರುದ್ಧ ಫೈನಲ್​ನಲ್ಲಿ ಹೃದಯ ವಿದ್ರಾವಕ ಸೋಲು ಅನುಭವಿಸಿತು. ಭಾರತ ಕೇವಲ 177 ರನ್​​​ಗಳಿಗೆ ಆಲೌಟ್​ ಆಗಿತ್ತು. ಬಾಂಗ್ಲಾದೇಶವು 3 ವಿಕೆಟ್​​ಗಳು ಬಾಕಿ ಇರುವಾಗಲೇ ಗುರಿಯನ್ನು ಬೆನ್ನಟ್ಟಿತು. ಅಂದು ಪ್ರಿಯಂ ಗರ್ಗ್​ ತಂಡದ ನಾಯಕನಾಗಿದ್ದರು.

2022ರಲ್ಲಿ ಭಾರತಕ್ಕೆ ಸಿಕ್ತು 5ನೇ ಟ್ರೋಫಿ

ರಾಜ್ ಬಾವಾ ಅವರ ಅದ್ಭುತ ಆಲ್​ರೌಂಡ್ ಪ್ರದರ್ಶನದ ನೆರವಿನಿಂದ ಭಾರತ 5ನೇ ಬಾರಿಗೆ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿದ ಭಾರತ ಪ್ರಬಲ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿತು. ಬೌಲಿಂಗ್​ನಲ್ಲಿ 5 ವಿಕೆಟ್, ಬ್ಯಾಟಿಂಗ್​ನಲ್ಲಿ 54 ವಿಕೆಟ್ ಪಡೆದ ಬಾವಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯಶ್ ಧುಲ್ ಭಾರತದ ನಾಯಕನಾಗಿದ್ದರು.

2024ರಲ್ಲಿ 6ನೇ ಟ್ರೋಫಿ ಕನಸು ಭಗ್ನ

ಭಾರತ ಆರನೇ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿತ್ತು. ಆದರೆ ಕನಸು ಭಗ್ನಗೊಂಡಿತು. ಉದಯ್ ಸಹರಾನ್ ನಾಯಕತ್ವದಲ್ಲಿ ಭಾರತ ಫೈನಲ್​​ನಲ್ಲಿ ಸೋಲು ಅನುಭವಿಸಿತು. ಆಸ್ಟ್ರೇಲಿಯಾ ವಿರುದ್ಧ 79 ರನ್​ಗಳ ಅಂತರದಿಂದ ಸೋಲುನುಭವಿಸಿತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭಾರತ ಫೈನಲ್​​​ನಲ್ಲಿ ನಿರಾಸೆ ಮೂಡಿಸಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ