logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕಿರಿಯರ ವಿಶ್ವಕಪ್​ ಫೈನಲ್‌​ನಲ್ಲೂ ಸೋಲು; 8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ​ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ

ಕಿರಿಯರ ವಿಶ್ವಕಪ್​ ಫೈನಲ್‌​ನಲ್ಲೂ ಸೋಲು; 8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ​ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ

Jayaraj HT Kannada

Feb 11, 2024 10:06 PM IST

google News

8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ​ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ

    • India vs Australia: ಕೇವಲ 8 ತಿಂಗಳ ಅಂತರದಲ್ಲಿ ನಡೆದ ಮೂರು ಐಸಿಸಿ ಫೈನಲ್‌​​ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕಂಡ ಮೂರನೇ ಸೋಲು. ಈ ಮೂರು ಬಾರಿ ಕೂಡಾ ಟೀಮ್‌ ಇಂಡಿಯಾ ವಿರುದ್ಧ ಗೆದ್ದ ಆಸೀಸ್‌ ಚಾಂಪಿಯನ್​ ಆಗಿದೆ. ಕಳೆದ ವರ್ಷ ನಡೆದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್‌​ಶಿಪ್​ ಫೈನಲ್‌ ಹಾಗೂ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಸೋತಿದೆ.
8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ​ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ
8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ​ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ

ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಹಿರಿಯರ ಕ್ರಿಕೆಟ್‌ ತಂಡ ಸೋಲು ಕಂಡು ಇನ್ನೂ ಮೂರು ತಿಂಗಳು ಕೂಡಾ ಪೂರ್ಣಗೊಂಡಿಲ್ಲ. ಅಷ್ಟರೊಳಗೆ ಭಾರತ ಕಿರಿಯರ ತಂಡ ಕೂಡಾ ಅಂಡರ್‌ 19 ವಿಶ್ವಕಪ್‌ ಫೈನಲ್‌ (ICC Under 19 World Cup 2024) ಪಂದ್ಯದಲ್ಲಿ ಸೋತು, 6ನೇ ಬಾರಿಗೆ ವಿಶ್ವಚಾಂಪಿಯನ್‌ ಆಗುವ ಅವಕಾಶ ಕಳೆದುಕೊಂಡಿದೆ. ಇನ್ನೂ ಖೇದವಾಗುವ ಅಂಶವೆಂದರೆ, ಈ ಎರಡೂ ಬಾರಿಯೂ ಭಾರತ ಸೋಲು ಕಂಡಿದ್ದು ಆಸ್ಟ್ರೇಲಿಯಾ (India U19 vs Australia U19) ವಿರುದ್ಧವೇ.

2024ರ ಅಂಡರ್​-19 ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ, 5 ಬಾರಿಯ ಚಾಂಪಿಯನ್ ಭಾರತ ತಂಡವನ್ನು ಭರ್ಜರಿ 79 ರನ್‌​ಗಳ ಅಂತರದಿಂದ ಮಣಿಸಿದ ಕಾಂಗರೂ ಪಡೆ ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಇದೇ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ 6 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತ್ತು. ಆ ನೋವು ಮಾಸುವ ಮುನ್ನವೇ ಭಾರತ ಮತ್ತೊಮ್ಮೆ ಆಸೀಸ್‌ ವಿರುದ್ಧ ಮುಗ್ಗರಿಸಿದೆ.

ಇದು ಕೇವಲ 8 ತಿಂಗಳ ಅಂತರದಲ್ಲಿ ನಡೆದ ಮೂರು ಐಸಿಸಿ ಫೈನಲ್‌​​ಗಳಲ್ಲಿ ಭಾರತ ಕಂಡ ಮೂರನೇ ಸೋಲು. ಈ ಮೂರು ಬಾರಿ ಕೂಡಾ ಟೀಮ್‌ ಇಂಡಿಯಾ ವಿರುದ್ಧ ಗೆದ್ದು ಆಸ್ಟ್ರೇಲಿಯಾ ಚಾಂಪಿಯನ್​ ಆಗಿ ಮಿಂಚಿದೆ. ಕಳೆದ ವರ್ಷದ (2023) ಜೂನ್‌ 7ರಂದು ಆರಂಭವಾದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್‌​ಶಿಪ್​ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಪ್ಯಾಟ್ ಕಮಿನ್ಸ್ ಪಡೆ 209 ರನ್‌ಗಳಿಂದ ಸೋಲಿಸಿತ್ತು. ಪಂದ್ಯವು ಜೂನ್‌ 11ರಂದು ಮುಕ್ತಾಯಗೊಂಡಿತ್ತು. ಇಂದು ಫೆಬ್ರವರಿ 11. ಇಂದಿಗೆ ಸರಿಯಾಗಿ 8 ತಿಂಗಳು ತುಂಬಿವೆ.

ಇದನ್ನೂ ಓದಿ | ಅಂಡರ್​-19 ವಿಶ್ವಕಪ್​; ಭಾರತದ 6ನೇ ಟ್ರೋಫಿ ಕನಸು ಭಗ್ನ, ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಆಸ್ಟ್ರೇಲಿಯಾ

ಆ ಬಳಿಕ ನವೆಂಬರ್‌ 19ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳಿಂದ ಸೋತು ವಿಶ್ವಕಪ್‌ ಕೈಚೆಲ್ಲಿತು. ಇದಾದ ಮೂರು ತಿಂಗಳೊಳಗೆ ಕಿರಿಯರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಮುಗ್ಗರಿಸಿದೆ. ಮತ್ತೊಮ್ಮೆ ಭಾರತೀಯರ ಹೃದಯ ಚೂರಾಗಿದೆ.

ಟೂರ್ನಿಯುದ್ದಕ್ಕೂ ಅಜೇಯ, ಫೈನಲ್‌ನಲ್ಲಿ ಸೋಲು

ಭಾರತೀಯರಿಗೆ ಇನ್ನೂ ನೋವಾಗುವ ವಿಚಾರವೆಂದರೆ, ಕಳೆದ ಬಾರಿಯ ಏಕದಿನ ವಿಶ್ವಕಪ್‌ ಮತ್ತು ಈ ಬಾರಿಯ ಕಿರಿಯರ ವಿಶ್ವಕಪ್‌ ಎರಡು ಟೂರ್ನಿಯಲ್ಲೂ ಭಾರತ ತಂಡ ಟೂರ್ನಿಯುದ್ದಕ್ಕೂ ಅಜೇಯವಾಗಿತ್ತು. ಏಕದಿನ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಏಕಪಕ್ಷೀಯವಾಗಿ ಭರ್ಜರಿ ಜಯ ಸಾಧಿಸಿದ್ದ ಭಾರತ, ಸೆಮೀಸ್‌ನಲ್ಲಿ ಕಿವೀಸ್‌ ಮಣಿಸಿ ಫೈನಲ್‌ ಪ್ರವೇಶಿಸಿತ್ತು. ಆದರೆ, ಫೈನಲ್‌ ಪಂದ್ಯ ಮಾತ್ರ ಸೋತು ಮುಗ್ಗರಿಸಿತು. ಈ ಬಾರಿಯ ಅಂಡರ್‌ 19 ವಿಶ್ವಕಪ್‌ನಲ್ಲೂ ಇಂತಹದೇ ಸಂದರ್ಭ ಮರುಕಳಿಸಿದೆ. ಗುಂಪು ಹಂತ ಹಾಗೂ ಸೂಪರ್‌ ಸಿಕ್ಸ್‌ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದ ಉದಯ್‌ ಸಹರಾನ್‌ ಬಳಗವು, ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿತ್ತು. ಅಜೇಯವಾಗಿ ಫೈನಲ್‌ ಪ್ರವೇಶಿಸಿದ ತಂಡವು ಕೊನೆಯ ಒಂದು ಹೆಜ್ಜೆಯನ್ನು ಸರಿಯಾಗಿ ಇಡುವಲ್ಲಿ ಎಡವಿದೆ.

ಇದನ್ನೂ ಓದಿ | ಅಂಡರ್​-19 ವಿಶ್ವಕಪ್​; ಭಾರತದ 6ನೇ ಟ್ರೋಫಿ ಕನಸು ಭಗ್ನ, ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಆಸ್ಟ್ರೇಲಿಯಾ

ಐಸಿಸಿ ಈವೆಂಟ್‌ನ ಫೈನಲ್‌ ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿಯಾಗಿರುವುದು ಇದು ಎಂಟನೇ ಬಾರಿ. ಜಾಗತಿಕ ಫೈನಲ್‌ ಪಂದ್ಯಗಳ ಮುಖಾಮುಖಿ ವೇಳೆ ಭಾರತದ ವಿಜರುದ್ಧ ಆಸೀಸ್‌ ಮುನ್ನಡೆಯು 6:2ಕ್ಕೇರಿದೆ. ಇದರಲ್ಲಿ ಭಾರತದ ಎರಡು ಗೆಲುವುಗಳು ಪುರುಷರ ಅಂಡರ್‌ 19 ವಿಶ್ವಕಪ್ ಫೈನಲ್‌ ಪಂದ್ಯಗಳಲ್ಲೇ ಲಭಿಸಿದೆ. 2012 ಮತ್ತು 2018 ರಲ್ಲಿ ಆಸೀಸ್‌ ತಂಡವು ಭಾರತಕ್ಕೆ ಶರಣಾಗಿತ್ತು. ಉಳಿದ ಎಲ್ಲಾ ಆರು ಫೈನಲ್‌ಗಳಲ್ಲಿ ಭಾರತ ಸೋತಿದೆ.

ಇದನ್ನೂ ಓದಿ | ಕೈಫ್​ನಿಂದ ಸಹರಾನ್​ವರೆಗೆ 9 ಫೈನಲ್, 5 ಪ್ರಶಸ್ತಿ; ಅಂಡರ್-19 ವಿಶ್ವಕಪ್ ಗೆದ್ದು-ಸೋತ ಭಾರತದ ಒಂದು ನೋಟ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ