ಬ್ರಿಸ್ಬೇನ್‌ನಲ್ಲಿ ನಿಲ್ಲದ ಮಳೆ, ಗಬ್ಬಾ ಟೆಸ್ಟ್ ನೀರಸ ಡ್ರಾ; ತಲೆಕೆಳಗಾದ ಭಾರತ-ಆಸ್ಟ್ರೇಲಿಯಾ ಲೆಕ್ಕಾಚಾರ
Dec 18, 2024 12:07 PM IST
ಬ್ರಿಸ್ಬೇನ್‌ನಲ್ಲಿ ನಿಲ್ಲದ ಮಳೆ, ಭಾರತ-ಆಸ್ಟ್ರೇಲಿಯಾ ಗಬ್ಬಾ ಟೆಸ್ಟ್ ನೀರಸ ಡ್ರಾ
- ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಬ್ಬಾ ಟೆಸ್ಟ್‌ಗೆ ನಿರಂತರವಾಗಿ ಮಳೆ ಅಡ್ಡಿಪಡಿಸಿದ್ದು, ಅಂತಿಮ ದಿನದಾಟ ನಡೆಯಲಿಲ್ಲ. ಹೀಗಾಗಿ ಪಂದ್ಯ ಡ್ರಾಗೊಂಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ನಿರೀಕ್ಷೆಯಂತೆಯೇ ಡ್ರಾಗೊಂಡಿದೆ. ಅಂತಿಮ ದಿನದಾಟಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ದಿನದಾಟ ಪೂರ್ಣಗೊಳಿಸಲಾಗದೆ ಪಂದ್ಯವು ಫಲಿತಾಂಶವಿಲ್ಲದೆ ನೀರಸ ಡ್ರಾ ಕಂಡಿದೆ. ಐದನೇ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 89 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗಬ್ಬಾ ಟೆಸ್ಟ್ ಗೆಲ್ಲಲು 275 ರನ್‌ಗಳ ಗುರಿ ಪಡೆದ ಭಾರತ ತಂಡ, 2.1 ಓವರ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ 8 ರನ್ ಗಳಿಸಿದ್ದಾಗ ಮಳೆ ಆರಂಭವಾಯ್ತು. ಹೀಗಾಗಿ ಪಂದ್ಯವನ್ನು ಮೊಟಕುಗೊಳಿಸಲಾಯ್ತು. ಮಳೆ ನಿಲ್ಲುವ ಸೂಚನೆ ಸಿಗದ ಕಾರಣದಿಂದ ಪಂದ್ಯವನ್ನು ಡ್ರಾ ಮಾಡಲಾಗಿದೆ.
ಐದನೇ ದಿನದಾಟದ ಆರಂಭದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 260 ರನ್‌ಗಳಿಗೆ ಮುಗಿಸಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವನ್ನು ಭಾರತದ ವೇಗಿಗಳು ಕಟ್ಟಿ ಹಾಕಿದರು. ನಿರೀಕ್ಷೆಗೆ ತಕ್ಕಂತೆ ಅಬ್ಬರಿಸಲು ಕಾಂಗರೂಗಳಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಆಸೀಸ್ ತಂಡ 89 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೆಕ್‌ಸ್ವೀನ್, ಖವಾಜಾ, ಲಬುಶೇನ್, ಮಿಚೆಲ್ ಮಾರ್ಷ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಟ್ರಾವಿಟ್ ಹೆಡ್ 17 ರನ್ ಗಳಿಸಿದರು.
ಕೊನೆಯಲ್ಲಿ ನಾಯಕ ಕಮಿನ್ಸ್ 22 ರನ್ ಗಳಿಸಿದರು. ಅವರು ಔಟಾಗುತ್ತಿದ್ದಂತೆಯೇ ಆಸೀಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ ತಂಡವು ಕೊನೆಯ ಇನ್ನಿಂಗ್ಸ್ ಆರಂಭಿಸಿತು. ಆದರೆ 2.1 ಓವರ್ ಆಗುವಷ್ಟರಲ್ಲಿ ಮಳೆ ಅಡ್ಡಿಯಾಯ್ತು. ಭಾರತದ ವಿಕೆಟ್ ಕಳೆದುಕೊಳ್ಳದೆ 8 ರನ್ ಗಳಿಸಿ, ಗುರಿ ತಲುಪುವ ನಿರೀಕ್ಷೆಯಲ್ಲಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ತಲಾ 4 ರನ್ ಗಳಿಸಿದರು. ಆದರೆ, ಮಳೆ ನಿಲ್ಲದ ಕಾರಣದಿಂದ ಪಂದ್ಯವನ್ನು ಡ್ರಾ ಮಾಡಲಾಯ್ತು.
ಬಾಕ್ಸಿಂಗ್ ಡೇ ಟೆಸ್ಟ್ ನಿರ್ನಾಯಕ
ಭಾರತವು ಕೊನೆಯ ದಿನದಲ್ಲಿ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರ ಹಾಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಪಂದ್ಯ ಗೆದ್ದರೆ ಸರಣಿಯಲ್ಲಿ ಮಹತ್ವದ ಮುನ್ನಡೆ ಸಾಧ್ಯವಾಗಿತ್ತು. ಆದರೆ ಡ್ರಾ ಬಳಿಕ ಸರಣಿ 1-1ರಲ್ಲಿ ಸಮಬಲವಾಗಲಿದೆ. ಮುಂದೆ ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದ್ದು, ಉಭಯ ತಂಡಗಳಿಗೂ ನಿರ್ಣಾಯಕವಾಗಲಿದೆ.
ಡಬ್ಲ್ಯುಟಿಸಿ ಅಂಕಪಟ್ಟಿ
ಈ ಡ್ರಾದಿಂದ ಉಭಯ ತಂಡಗಳ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರಕ್ಕೆ ಹಿನ್ನಡೆಯಾಗಿದೆ. ಅದರಲ್ಲೂ ಭಾರತ ತಂಡ, ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದು, ಫೈನಲ್ ಟಿಕೆಟ್ ಬಹುತೇಕ ಖಚಿತಪಡಿಸಿದೆ. ಅತ್ತ ಆಸೀಸ್ ಎರಡನೇ ಸ್ಥಾನದಲ್ಲಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.