Rishabh Pant: ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ಗೆ ಮರಳಿದರೆ ಭಾರತ ತಂಡದಲ್ಲಿ ಯಾವ ಆಟಗಾರನ ಸ್ಥಾನಕ್ಕೆ ಕುತ್ತು?
Aug 21, 2024 09:47 AM IST
ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್
- Rishabh Pant: ಟೆಸ್ಟ್ ಕ್ರಿಕೆಟ್‌ಗೂ ಕಂಬ್ಯಾಕ್ ಮಾಡಲು ಸಜ್ಜಾಗಿರುವ ರಿಷಭ್ ಪಂತ್ಗೆ ನಿಜವಾದ ಪರೀಕ್ಷೆಯ ಸರದಿ ಬಂದಿದೆ. ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪಂತ್ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಭಾರತ ಕ್ರಿಕೆಟ್ ತಂಡದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಟೆಸ್ಟ್ ಸರಣಿಯ ಬಳಿಕ, ಪಂತ್ ಭೀಕರ ಕಾರು ಅಪಘಾತಕ್ಕೊಳಗಾದರು. ನಂತರ ದೀರ್ಘಕಾಲದವರೆಗೆ ಆಟದಿಂದ ದೂರ ಉಳಿದಿದ್ದರು. ಆದಾಗ್ಯೂ, ಐಪಿಎಲ್ 2024 ಮೂಲಕ ಮತ್ತೆ ಕಂಬ್ಯಾಕ್ ಮಾಡಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಮತ್ತೆ ಅವಕಾಶ ಪಡೆಯುವಲ್ಲಿ ಯಶಸ್ವಿಯಾದರು.
ಐಪಿಎಲ್ ಬೆನ್ನಲ್ಲೇ ನೇರವಾಗಿ ಭಾರತ ವಿಶ್ವಕಪ್ ಟಿ20 ತಂಡದಲ್ಲಿ ಸ್ಥಾನ ಪಡೆದ ಪಂತ್, ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲೂ ಏಕದಿನ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಆದರೆ ಈಗ ಪಂತ್ಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ಗೂ ಮರಳಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಇದು ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದೆ.
ಈ ಸರಣಿ ಮೂಲಕ ರಿಷಭ್ ಪಂತ್ ಭಾರತದ ಟೆಸ್ಟ್ ತಂಡದ ಭಾಗವಾಗುವುದು ಖಚಿತ. ಏಕೆಂದರೆ, ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರೆ ಆಡುವ 11ರ ಭಾಗವಾಗುತ್ತಾರೆಯೇ ಎಂಬುದು ಈಗ ಪ್ರಶ್ನೆಯಾಗಿದೆ. ಒಂದು ವೇಳೆ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದರೆ ಯಾರ ಸ್ಥಾನದಲ್ಲಿ ಆಡಲಿದ್ದಾರೆ? ಯಾರು ಬೆಂಚ್ ಕಾಯಬೇಕಾಗಬಹುದು?
ಧ್ರುವ್ ಜುರೆಲ್ ಸ್ಥಾನಕ್ಕೆ ಕುತ್ತು?
ಪಂತ್ ಮರಳಿದರೆ, ಧ್ರುವ್ ಜುರೆಲ್ ಸ್ಥಾನಕ್ಕೆ ಕುತ್ತು ಬರಲಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಅದ್ಭುತ ಪ್ರದರ್ಶನ ತೋರಿದ್ದ ಧ್ರುವ್ ಜುರೆಲ್, ಮುಂದಿನ ಸರಣಿಗಳಲ್ಲಿ ಬ್ಯಾಕಪ್ ವಿಕೆಟ್ ಕೀಪರ್ ಆಗಲಿದ್ದಾರೆ. ಏಕೆಂದರೆ ಈ ಸ್ಥಾನ ರಿಷಭ್ ಪಂತ್ ಪಾಲಾಗಲಿದೆ. ಇಂಡೋ-ಇಂಗ್ಲೆಂಡ್ ನಡುವೆ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಪಾದಾರ್ಪಣೆ ಮಾಡಿದರು. ಇವರು ತಮ್ಮ ಆಟದಿಂದ ಎಲ್ಲರನ್ನೂ ಮೆಚ್ಚಿಸಿದ್ದರು.
ಜುರೆಲ್ ಅವರು ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನು ಆಡಿ 63 ರ ಸರಾಸರಿಯಲ್ಲಿ 190 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ ಅರ್ಧಶತಕ ಮೂಡಿಬಂದಿತ್ತು. ತನ್ನ ವಿಕೆಟ್ ಕೀಪಿಂಗ್‌ನಿಂದಲೂ ಎಲ್ಲರನ್ನೂ ಆಕರ್ಷಿಸಿದ್ದರು. ಜುರೆಲ್ ಎಷ್ಟೇ ಅದ್ಬುತ ಪ್ರದರ್ಶನ ನೀಡಿದ್ದರೂ ಮುಂದಿನ ಸರಣಿಗಳಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಇದರ ಜತೆಗೆ ರಿಷಭ್ ಪಂತ್ ಮೇಲೆ ಉತ್ತಮ ಪ್ರದರ್ಶನ ನೀಡುವ ಒತ್ತಡ ಇದೆ. ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದರೆ ಮಾತ್ರ ಪಂತ್ ಸ್ಥಾನ ಉಳಿಸಿಕೊಳ್ಳಬಹುದು.
ಧ್ರುವ್ ಹಿಂದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ಪಂತ್ ಅವರ ಒಂದು ಕೆಟ್ಟ ಸರಣಿಯು ಅವರನ್ನು ಸಂಕಷ್ಟಕ್ಕೆ ದೂಡಬಹುದು. ಹಾಗಾಗಿ ಪಂತ್ ಅದ್ಭುತ ಪ್ರದರ್ಶನ ಅಗತ್ಯ ಇದೆ. ಕೊಂಚ ಎಡವಟ್ಟಾದರೂ ಸ್ಥಾನಕ್ಕೆ ಕುತ್ತು ಬರಬಹುದು.
ರಿಷಭ್ ಪಂತ್ ಟೆಸ್ಟ್ ವೃತ್ತಿಜೀವನ
26 ವರ್ಷದ ಪಂತ್ ಇದುವರೆಗೆ ಭಾರತಕ್ಕಾಗಿ ಒಟ್ಟು 33 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 56 ಇನ್ನಿಂಗ್ಸ್‌ಗಳಲ್ಲಿ 43ರ ಸರಾಸರಿಯಲ್ಲಿ 2271 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರ ಬ್ಯಾಟ್‌ನಿಂದ 5 ಶತಕ ಮತ್ತು 11 ಅರ್ಧ ಶತಕ ಬಂದಿದೆ.