ಗಯಾನಾದಲ್ಲಿ ಸತತ 12 ಗಂಟೆಗಳಿಂದ ಮಳೆ, ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯೋದೇ ಡೌಟ್; ರಿಸರ್ವ್ ಡೇ ನಿಯಮ ಹೇಳುವುದೇನು?
Jun 26, 2024 11:35 PM IST
ಗಯಾನಾದಲ್ಲಿ ಸತತ 12 ಗಂಟೆಗಳಿಂದ ಮಳೆ, ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯೋದೇ ಡೌಟ್; ರಿಸರ್ವ್ ಡೇ ನಿಯಮ ಹೇಳುವುದೇನು?
- India vs England weather report: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ನ ಸೆಮಿಫೈನಲ್ 2 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಆದರೆ, ಪಂದ್ಯ ಮಳೆಗೆ ಆಹುತಿಯಾಗುವ ಆತಂಕ ಸೃಷ್ಟಿಯಾಗಿದೆ. ಗಯಾನಾದಲ್ಲಿ ನಿರಂತರ ಮಳೆಯಿಂದ ಉಭಯ ತಂಡಗಳು ಅಭ್ಯಾಸ ಕೂಡ ನಡೆಸಿಲ್ಲ. ಪ್ರಸ್ತುತ ಟೀಮ್ ಇಂಡಿಯಾ 2022ರ ಟಿ20 ವಿಶ್ವಕಪ್ ಸೆಮೀಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯನ್ನು ಹಾಕಿಕೊಂಡಿರುವ ಭಾರತ ತಂಡಕ್ಕೆ ಮಳೆಯೇ ವಿಲನ್ ಆಗುವ ಸಾಧ್ಯತೆ ಇದೆ.
2022ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತದಲ್ಲಿ ಮಾಜಿ ಚಾಂಪಿಯನ್ ಭಾರತ ತಂಡವನ್ನು ಇಂಗ್ಲೆಂಡ್ 10 ವಿಕೆಟ್ಗಳಿಂದ ಸೋಲಿಸಿತು. ಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಇಂಗ್ಲೆಂಡ್ 2ನೇ ಬಾರಿಗೆ ಪ್ರಸಿದ್ಧ ಟ್ರೋಫಿಯನ್ನು ಎತ್ತಿ ಹಿಡಿದಿತು. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಟಿ20 ವಿಶ್ವಕಪ್ನ 2ನೇ ಸೆಮಿಫೈನಲ್ ಪಂದ್ಯಕ್ಕೆ ಮಳೆಯ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ. ಗಯಾನಾದ ಹವಾಮಾನ ಮುನ್ಸೂಚನೆ ತೀವ್ರ ಕೆಟ್ಟದಾಗಿದೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಆಟಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಈಗಾಗಲೇ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆಯಾಗಿದ್ದು, ನಾಳೆಯೂ ಪಂದ್ಯದ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ವಾರವಿಡೀ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಕಾಣಿಸಿಕೊಂಡರೂ ಪಂದ್ಯಕ್ಕೆ 250 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ. 5 ಓವರ್ ಅಥವಾ ಸೂಪರ್ ಓವರ್ ಆಡಲು ಅವಕಾಶ ಸಿಕ್ಕರೂ ಪಂದ್ಯ ನಡೆಸಲಾಗುತ್ತದೆ.
ಅಚ್ಚರಿ ಸುದ್ದಿ ಏನೆಂದರೆ, ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಪಂದ್ಯ ಸ್ಥಗಿತಗೊಂಡರೆ ಸೂಪರ್-8 ಗ್ರೂಪ್ 1ರಲ್ಲಿ ಭಾರತ ಅಗ್ರಸ್ಥಾನಿಯಾಗಿ ಫೈನಲ್ಗೇರಲಿದೆ. ಏಕೆಂದರೆ ಇಂಗ್ಲೆಂಡ್ಗಿಂತ ಹೆಚ್ಚು ಅಂಕ, ರನ್ ರೇಟ್ ಹೊಂದಿದೆ. ಗುರುವಾರ ಪಂದ್ಯವನ್ನು ಆಡದಿದ್ದರೆ, ಶುಕ್ರವಾರ ಪಂದ್ಯವನ್ನು ಮರು ಆಯೋಜಿಸುವ ಸಾಧ್ಯತೆಯಿಲ್ಲ.
ಸಂಜೆ 5-6 ಗಂಟೆಯ ನಡುವೆ ಮಳೆ ತೀವ್ರಗೊಳ್ಳುವ ನಿರೀಕ್ಷೆಯಿದೆ. ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಪಂದ್ಯವು ಸ್ಥಳೀಯ ಸಮಯ ಬೆಳಿಗ್ಗೆ 10:30 ಕ್ಕೆ (ಭಾರತೀಯ ಕಾಲಮಾನ ರಾತ್ರಿ 8:00) ಪ್ರಾರಂಭವಾಗಲಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 7.30ಕ್ಕೆ) ನಡೆಯಲಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯ ವಿಳಂಬವಾಗುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧದ ಟಿ 20 ವಿಶ್ವಕಪ್ 2024 ರ ಸೆಮಿಫೈನಲ್ ಪಂದ್ಯಕ್ಕೆ ಮುಂಚಿತವಾಗಿ ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಗಯಾನಾಕ್ಕೆ ಆಗಮಿಸಿದೆ. ಟಿ20 ವಿಶ್ವಕಪ್ ಸೆಮಿಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡ ವಿಡಿಯೋದಲ್ಲಿ ನಾಯಕ ರೋಹಿತ್, ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಇತರ ಆಟಗಾರರು ಬ್ಲಾಕ್ಬಸ್ಟರ್ ಮುಖಾಮುಖಿಗಾಗಿ ಗಯಾನಾಕ್ಕೆ ಬರುವುದನ್ನು ಕಾಣಬಹುದು. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವೂ ಸೆಮಿಫೈನಲ್ಗೆ ಈಗಾಗಲೇ ಆಗಮಿಸಿದೆ. ಗ್ರೂಪ್-2ರಲ್ಲಿ ಎರಡನೇ ಸ್ಥಾನ ಪಡೆದ ನಂತರ ಹಾಲಿ ಚಾಂಪಿಯನ್ಸ್ ಜಾರ್ಜ್ಟೌನ್ಗೆ ವಿಮಾನ ಹತ್ತಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ