ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ; ಭಾರತ vs ನ್ಯೂಜಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ, ನೇರಪ್ರಸಾರ ವಿವರ
Oct 14, 2024 02:13 PM IST
ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ; ಭಾರತ vs ನ್ಯೂಜಿಲೆಂಡ್ ಸರಣಿ ವೇಳಾಪಟ್ಟಿ, ನೇರಪ್ರಸಾರ
- ಭಾರತ vs ನ್ಯೂಜಿಲೆಂಡ್: ಅಕ್ಟೋಬರ್ 16ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಸರಣಿಯ ವೇಳಾಪಟ್ಟಿ, ನೇರಪ್ರಸಾರ ವಿವರ ಹಾಗೂ ತಂಡಗಳ ಪಟ್ಟಿ ಇಲ್ಲಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಈ ಸರಣಿ ಮಹತ್ವದ್ದಾಗಿದೆ.
ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಮ್ ಇಂಡಿಯಾ, ಇದೀಗ ತವರಿನಲ್ಲಿ ಮತ್ತೊಂದು ಸರಣಿಗೆ ಸಜ್ಜಾಗಿದೆ. ಅಕ್ಟೋಬರ್ 16ರಿಂದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಈಗಾಗಲೇ ತಂಡದ ಕ್ಯಾಂಪ್‌ನಲ್ಲಿ ಆಟಗಾರರು ಸೇರಿಕೊಂಡಿದ್ದಾರೆ. ಭಾರತವು ಈ ವರ್ಷ ಒಂದರ ನಂತರ ಮತ್ತೊಂದರಂತೆ ಸರಣಿಗಳಲ್ಲಿ ಭಾಗಿಯಾಗುತ್ತಿದ್ದು, ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯ ನಡೆದ ನಾಲ್ಕು ದಿನದೊಳಗೆ ಮತ್ತೊಂದು ಸರಣಿ ಆರಂಭವಾಗುತ್ತಿದೆ.
ಸದ್ಯ ಭಾರತ ತಂಡದ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನತ್ತ ನೆಟ್ಟಿದೆ. ಸತತ ಎರಡೂ ಆವೃತ್ತಿಗಳಲ್ಲಿ ಫೈನಲ್ ತಲುಪಿ ಡಬ್ಲ್ಯುಟಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ಟೀಮ್ ಇಂಡಿಯಾ, ಈ ಬಾರಿಯೂ ಸದ್ಯ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಕಿವೀಸ್ ವಿರುದ್ಧ ಸರಣಿಯಲ್ಲಿ ಮುನ್ನಡೆ ಸಾಧಿಸಿ, ಹೆಚ್ಚು ಅಂಕ ಕಲೆ ಹಾಕುವ ವಿಶ್ವಾಸದಲ್ಲಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಸರಣಿ ಮಹತ್ವದ್ದಾಗಿದೆ.
ಈಗಾಗಲೇ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ನಂತರ, ರೋಹಿತ್ ಶರ್ಮಾ ಬಳಗವು ಹೆಚ್ಚು ಆತ್ಮವಿಶ್ವಾಸದೊಂದಿಗೆ ಕಿವೀಸ್ ಬಳಗವನ್ನು ಎದುರಿಸುತ್ತಿದೆ. ಆದರೆ, ಅತ್ತ ನ್ಯೂಜಿಲ್ಯಾಂಡ್ ತಂಡವು ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಲಂಕಾ ನೆಲದಲ್ಲಿ 2-0 ಅಂತರದಿಂದ ಸರಣಿ ಸೋಲನ್ನು ಅನುಭವಿಸಿ ನಿರಾಶೆ ಅನುಭವಿಸಿದೆ.
ಪಂದ್ಯದ ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿಯು ಅಕ್ಟೋಬರ್ 16ರಂದು ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದರೆ, ಮೂರನೇ ಮತ್ತು ಅಂತಿಮ ಟೆಸ್ಟ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಾಸ್ ಮತ್ತು ಪಂದ್ಯದ ಆರಂಭ ಸಮಯ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎಲ್ಲಾ ಮೂರು ಪಂದ್ಯಗಳ ಟಾಸ್ ಪ್ರಕ್ರಿಯೆ ಬೆಳಗ್ಗೆ 9:00 ಗಂಟೆಗೆ ನಡೆಯಲಿದೆ. ಪಂದ್ಯವು 9:30ಕ್ಕೆ ಪ್ರಾರಂಭವಾಗುತ್ತದೆ.
ನೇರಪ್ರಸಾರ, ಲೈವ್ ಸ್ಟ್ರೀಮ್ ವೀಕ್ಷಿಸುವುದು ಹೇಗೆ?
ಭಾರತದಲ್ಲಿ ಭಾರತ vs ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಸ್ಪೋರ್ಟ್ಸ್ 18 ವಾಹಿನಿಯು ನೇರಪ್ರಸಾರ ಮಾಡುತ್ತದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಸರಣಿಯನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಹಿಂದಿ, ಇಂಗ್ಲೀಷ್, ಕನ್ನಡ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ವೀಕ್ಷಕ ವಿವರಣೆಯೊಂದಿಗೆ ಪಂದ್ಯಗಳನ್ನು ವೀಕ್ಷಿಸಬಹುದು.
ಸರಣಿ ವೇಳಾಪಟ್ಟಿ
ಟೆಸ್ಟ್ ಸರಣಿಗೆ ಎರಡು ತಂಡಗಳು ಹೀಗಿವೆ
ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ನ್ಯೂಜಿಲೆಂಡ್ ತಂಡ: ಟಾಮ್ ಲಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್ವೆಲ್ (1ನೇ ಟೆಸ್ಟ್ ಮಾತ್ರ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ವಿಲ್ ಓ'ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್ , ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ಇಶ್ ಸೋಧಿ (2 ಮತ್ತು 3ನೇ ಟೆಸ್ಟ್ ಮಾತ್ರ), ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.