ದುರದೃಷ್ಟಕರ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆ ಆಗಿಲ್ಲ ಈ 5 ಆಟಗಾರರು -IND vs NZ
ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಮುಂಬರುವ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಈ ಸರಣಿಗೆ ಕೆಲವು ಆಟಗಾರರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಅಂತಹ 5 ಆಟಗಾರರು ಯಾರು ಎಂಬುದನ್ನು ನೋಡೋಣ.
ಅಕ್ಟೋಬರ್ 16ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕನಾಗಿದ್ದು, ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ. ಆದರೆ, ಈ ಸರಣಿಗೆ ಕೂಡ ಕೆಲ ಆಟಗಾರರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಅಂತಹ 5 ಆಟಗಾರರ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಸರಣಿಯಲ್ಲಿ ಅವರು ತಂಡದ ಭಾಗವಾಗಬಹುದಿತ್ತು. ಆದರೆ ಬಿಸಿಸಿಐ ಅವರನ್ನು ಮತ್ತೊಮ್ಮೆ ಕಡೆಗಣಿಸಿದೆ.
ಯಶ್ ದಯಾಳ್
ಭಾರತದ ಯುವ ವೇಗದ ಬೌಲರ್ ಯಶ್ ದಯಾಳ್ ಅವರು ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಮೊದಲ ಬಾರಿಗೆ ತಂಡದಲ್ಲಿ ಸೇರ್ಪಡೆಗೊಂಡಿದ್ದರು. ಇದು ಅವರಿಗೆ ಮಹತ್ವದ ಕರೆಯಾಗಿತ್ತು. ಆದರೆ, ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ನಿಂದ ಕೈಬಿಡಲಾಗಿದೆ.
ಮುಖೇಶ್ ಕುಮಾರ್
30 ವರ್ಷದ ವೇಗದ ಬೌಲರ್ ಮುಖೇಶ್ ಕುಮಾರ್ ಭಾರತ ತಂಡದ ಪರ ಇದುವರೆಗೆ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ವಿಕೆಟ್ ಪಡೆದಿದ್ದಾರೆ. ಇದಲ್ಲದೆ, ಇವರು 47 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 186 ವಿಕೆಟ್ಗಳನ್ನು ಕಿತ್ತಿದ್ದಾರೆ. ಆದರೆ, ಬಾಂಗ್ಲಾದೇಶ ಸರಣಿಯಲ್ಲೂ ಅವರಿಗೆ ಅವಕಾಶ ಸಿಗಲಿಲ್ಲ. ಇದೀಗ ನ್ಯೂಜಿಲೆಂಡ್ ಸರಣಿಯಿಂದಲೂ ಕುಮಾರ್ ಅವರನ್ನು ಕೈಬಿಡಲಾಗಿದೆ.
ಅಭಿಮನ್ಯು ಈಶ್ವರನ್
ದೇಶಿಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್‌ರಂತೆ ರನ್ ಗಳಿಸಿದ್ದ ಅಭಿಮನ್ಯು ಈಶ್ವರನ್‌ರನ್ನೂ ಕಡೆಗಣಿಸಲಾಗಿದೆ. ಸದ್ಯ ಈಶ್ವರನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ನಡೆದ ಇರಾನಿ ಕಪ್‌ನಲ್ಲಿ ಅವರು 191 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ದುಲೀಪ್ ಟ್ರೋಫಿಯಲ್ಲಿ 3 ಪಂದ್ಯಗಳಲ್ಲಿ 2 ಶತಕಗಳನ್ನು ಗಳಿಸಿದರು. 29 ವರ್ಷದ ಈಶ್ವರನ್ ಇದುವರೆಗೆ ಆಡಿರುವ 98 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬರೋಬ್ಬರಿ 7506 ರನ್ ಗಳಿಸಿದ್ದಾರೆ.
ಶ್ರೇಯರ್ ಅಯ್ಯರ್
ಭಾರತ ತಂಡದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು ಟೆಸ್ಟ್ ತಂಡದಿಂದ ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಅವರು ಭಾರತದ ಪರ 14 ಟೆಸ್ಟ್‌ಗಳಲ್ಲಿ 811 ರನ್ ಗಳಿಸಿದ್ದಾರೆ, 1 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಯ್ಯರ್ 76 ಪ್ರಥಮ ದರ್ಜೆ ಪಂದ್ಯಗಳಲ್ಲಿ 5883 ರನ್ ಗಳಿಸಿದ್ದಾರೆ.
ರುತುರಾಜ್ ಗಾಯಕ್ವಾಡ್
ಭಾರತ ತಂಡದ ಪರ ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಿರುವ ರುತುರಾಜ್ ಗಾಯಕ್ವಾಡ್ ಇನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡಿಲ್ಲ. ಟೆಸ್ಟ್ ಆಡುವ ಅದ್ಭುತ ಟೆಕ್ನಿಕ್ ಇವರಲ್ಲಿದ್ದರೂ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ನ್ಯೂಜಿಲೆಂಡ್ ಸರಣಿಯಿಂದಲೂ ಗಾಯಕ್ವಾಡ್ ಅವರನ್ನು ಕಡೆಗಣಿಸಲಾಗಿದೆ. ಗಾಯಕ್ವಾಡ್ ಇದುವರೆಗೆ ದೇಶೀಯ ಕ್ರಿಕೆಟ್‌ನಲ್ಲಿ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 2282 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ , ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ವರದಿ: ವಿನಯ್ ಭಟ್.
ಇದನ್ನು ಓದಿ | ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಇಬ್ಬರು ಸ್ಟಾರ್ ಆಟಗಾರರಿಗೆ ಕೊಕ್