ವಿಶ್ವಚಾಂಪಿಯನ್ನರಿಗೆ ಸೋಲುಣಿಸಿದ ಭಾರತ ವನಿತೆಯರು; ನ್ಯೂಜಿಲೆಂಡ್ ವಿರುದ್ಧ ಸ್ಮೃತಿ ಮಂಧಾನ ಪಡೆಗೆ 59 ರನ್ ಜಯಭೇರಿ
Oct 25, 2024 10:52 AM IST
ವಿಶ್ವಚಾಂಪಿಯನ್ನರಿಗೆ ಸೋಲುಣಿಸಿದ ಭಾರತ ವನಿತೆಯರು; ನ್ಯೂಜಿಲೆಂಡ್ ವಿರುದ್ಧ 59 ರನ್ ಜಯಭೇರಿ
- ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವನಿತೆಯರು 227 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ನ್ಯೂಜಿಲೆಂಡ್ 168 ರನ್ ಗಳಿಸಿ ಆಲೌಟ್ ಆಯ್ತು. ಇದರೊಂದಿಗೆ ಸ್ಮೃತಿ ಮಂಧಾನ ಪಡೆ 59 ರನ್‌ಗಳ ಜಯ ಸಾಧಿಸಿತು. ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಅಹಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ವನಿತೆಯರ (India Women vs New Zealand Women) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 59 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ವನಿತೆಯರು 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಗಾಯಾಳು ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಇಂದು ಭಾರತ ತಂಡವನ್ನು ಸ್ಮೃತಿ ಮಂಧಾನ ಮುನ್ನಡೆಸಿದರು. ಅನುಭವಿ ಆಟಗಾರ್ತಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
ಭಾರತ ತಂಡಕ್ಕೆ ಇಂದು ಇಬ್ಬರು ಆಟಗಾರ್ತಿಯರು ಪದಾರ್ಪಣೆ ಮಾಡಿದರು. ಅನುಭವದ ಕೊರತೆ ತಂಡದಲ್ಲಿ ಕಾಣಿಸಿದರೂ ಗೆಲುವು ಕಷ್ಟವಾಗಲಿಲ್ಲ. ವಿಶ್ವ ಚಾಂಪಿಯನ್ನರ ವಿರುದ್ಧ ತವರಿನ ಬಲದೊಂದಿಗೆ ಅಬ್ಬರಿಸಿದ ಮಂಧಾನ ಬಳಗ ಅಬ್ಬರದ ಪ್ರದರ್ಶನ ನೀಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 44.3 ಓವರ್‌ಗಳಲ್ಲಿ 227 ರನ್ ಗಳಿಸಿ ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ಗಿಳಿದ ಕಿವೀಸ್ 40.4 ಓವರ್‌ಗಳಲ್ಲಿ 168 ರನ್ ಗಳಿಸಿ ಆಲೌಟ್ ಆಯ್ತು.
ಭಾರತ ಸ್ಪರ್ಧಾತ್ಮಕ ಮೊತ್ತ
ಭಾರತದ ಪರ ನಾಯಕಿ ಮಂಧಾನ ಕೇವಲ 5 ರನ್ ಮಾತ್ರ ಗಳಿಸಿದರು. ಶಫಾಲಿ ವರ್ಮಾ 33 ರನ್ ಕಲೆ ಹಾಕಿದರೆ, ಯಾಸ್ತಿಕಾ ಭಾಟಿಯಾ 37 ರನ್ ಸಿಡಿಸಿದರು. ಜೆಮಿಮಾ ರೋಡ್ರಿಗಸ್ 35 ರನ್ ಗಳಿಸಿದರೆ, ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ತೇಜಲ್ ಹಸಬ್ನಿಸ್ 42 ರನ್ ಗಳಿಸಿದರು. ಟೀಮ್ ಇಂಡಿಯಾ ಬಳಗದಲ್ಲಿ ಇದುವೇ ಇಂದಿನ ಗರಿಷ್ಠ ಮೊತ್ತ. ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ 41 ರನ್ ಕಲೆ ಹಾಕಿದರು.
ಕಿವೀಸ್ ಪರ ಜಾರ್ಜಿಯಾ ಪ್ಲಿಮ್ಮರ್ 25 ರನ್ ಗಳಿಸಿದರೆ, ಲಾರೆನ್ ಡೌನ್ 26 ರನ್ ಕಲೆ ಹಾಕಿದರು. ಅನುಭವಿ ನಾಯಕಿ ಸೋಫಿ ಡಿವೈನ್ ಕೇವಲ 2 ರನ್ ಗಳಿಸಿದ್ದಾಗ ರನೌಟ್ ಆದರು. ಬ್ರೂಕ್ 39, ಮ್ಯಾಡಿ ಗ್ರೀನ್ 31 ರನ್ ಗಳಿಸಿ ನಿರ್ಗಮಿಸಿದರು. ಅಮೇಲಿಯಾ ಕೆರ್ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಪ್ರಯತ್ನಕ್ಕೆ ಕೈಹಾಕಿ 25 ರನ್ ಗಳಿಸಿ ಅಜೇಯರಾಗಿ ಉಳಿದರು. ಅತ್ತ ನಾನ್‌ಸ್ಟ್ರೈಕ್‌ನಲ್ಲಿದ್ದ ಆಟಗಾರ್ತಿಯರೆಲ್ಲರೂ ವಿಕೆಟ್ ಒಪ್ಪಿಸಿಯಾಗಿತ್ತು.
ಭಾರತದ ಪರ ರಾಧಾ ಯಾದವ್ 3 ವಿಕೆಟ್ ಪಡೆದರೆ, ಪದಾರ್ಪಣೆ ಮಾಡಿದ ಆಟಗಾರ್ತಿ ಸೈಮಾ ಠಾಕೂರ್ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಚಾಂಪಿಯನ್ ತಂಡಕ್ಕೆ ಸೋಲು
ಇತ್ತೀಚೆಗೆ ಅಂತ್ಯಗೊಂಡ ವನಿತೆಯರ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತೆಯರ ತಂಡವು ಗುಂಪು ಹಂತದಿಂಲೇ ಹೊರಬಿದ್ದಿತ್ತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳೆಯರ ತಂಡವು, ಗುಂಪು ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದು, ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಲು ಪ್ರಮುಖ ಕಾರಣ. ಭಾರತವನ್ನು ಸೋಲಿಸಿದ್ದ ಕಿವೀಸ್, ಆ ಬಳಿಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿಹಿಡಿಯಿತು.