ನಾಥನ್ ಲಿಯಾನ್ ದಾಖಲೆ ಮುರಿದ ಆರ್ ಅಶ್ವಿನ್; ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಸರದಾರ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಮೋಘ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ದಾಖಲೆ ಬ್ರೇಕ್ ಮಾಡಿ, ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಮಹತ್ವದ ದಾಖಲೆ ಮಾಡಿದ್ದಾರೆ. 38 ವರ್ಷದ ಅನುಭವಿ ಆಟಗಾರ, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದಾರೆ. ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಕಬಳಿಸಿದರು. ಈ ವೇಳೆ ಕೀವೀಸ್‌ನ ಆರಂಭಿಕ ಮೂರು ವಿಕೆಟ್ ಕಬಳಿಸಿದ ಅಶ್ವಿನ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಕಿವೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ವಿಲ್ ಯಂಗ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಅಶ್ವಿನ್ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಅವರನ್ನು ಔಟ್ ಮಾಡಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರ 188 ವಿಕೆಟ್‌ಗಳ ದಾಖಲೆಯನ್ನು ಸರಿಗಟ್ಟಿದ್ದರು. ಆ ಬಳಿಕ ಯಂಗ್ ವಿಕೆಟ್‌ನೊಂದಿಗೆ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು.
ಅಶ್ವಿನ್ ಕೇವಲ 39 ಪಂದ್ಯಗಳಲ್ಲಿ 188 ವಿಕೆಟ್‌ಗಳನ್ನು ಪಡೆದರೆ, ಲಿಯಾನ್ 43 ಪಂದ್ಯಗಳಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ.
ಭಾರತದ ಅನುಭವಿ ಆಫ್ ಸ್ಪಿನ್ನರ್ ಈಗ ಡಬ್ಲ್ಯುಟಿಸಿಯಲ್ಲಿ ದಾಖಲೆಯ 190 ವಿಕೆಟ್‌ಗಳನ್ನು ಹೊಂದಿದ್ದಾರೆ. ಲಿಯಾನ್ 188 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಕ್ರಮವಾಗಿ 175 ಮತ್ತು 147 ವಿಕೆಟ್‌ಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ನಿವೃತ್ತಿ ಘೋಷಿಸಿರುವ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 134 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ದಾಖಲೆ ಮುರಿಯುವ ಹಂತದಲ್ಲಿ ಅಶ್ವಿನ್
ವಿಲ್ ಯಂಗ್ ವಿಕೆಟ್ ಪಡೆಯುತ್ತಿದ್ದಂತೆಯೇ ಅಶ್ವಿನ್ ನಾಥನ್ ಲಿಯಾನ್ ಅವರ ಟೆಸ್ಟ್ ವಿಕೆಟ್‌ಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ. ಈ ಇಬ್ಬರೂ ಸ್ಪಿನ್ನರ್‌ಗಳು ಆಟದ ದೀರ್ಘ ಸ್ವರೂಪದಲ್ಲಿ 530 ವಿಕೆಟ್‌ಗಳನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೇ ಅತಿ ಹೆಚ್ಚು ವಿಕೆಟ್ ಪಡೆದ ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾತ್ ಅವರನ್ನು ಹಿಂದಿಕ್ಕಲು ಅಶ್ವಿನ್‌ಗೆ ಈಗ ಇನ್ನೂ 33 ವಿಕೆಟ್‌ಗಳ ಅಗತ್ಯವಿದೆ.
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ (800) ಪಡೆದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ 704 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಬ್ರಾಡ್ ಕ್ರಮವಾಗಿ 619 ಮತ್ತು 604 ವಿಕೆಟ್‌ಗಳೊಂದಿಗೆ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಿವೀಸ್ 259 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಯ್ತು. ದಿನದ ಕೊನೆಯ ಸೆಷನ್‌ನಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ, ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 16 ರನ್ ವೇಳೆಗೆ 1 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ ಸಂಕಷ್ಟದಲ್ಲಿದೆ.