logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್‌ಗೆ ಗೆಲುವು; ಸನ್‌ರೈಸರ್ಸ್‌ ಮಣಿಸಿ 3ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಕೋಲ್ಕತ್ತಾ ನೈಟ್‌ ರೈಡರ್ಸ್

ಕೆಕೆಆರ್‌ಗೆ ಗೆಲುವು; ಸನ್‌ರೈಸರ್ಸ್‌ ಮಣಿಸಿ 3ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಕೋಲ್ಕತ್ತಾ ನೈಟ್‌ ರೈಡರ್ಸ್

Prasanna Kumar P N HT Kannada

May 26, 2024 10:43 PM IST

google News

ಕೆಕೆಆರ್‌ಗೆ ಗೆಲುವು; ಸನ್‌ರೈಸರ್ಸ್‌ ಮಣಿಸಿ 3ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಕೋಲ್ಕತ್ತಾ ನೈಟ್‌ ರೈಡರ್ಸ್

    • IPL 2024 Final: ಕೊಲ್ಕತ್ತಾ ನೈಟ್ ರೈಡರ್ಸ್ (KKR) ಐಪಿಎಲ್ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಸನ್ ರೈಸರ್ಸ್ ಹೈದರಾಬಾದ್ (SRH) ತಂಡವು ಟಾಸ್‌ ಗೆದ್ದು ಅದೃಷ್ಟ ತನ್ನ ಪರವಾಗಿದೆ ಎಂದು ಬೀಗಿದರೂ, ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಯಿತು. KKR vs SRH ಐಪಿಎಲ್ ಫೈನಲ್ ಮ್ಯಾಚ್‌ನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಕೆಕೆಆರ್‌ಗೆ ಗೆಲುವು; ಸನ್‌ರೈಸರ್ಸ್‌ ಮಣಿಸಿ 3ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಕೋಲ್ಕತ್ತಾ ನೈಟ್‌ ರೈಡರ್ಸ್
ಕೆಕೆಆರ್‌ಗೆ ಗೆಲುವು; ಸನ್‌ರೈಸರ್ಸ್‌ ಮಣಿಸಿ 3ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಕೋಲ್ಕತ್ತಾ ನೈಟ್‌ ರೈಡರ್ಸ್

Kolkata Knight Riders Champion: ಚೊಚ್ಚಲ ಬಾರಿ ಟ್ರೋಫಿ ಎತ್ತಿಹಿಡಿದ ಮೈದಾನ, ಅಂದಿನ ನಾಯಕ ಗೌತಮ್ ಗಂಭೀರ್​ ಅವರ ಮಾರ್ಗದರ್ಶನದಲ್ಲಿ 10 ವರ್ಷಗಳ ನಂತರ ಮತ್ತದೇ ಅಂಗಣದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​​​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದೇವಾಲಯಗಳ ನಾಡು ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಕೆಕೆಆರ್​, ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. 2012 ಮತ್ತು 2014ರ ನಂತರ ಕಿರೀಟಕ್ಕೆ ಮುತ್ತಿಕ್ಕಿ ದಾಖಲೆ ಬರೆದಿದೆ. ಈ ಎರಡೂ ಪ್ರಶಸ್ತಿಗಳು ಗಂಭೀರ್ ನಾಯಕತ್ವದಲ್ಲಿ ಬಂದಿದ್ದವು.

ಮತ್ತೊಂದೆಡೆ, 8 ವರ್ಷಗಳ ನಂತರ ಪ್ರಶಸ್ತಿಯ ಕನಸಿನಲ್ಲಿದ್ದ ಎಸ್​ಆರ್​ಹೆಚ್​ ಕನಸು ಭಗ್ನಗೊಂಡಿದೆ. ಅಲ್ಲದೆ, ತನ್ನ ನಾಯಕತ್ವದಲ್ಲಿ ಡಬ್ಲ್ಯುಟಿಸಿ ಫೈನಲ್, ಏಕದಿನ ವಿಶ್ವಕಪ್ ಫೈನಲ್​​​​ ಗೆದ್ದಿದ್ದ ಪ್ಯಾಟ್ ಕಮಿನ್ಸ್, ಐಪಿಎಲ್​ ಫೈನಲ್​ ಗೆಲ್ಲಲು ವಿಫಲರಾದರು. ಹ್ಯಾಟ್ರಿಕ್ ಫೈನಲ್ ಜಯಿಸಲು ಸಾಧ್ಯವಾಗದ ಕಮಿನ್ಸ್, ರನ್ನರ್​​ಅಪ್​ಗೆ ತೃಪ್ತಿಪಟ್ಟುಕೊಂಡಿತು. 2016ರಲ್ಲಿ ಚಾಂಪಿಯನ್ ಆಗಿದ್ದ ಆರೆಂಜ್ ಆರ್ಮಿ, 2018ರಲ್ಲೂ ರನ್ನರ್​​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಹಾಲಿ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾದ ಮೂರನೇ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ಪಡೆಯೇ ಮೇಲುಗೈ ಸಾಧಿಸಿದ್ದು, ಸುಲಭ ಗೆಲುವಿನೊಂದಿಗೆ ಚಾಂಪಿಯನ್ ಆಗಿದೆ.

ಚೊಚ್ಚಲ ಟ್ರೋಫಿ ಗೆದ್ದ ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್​ ತನ್ನ ನಾಯಕತ್ವದಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಕೆಕೆಆರ್ ಸೇರುವುದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 2019 ಮತ್ತು 2021ರಲ್ಲಿ 2ನೇ ಕ್ವಾಲಿಫೈಯರ್​, 2020ರಲ್ಲಿ ಫೈನಲ್​ಗೆ ಕೊಂಡೊಯ್ದಿದ್ದರು. ಆದರೆ, ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದರು.

ಗಂಭೀರ್​ ಬಳಿಕ ಅಯ್ಯರ್ ಸಾಧನೆ

ಕೋಲ್ಕತ್ತಾಗೆ ಟ್ರೋಫಿ ಗೆದ್ದುಕೊಟ್ಟ ಎರಡನೇ ನಾಯಕ ಎನಿಸಿದ್ದಾರೆ. ಗೌತಮ್ ಗಂಭೀರ್ ಮೊದಲಿಗರು. ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ ಕೂಡ 2021ರ ಐಪಿಎಲ್​ನಲ್ಲಿ ಕೆಕೆಆರ್ ತಂಡವನ್ನು ಫೈನಲ್​ಗೇರಿಸಿದ್ದರು. ಆದರೆ ಸಿಎಸ್​ಕೆ ವಿರುದ್ಧ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಯಾಗಿದ್ದರು.

ಐಪಿಎಲ್ ಟ್ರೋಫಿ ಗೆದ್ದ ಭಾರತದ ಐದನೇ ನಾಯಕ

ಐಪಿಎಲ್​ನಲ್ಲಿ ಟ್ರೋಫಿ ಗೆದ್ದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ರೋಹಿತ್​ ಶರ್ಮಾ (5 ಟ್ರೋಫಿ), ಎಂಎಸ್ ಧೋನಿ (5 ಟ್ರೋಫಿ), ಗೌತಮ್ ಗಂಭೀರ್​ (2 ಟ್ರೋಫಿ), ಹಾರ್ದಿಕ್ ಪಾಂಡ್ಯ (1) ಈ ಹಿಂದೆ ಐಪಿಎಲ್ ಟ್ರೋಫಿ ಗೆದ್ದ ಭಾರತೀಯ ನಾಯಕರು.

ಮುಂಬೈ-ಸಿಎಸ್​ಕೆ ನಂತರ ಸ್ಥಾನ

ಐಪಿಎಲ್ ಇತಿಹಾಸದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಚಾಂಪಿಯನ್ ಆಗಿರುವ ಮೂರನೇ ತಂಡ ಹೆಗ್ಗಳಿಕೆಗೆ ಕೆಕೆಆರ್ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ 5 ಬಾರಿ ಟ್ರೋಫಿ ಗೆದ್ದು ಮೊದಲ ಎರಡು ಸ್ಥಾನ ಪಡೆದಿವೆ.

ಐಪಿಎಲ್ ಪ್ರೈಜ್​ಮನಿ

  • ವಿಜೇತರು - 20 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್)
  • ರನ್ನರ್​ಅಪ್​ - 13 ಕೋಟಿ (ಸನ್​ರೈಸರ್ಸ್ ಹೈದರಾಬಾದ್)
  • 3ನೇ ಸ್ಥಾನ - 7 ಕೋಟಿ (ರಾಜಸ್ಥಾನ್ ರಾಯಲ್ಸ್)
  • 4ನೇ ಸ್ಥಾನ - 6.5 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಕೆಕೆಆರ್​ ಆಲ್​ರೌಂಡ್ ಆಟಕ್ಕೆ ಶರಣಾದ ಎಸ್​ಆರ್​ಹೆಚ್

ಚೆನ್ನೈನ ಚೆಪಾಕ್ ಪಿಚ್​​ನಲ್ಲಿ ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ನಡೆಸಿದ ಎಸ್​ಆರ್​ಹೆಚ್​, ಕೋಲ್ಕತ್ತಾ ಬೌಲರ್​​ಗಳ ದಾಳಿಗೆ ತತ್ತರಿಸಿತು. ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ ಅವರ ಖಡಕ್ ಬೌಲಿಂಗ್​ ಬ್ಯಾಟರ್​ಗಳು ರನ್​ಗಾಗಿ ಪರದಾಡಿದರು. ಪರಿಣಾಮ 18.3 ಓವರ್​​ಗಳಲ್ಲೇ 113 ರನ್​ಗಳಿ ಆಲೌಟ್​ ಆಯಿತು. ಐಪಿಎಲ್​ ಇತಿಹಾಸದ ಫೈನಲ್​ ಪಂದ್ಯವೊಂದರಲ್ಲಿ ಅತಿ ಕಡಿಮೆ ಸ್ಕೋರ್​ ಮಾಡಿದ ತಂಡ ಎಂಬ ಕುಖ್ಯಾತಿಗೆ ಪಾತ್ರವಾಯಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಬೇಗನೇ ಸುನಿಲ್ ನರೇನ್ ಅವರನ್ನು ಕಳೆದುಕೊಂಡರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. 10.3 ಓವರ್​ಗಳಲ್ಲೇ ಜಯದ ನಗೆ ಬೀರಿತು. ವೆಂಕಟೇಶ್ ಅಯ್ಯರ್ ಆಕರ್ಷಕ ಅರ್ಧಶತಕ ಸಿಡಿಸಿ​​ ಅಜೇಯರಾಗಿ ಉಳಿದರು. ಎಸ್​​ಆರ್​ಹೆಚ್ ಬೌಲರ್​​ಗಳು ವಿಕೆಟ್​ಗಾಗಿ ಪರದಾಡಿದರು. ರಹಮಾನುಲ್ಲಾ ಗುರ್ಬಾಜ್ 39 ರನ್ ಗಳಿಸಿದರು.

30 ದಾಟದ ಎಸ್​ಆರ್​​​ಹೆಚ್​

ರನ್​ರೈಸರ್ಸ್ ಎಂದು ಕರೆಸಿಕೊಳ್ಳುತ್ತಿದ್ದ ಸನ್​ರೈಸರ್ಸ್​ ಹೈದರಾಬಾದ್, ಐಪಿಎಲ್ ಫೈನಲ್​ನಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೆಕೆಆರ್​ ಬೌಲರ್​​ಗಳ ಅಬ್ಬರದ ಮುಂದೆ ಆರೆಂಜ್ ಆರ್ಮಿ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಯಾವೊಬ್ಬ ಬ್ಯಾಟರ್​​ ಕೂಡ 30ರ ಗಡಿದಾಟಲಿಲ್ಲ. ನಾಯಕ ಪ್ಯಾಟ್ ಕಮಿನ್ಸ್ 24 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಟ್ರಾವಿಸ್ ಹೆಡ್ (0), ಅಭಿಷೇಕ್ ಶರ್ಮಾ (2), ರಾಹುಲ್ ತ್ರಿಪಾಠಿ (9), ಏಡನ್ ಮಾರ್ಕ್ರಮ್ (20), ನಿತೀಶ್ ರೆಡ್ಡಿ (16), ಹೆನ್ರಿಚ್ ಕ್ಲಾಸೆನ್ (16), ಶಹಬಾಜ್ ಅಹ್ಮದ್ (8), ಅಬ್ದುಲ್ ಸಮದ್ (4), ಜಯದೇವ್ ಉನಾದ್ಕತ್ (4) ಬಂದಷ್ಟೇ ವೇಗವಾಗಿ ಡಗೌಟ್ ಸೇರಿದರು.

ಕೆಕೆಆರ್​ ಬೌಲರ್​ಗಳ ಆರ್ಭಟ

ಫೈನಲ್ ಪಂದ್ಯದಲ್ಲೂ ಕೆಕೆಆರ್​​ ಬೌಲರ್​​ಗಳು ಅದ್ಭುತ ಪ್ರದರ್ಶನ ನೀಡಿದರು. ಎಸ್​ಆರ್​ಹೆಚ್​ ತಂಡದಲ್ಲಿ ಘಟಾನುಘಟಿ ಆಟಗಾರರು ಮಾರಕ ಬೌಲಿಂಗ್ ದಾಳಿಗೆ ಬೆದರಿದರು. ಟೂರ್ನಿಯ ಮೊದಲಾರ್ಧದಲ್ಲಿ ದುಬಾರಿ ಬೌಲರ್​ ಆಗಿದ್ದ ಮಿಚೆಲ್ ಕ್ವಾಲಿಫೈಯರ್​​​-1ರಲ್ಲಿ 3 ವಿಕೆಟ್ ಪಡೆದ ನಂತರ ಸ್ಟಾರ್ಕ್​ ಫೈನಲ್​​ನಲ್ಲೂ 2 ವಿಕೆಟ್ ಪಡೆದರು. ಆಂಡ್ರೆ ರಸೆಲ್ 3 ವಿಕೆಟ್, ಹರ್ಷಿತ್ ರಾಣಾ 2 ವಿಕೆಟ್ ಪಡೆದರು. ವೈಭವ್ ಅರೋರಾ, ಸುನಿಲ್ ನರೇನ್, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.

ಉಭಯ ತಂಡಗಳ ಐಪಿಎಲ್-2024 ಪ್ರಯಾಣ ಹೇಗಿತ್ತು?

ಕೆಕೆಆರ್: 14 ಪಂದ್ಯ, 9 ಗೆಲುವು, 3 ಸೋಲು, 2 ರದ್ದು, 20 ಅಂಕ (ಅಗ್ರಸ್ಥಾನ), ಕ್ವಾಲಿಫೈಯರ್​-1 ಗೆಲುವು, ಫೈನಲ್ ಗೆಲುವು (ಚಾಂಪಿಯನ್)

ಎಸ್​ಆರ್​ಹೆಚ್​: 14 ಪಂದ್ಯ, 8 ಗೆಲುವು, 5 ಸೋಲು, 1 ರದ್ದು, 17 ಅಂಕ (2ನೇ ಸ್ಥಾನ), ಕ್ವಾಲಿಫೈಯರ್​-1 ಸೋಲು, ಕ್ವಾಲಿಫೈಯರ್-2​ ಗೆಲುವು, ಫೈನಲ್ ಸೋಲು (ರನ್ನರ್​ಅಪ್)

ಐಪಿಎಲ್ ತಂಡಐಪಿಎಲ್ ಟ್ರೋಫಿ ಐಪಿಎಲ್ ವಿಜೇತ
ಮುಂಬೈ ಇಂಡಿಯನ್ಸ್5 ಬಾರಿ2013, 2015, 2017, 2019, 2020
ಚೆನ್ನೈ ಸೂಪರ್ ಕಿಂಗ್ಸ್5 ಬಾರಿ2010, 2011, 2018, 2021, 2023
ಕೋಲ್ಕತ್ತಾ ನೈಟ್ ರೈಡರ್ಸ್2 ಬಾರಿ2012, 2014, 2024
ಸನ್ ರೈಸರ್ಸ್ ಹೈದರಾಬಾದ್1 ಬಾರಿ2016
ರಾಜಸ್ಥಾನ್ ರಾಯಲ್ಸ್1 ಬಾರಿ2008
ಡೆಕ್ಕನ್ ಚಾರ್ಜರ್ಸ್1 ಬಾರಿ2009
ಗುಜರಾತ್ ಟೈಟಾನ್ಸ್1 ಬಾರಿ2022

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ