ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್‌ ವಿರುದ್ಧ ಸೋತರೂ ರೋಹಿತ್ ಶರ್ಮಾ ‌ಟಿ20 ದಾಖಲೆ ಮುರಿದ ಬಾಬರ್ ಅಜಮ್; ವಿರಾಟ್‌ ರೆಕಾರ್ಡ್‌ ಬ್ರೇಕ್‌ಗೆ ಬೇಕು 50 ರನ್

ಇಂಗ್ಲೆಂಡ್‌ ವಿರುದ್ಧ ಸೋತರೂ ರೋಹಿತ್ ಶರ್ಮಾ ‌ಟಿ20 ದಾಖಲೆ ಮುರಿದ ಬಾಬರ್ ಅಜಮ್; ವಿರಾಟ್‌ ರೆಕಾರ್ಡ್‌ ಬ್ರೇಕ್‌ಗೆ ಬೇಕು 50 ರನ್

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಮ್ ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಟಿ20 ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಾಬರ್ ಈ ವಿಶ್ವದಾಖಲೆ ನಿರ್ಮಿಸಿದ್ದಾರೆ.

ರೋಹಿತ್ ಶರ್ಮಾ ‌ಟಿ20 ದಾಖಲೆ ಮುರಿದ ಬಾಬರ್ ಅಜಮ್
ರೋಹಿತ್ ಶರ್ಮಾ ‌ಟಿ20 ದಾಖಲೆ ಮುರಿದ ಬಾಬರ್ ಅಜಮ್

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ (ENG vs PAK) ತಂಡವು 23 ರನ್‌ಗಳಿದ ಸೋಲು ಕಂಡಿತು. ಪಂದ್ಯದಲ್ಲಿ ಸೋತರೂ, ನಾಯಕ ಬಾಬರ್‌ ಅಜಮ್‌ ದಾಖಲೆಯೊಂದನ್ನು ಬರೆದಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಚುಟುಕು ಸ್ವರೂಪದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಬಾಬರ್‌, ಕೆಲವೇ ದಿನಗಳಲ್ಲಿ ವಿರಾಟ್‌ ಕೊಹ್ಲಿ ದಾಖಲೆಯನ್ನೂ ಮುರಿಯುವ ಸುಳಿವು ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂಗ್ಲೆಂಡ್‌ ವಿರುದ್ಧ 32 ರನ್‌ ಗಳಿಸಿದ ಬಾಬರ್‌, ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಡ್ಜ್ ಬಾಸ್ಟನ್‌ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 123.08ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಬಾಬರ್, ಈ ದಾಖಲೆ ಮಾಡಿದ್ದಾರೆ. ಬಾಬರ್‌ ದಾಖಲೆಯಾಟದ ಹೊರತಾಗಿಯೂ ಪಾಕಿಸ್ತಾನ ಸೋಲು ಕಂಡಿದು. ಅಲ್ಲದೆ ಇಂಗ್ಲೆಂಡ್‌ ತಂಡ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿತು.

ಈ ದಾಖಲೆಯೊಂದಿಗೆ ಬಾಬರ್‌, ಹಿಟ್‌ಮ್ಯಾನ್‌‌ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಟಿ20 ಸ್ವರೂಪದಲ್ಲಿ ರೋಹಿತ್ 151 ಪಂದ್ಯಗಳ 143 ಇನ್ನಿಂಗ್ಸ್‌ಗಳಲ್ಲಿ ಆಡಿ 139.97ರ ಸ್ಟ್ರೈಕ್ ರೇಟ್‌ನಲ್ಲಿ 3974 ರನ್ ಗಳಿಸಿದ್ದಾರೆ. ಇದೇ ವೇಳೆ ಬಾಬರ್ 118 ಪಂದ್ಯಗಳ 111 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿ 129.91ರ ಸ್ಟ್ರೈಕ್ ರೇಟ್‌ನಲ್ಲಿ 3987 ರನ್ ಗಳಿಸಿದ್ದಾರೆ. ಇದರೊಂದಿಗೆ ಬಾಬರ್‌ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ವಿರಾಟ್ ಕೊಹ್ಲಿಗೆ ಅಗ್ರಪಟ್ಟ

ಟಿ20ಯಲ್ಲಿ ಅತಿ ಹೆಚ್ಚು ರನ್‌ ಪೇರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಕಡಿಮೆ ಪಂದ್ಯಗಳನ್ನಾಡಿದ್ದರೂ, ಕೊಹ್ಲಿ ಟಿ20 ಮಾದರಿಯಲ್ಲಿ 4037 ರನ್ ಗಳಿಸಿದ್ದಾರೆ. ಆದರೆ,‌ ಕೊಹ್ಲಿಗಿಂತ ಬಾಬರ್ 50 ರನ್‌ ಮಾತ್ರ ಹಿಂದಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಕೊಹ್ಲಿಯನ್ನು ಹಿಂದಿಕ್ಕಿದರೂ ಅಚ್ಚರಿಯಿಲ್ಲ.

ಇಂಗ್ಲೆಂಡ್‌ಗೆ ಗೆಲುವು

ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಿನ ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ನಾಯಕ ಜೋಸ್‌ ಬಟ್ಲರ್ 51 ಎಸೆತಗಳಲ್ಲಿ 84 ರನ್ ಗಳಿಸಿ ಅಬ್ಬರಿಸಿದರು. ಪಾಕಿಸ್ತಾನದ ಪರ ಶಾಹೀನ್ ಶಾ ಅಫ್ರಿದಿ 3 ವಿಕೆಟ್‌ ಕಬಳಿಸಿದರೆ, ಹ್ಯಾರಿಸ್ ರೌಫ್ ಮತ್ತು ವಾಸಿಮ್‌ ತಲಾ 2 ವಿಕೆಟ್‌ ಪಡೆದರು.

ಬೃಹತ್‌ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಸೈಮ್ ಅಯೂಬ್ ಅವರನ್ನು ಬೇಗನೆ ಕಳೆದುಕೊಂಡಿತು. ಒಂದು ಹಂತದಲ್ಲಿ 14 ರನ್‌ ವೇಳೆಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಯಕ ಬಾಬರ್ ಅಜಮ್ ಮತ್ತು ಫಖರ್ ಜಮಾನ್ ಅರ್ಧಶತಕದ ಜೊತೆಯಾಟವಾಡಿದರು. ಆ ಬಳಿಕ ಇಫ್ತಿಖರ್ ಅಹ್ಮದ್ ಮತ್ತು ಇಮಾದ್ ವಾಸಿಮ್ 40 ರನ್‌ ಒಟ್ಟುಗೂಡಿಸಿದರು. ಆದರೂ ತಂಡದಿಂದ ಗೆಲುವು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನವು 19.2 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಟಾಪ್ಲೆ 3 ವಿಕೆಟ್‌ ಪಡೆದರೆ, ಆರ್ಚರ್ ಮತ್ತು ಮೊಯೀನ್ ಅಲಿ ತಲಾ 2 ವಿಕೆಟ್ ಪಡೆದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024