ಐಪಿಎಲ್ ಹರಾಜು: ಮೊದಲ ದಿನ 84 ಆಟಗಾರರ ಆಕ್ಷನ್, ಕೊನೆಯ ಕ್ಷಣದ ಷರತ್ತುಗಳನ್ನು ಪ್ರಕಟಿಸಿದ ಬಿಸಿಸಿಐ
Nov 24, 2024 01:57 PM IST
ಐಪಿಎಲ್ ಮೆಗಾ ಹರಾಜಿನಲ್ಲಿ ಮೊದಲ ದಿನ 84 ಆಟಗಾರರ ಆಕ್ಷನ್
- IPL 2025 Auction: ಐಪಿಎಲ್ ಮೆಗಾ ಹರಾಜಿನ ಮೊದಲ ದಿನದಲ್ಲಿ ಒಟ್ಟು 84 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಉಳಿದ ಆಟಗಾರರನ್ನು ಎರಡನೇ ದಿನವಾದ ಸೋಮವಾರ ಹರಾಜು ಕೂಗಲಾಗುತ್ತದೆ. ಉಳಿದಂತೆ ಹರಾಜು ಪ್ರಕ್ರಿಯೆಯ ನಿಯಮಗಳು ಇಲ್ಲಿವೆ.
ಐಪಿಎಲ್ 2025 ಆವೃತ್ತಿಯ ಮೆಗಾ ಹರಾಜಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನವೆಂಬರ್ 24ರ ಭಾನುವಾರ ಬೆಳಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದು ಹೇಗೆ ನಡೆಯಲಿವೆ ಎಂಬುದರ ಕುರಿತು ಬಿಸಿಸಿಐ ತಿಳಿಸಿದೆ. ಈ ಕುರಿತು ಹರಾಜಿನಲ್ಲಿ ಭಾಗಿಯಾಗುವ ಎಲ್ಲಾ ಹತ್ತು ಫ್ರಾಂಚೈಸಿಗಳಿಗೆ ವಿವರವಾದ ಸಂದೇಶ ಕಳುಹಿಸಲಾಗಿದೆ. ಈಗ ಮೊದಲ ದಿನದ ಹರಾಜು ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದನ್ನು ತಿಳಿಯೋಣ.
ಭಾನುವಾರ, ಅಂದರೆ ಮೊದಲ ದಿನದ ಪ್ರಕ್ರಿಯೆಯು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಮೊದಲ ದಿನದಂದು, ಒಟ್ಟು 84 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಅಂದರೆ, ಹರಾಜು ಕಣದಲ್ಲಿದರುವ ಒಟ್ಟು 577 ಆಟಗಾರರ ಪೈಕಿ ಮೊದಲ ದಿನ 84 ಆಟಗಾರರನ್ನು ಹರಾಜು ಕೂಗಲಿದ್ದಾರೆ. ಇವರಲ್ಲಿ ಬಹುತೇಕ ಹೆಚ್ಚು ನಿರೀಕ್ಷೆ ಮೂಡಿಸಿರುವ ಆಟಗಾರರೇ ಇದ್ದು, ಹೆಚ್ಚಿನ ಆಟಗಾರರು ಖರೀದಿಯಾಗುವ ಸಾಧ್ಯತೆ ಇದೆ.
ಹರಾಜಿನ ಆರಂಭಿಕ ದಿನದಂದು, ಮೊದಲ 12 ಸೆಟ್‌ಗಳು ಕವರ್ ಆಗಲಿದ್ದು, ಉಳಿದ ಸೆಟ್‌ಗಳನ್ನು ಸೋಮವಾರ ದಿನ ಮುಂದುವರೆಸಲಾಗುತ್ತದೆ. ಐಪಿಎಲ್ 2025 ಮೆಗಾ ಹರಾಜಿಗಾಗಿ ಒಟ್ಟು 10 ಫ್ರಾಂಚೈಸಿಗಳಲ್ಲಿ 14 ಆರ್‌ಟಿಎಂ ಕಾರ್ಡ್‌ಗಳು ಲಭ್ಯವಿದೆ.
ಹರಾಜಿನಲ್ಲಿ ಮೊದಲ ಬಿಡ್ಡಿಂಗ್ ಎರಡು ಮಾರ್ಕ್ಯೂ ಸೆಟ್‌ಗಳೊಂದಿಗೆ ಪ್ರಾರಂಭವಾಗಲಿದೆ. ಈ ಮಾರ್ಕ್ಯೂ ಪಟ್ಟಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಬಲಿಷ್ಠ ಆಟಗಾರರಿದ್ದಾರೆ. ಪ್ರತಿ ಸೆಟ್‌ನಲ್ಲೂ ತಲಾ ಆರು ಆಟಗಾರರಿದ್ದಾರೆ.
ಮಾರ್ಕ್ಯೂ ಪಟ್ಟಿಯಲ್ಲಿರುವ ಆಟಗಾರರು
ಮೊದಲ ಗುಂಪಿನಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಜೋಸ್ ಬಟ್ಲರ್, ಕಗಿಸೊ ರಬಾಡ ಮತ್ತು ಮಿಚೆಲ್ ಸ್ಟಾರ್ಕ್ ಇದ್ದಾರೆ. ಕೆಎಲ್ ರಾಹುಲ್, ಯಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಡೇವಿಡ್ ಮಿಲ್ಲರ್ ಮಾರ್ಕ್ಯೂ ಸೆಟ್ 2ರ ಭಾಗವಾಗಿದ್ದಾರೆ. ಮಾರ್ಕ್ಯೂ ಸೆಟ್ ಮುಗಿದ ನಂತರ, ಹರಾಜು ಪ್ರಕ್ರಿಯೆಯ ಮೊದಲ ದಿನದಂದು ಊಟದ ವಿರಾಮ ನಡೆಯಲಿದೆ.
ಬ್ರೇಕ್ ನಂತರ ಐಪಿಎಲ್ ಹರಾಜು ಹೇಗೆ ನಡೆಯುತ್ತೆ?
ಊಟದ ವಿರಾಮದ ನಂತರ, ಕ್ಯಾಪ್ಡ್ ಬ್ಯಾಟರ್‌ಗಳ ಹೆಸರನ್ನು ಹರಾಜು ಕೂಗಲಾಗುತ್ತದೆ. ನಂತರ ಆಲ್‌ರೌಂಡರ್‌ಗಳು ಮತ್ತು ವಿಕೆಟ್ ಕೀಪರ್‌ಗಳ ಸರದಿ. ಇವೆಲ್ಲವೂ ಮುಗಿದ ನಂತರ, ಮತ್ತೆ 15 ನಿಮಿಷಗಳ ವಿರಾಮ ಇರುತ್ತದೆ. ಆ ನಂತರ ಕ್ಯಾಪ್ಡ್ ಬೌಲರ್‌ಗಳು ಹರಾಜು ಸುತ್ತಿಗೆ ಬರಲಿದ್ದಾರೆ.
ಮೊದಲ ದಿನದ ಅಂತಿಮ ಸೆಟ್‌ನಲ್ಲಿ ಮೊದಲ ಅನ್‌ಕ್ಯಾಪ್ಡ್ ಆಟಗಾರರ ಸೆಟ್ ಇರುತ್ತದೆ. ಹೀಗಾಗಿ ಫಾಫ್ ಡು ಪ್ಲೆಸಿಸ್, ಕೇನ್ ವಿಲಿಯಮ್ಸನ್, ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ಅವರಂತಹ ಆಟಗಾರರು ಎರಡನೇ ದಿನವಾದ ಸೋಮವಾರ ಹರಾಜಿಗೆ ಬರಲಿದ್ದಾರೆ.
ಐಪಿಎಲ್ ಹರಾಜು ಲೈವ್ ಅಪ್ಡೇಟ್‌ಗೆ ಇಲ್ಲಿ ಕ್ಲಿಕ್ ಮಾಡಿ
ಎರಡನೇ ದಿನ ಹರಾಜಿನಲ್ಲಿ ಉಳಿದ ಎಲ್ಲಾ ಆಟಗಾರರನ್ನು ಹರಾಜು ಕೂಗಲಾಗುತ್ತದೆ. ಆ ನಂತರ ಫಾಸ್ಟ್ ಟ್ರ್ಯಾಕಿಂಗ್ ಹಂತಕ್ಕಾಗಿ 25 ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಫ್ರಾಂಚೈಸಿಗಳಿಗೆ ಹೇಳಲಾಗುತ್ತದೆ. ಅದಾಗಲೇ ಅನ್‌ಸೋಲ್ಡ್ ಆಗಿದ್ದ ಆಟಗಾರರನ್ನು ಮತ್ತೆ ಖರೀದಿಸುವ ಅವಕಾಶ ಸಿಗುತ್ತದೆ.