ಐಪಿಎಲ್ 2025 ಹರಾಜು ನೇರಪ್ರಸಾರ ಯಾವುದರಲ್ಲಿ; ಮೊಬೈಲ್‌ನಲ್ಲಿ ಉಚಿತವಾಗಿ ನೋಡುವುದು ಹೇಗೆ? ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಹರಾಜು ನೇರಪ್ರಸಾರ ಯಾವುದರಲ್ಲಿ; ಮೊಬೈಲ್‌ನಲ್ಲಿ ಉಚಿತವಾಗಿ ನೋಡುವುದು ಹೇಗೆ? ಸಂಪೂರ್ಣ ವಿವರ

ಐಪಿಎಲ್ 2025 ಹರಾಜು ನೇರಪ್ರಸಾರ ಯಾವುದರಲ್ಲಿ; ಮೊಬೈಲ್‌ನಲ್ಲಿ ಉಚಿತವಾಗಿ ನೋಡುವುದು ಹೇಗೆ? ಸಂಪೂರ್ಣ ವಿವರ

ಐಪಿಎಲ್‌ 2025ರ ಹರಾಜು ಪ್ರಕ್ರಿಯೆಯು ಇಂದು (ನವೆಂಬರ್ 24 ಮತ್ತು 25) ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿದೆ. ಮೆಗಾ ಹರಾಜು ಸಮಯ, ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ.

ಐಪಿಎಲ್‌ 2025 ಮೆಗಾ ಹರಾಜು ನೇರಪ್ರಸಾರ
ಐಪಿಎಲ್‌ 2025 ಮೆಗಾ ಹರಾಜು ನೇರಪ್ರಸಾರ

ಕೊನೆಗೂ ಬಹುನಿರೀಕ್ಷಿತ ಐಪಿಎಲ್‌ ಮೆಗಾ ಹರಾಜು ದಿನ ಬಂದೇ ಬಿಟ್ಟಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25ರ ಭಾನುವಾರ ಮತ್ತು ಸೋಮವಾರ ಸೌದಿ ಅರೇಬಿಯಾದ ಜೆದ್ದಾದಲ್ಲಿರುವ ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ನಡೆಯುತ್ತಿದೆ. ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್, ಯಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಸ್ ಬಟ್ಲರ್ ಮೊದಲಾದ ಸ್ಟಾರ್‌ ಆಟಗಾರರು ದೊಡ್ಡ ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗುವ ಸಾಧ್ಯತೆ ಇದೆ. ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನು ಖರೀದಿಸಲು ಲೆಕ್ಕಾಚಾರ ಹಾಕಿದ್ದು, ಇದಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ಬಳಿ ಗರಿಷ್ಠ ಪರ್ಸ್‌ ಮೊತ್ತವಿದೆ. ರಿಟೆನ್ಷನ್‌ ಬಳಿಕ ಉಳಿದ 110.5 ಕೋಟಿ ರೂ. ಮೊತ್ತದೊಂದಿಗೆ ತಂಡ ಹರಾಜಿನಲ್ಲಿ ಭಾಗಿಯಾಗುತ್ತಿದೆ. ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ಬಳಿ ಕನಿಷ್ಠ 41 ಕೋಟಿ ರೂಪಾಯಿ ಮೊತ್ತವಿದೆ.

ಎಲ್ಲಾ ಹತ್ತು ಐಪಿಎಲ್ ಫ್ರಾಂಚೈಸಿಗಳು ತಮ್ಮ ಬಾಕಿ ಸ್ಲಾಟ್‌ಗಳನ್ನು ತುಂಬಲು ಪ್ರಯತ್ನಿಸುತ್ತಿವೆ. ಸದ್ಯ ಒಟ್ಟು 577 ಆಟಗಾರರು ಹರಾಜು ಕಣದಲ್ಲಿದ್ದಾರೆ. ಇದರಲ್ಲಿ ಪ್ರತಿ ತಂಡವು ಒಟ್ಟು ಗರಿಷ್ಠ 25 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಇದೇ ವೇಳೆ ರಿಟೆನ್ಷನ್‌ ಸೇರಿ ಕನಿಷ್ಠ 18 ಆಟಗಾರರನ್ನು ಖರೀದಿ ಮಾಡಬೇಕಾಗುತ್ತದೆ.

ಈಗಾಗಲೇ ಉಳಿಕೆ ಪ್ರಕ್ರಿಯೆ ನಡೆದ ಅಕ್ಟೋಬರ್ 31ರಂದು ಎಲ್ಲಾ ತಂಡಗಳು 46 ಆಟಗಾರರನ್ನು ಉಳಿಸಿಕೊಂಡಿವೆ. ಸದ್ಯ ಫ್ರಾಂಚೈಸಿಗಳಲ್ಲಿ 201 ಸ್ಲಾಟ್‌ಗಳು ಲಭ್ಯವಿದೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಹರಾಜಿಗೂ ಮುನ್ನವೇ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಂಡಿವೆ. ಹೀಗಾಗಿ ಈ ತಂಡಗಳ ಬಳಿ ರೈಟ್ ಟು ಮ್ಯಾಚ್ ಕಾರ್ಡ್ ಆಯ್ಕೆ ಇಲ್ಲ.‌

ಮಲ್ಲಿಕಾ ಸಾಗರ್ ಆಕ್ಷನೀರ್

ಕಳೆದ ಆವೃತ್ತಿಯಲ್ಲಿ ಆಟಗಾರರನ್ನು ಹರಾಜು ಕೂಗಿದ್ದ ಮಲ್ಲಿಕಾ ಸಾಗರ್ ಅವರು, ಈ ಬಾರಿಯೂ ಅಧಿಕೃತ ಹರಾಜುದಾರರಾಗಿ ಮುಂದುರೆಯಲಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಸೇರಿ ಒಟ್ಟಾರೆಯಾಗಿ ತಮ್ಮ ಪರ್ಸ್‌ನಲ್ಲಿ ಸುಮಾರು 641.5 ಕೋಟಿ ರೂ. ಮೊತ್ತವನ್ನು ಬಳಸಿಕೊಂಡು ಒಟ್ಟು 201 ಸ್ಲಾಟ್‌ಗಳನ್ನು ತುಂಬಿಸಬೇಕಾಗಿದೆ. ಇವುಗಳಲ್ಲಿ ಸುಮಾರು 70 ಸ್ಲಾಟ್‌ಗಳನ್ನು ವಿದೇಶಿ ಆಟಗಾರರಿಗಾಗಿ ಮೀಸಲಿಡಲಾಗಿದೆ.

ಮೂವರು ಆಟಗಾರರ ಮೇಲೆ ಭಾರಿ ನಿರೀಕ್ಷೆ

ಐಪಿಎಲ್ 2025ರಲ್ಲಿ ರಿಟೆನ್ಷನ್‌ ಆಗದ ಹೆಸರುಗಳಲ್ಲಿ ಮೂರು ಹೆಸರು ಪ್ರಮುಖವು. ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು‌ ಅವರ ತಂಡಗಳು ಕೈಬಿಟ್ಟಿವೆ. ಹೀಗಾಗಿ ಹರಾಜಿನಲ್ಲಿ ಈ ಮೂವರಿಗೆ ಭಾರಿ ಬೆಲೆ ಸಿಗುವ ನಿರೀಕ್ಷೆ ಇದೆ.

ಐಪಿಎಲ್‌ ಹರಾಜು 2025 ಯಾವಾಗ ನಡೆಯಲಿದೆ?

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿರುವ ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಎರಡು ದಿನ ನಡೆಯಲಿದೆ.

ಐಪಿಎಲ್‌ ಹರಾಜು ಪ್ರಕ್ರಿಯೆ ಯಾವ ಸಮಯಕ್ಕೆ ಆರಂಭವಾಗುತ್ತದೆ?

ಐಪಿಎಲ್ 2025ರ ಹರಾಜು ಪ್ರಕ್ರಿಯೆಯು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30 ಗಂಟೆಗೆ ಆರಂಭವಾಗಲಿದೆ. ಈ ಮೊದಲು ಮಧ್ಯಾಹ್ನ 3 ಗಂಟೆಗೆ ಆರಂಭ ಎಂದು ಹೇಳಲಾಗಿತ್ತು. ಅತ್ತ ಪರ್ತ್‌ ಟೆಸ್ಟ್‌ ನಡೆಯುತ್ತಿರುವುದರಿಂದ ಅರ್ಧ ಗಂಟೆ ತಡವಾಗಿ ಆರಂಭವಾಗುತ್ತಿದೆ.

ಐಪಿಎಲ್‌ 2025ರ ಹರಾಜು ಪ್ರಕ್ರಿಯೆಯನ್ನು ಯಾವ ಟಿವಿ ಚಾನೆಲ್‌ ಮೂಲಕ ನೇರಪ್ರಸಾರ ವೀಕ್ಷಿಸಬಹುದು?

ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಮೂಲಕ ಐಪಿಎಲ್‌ ಮೆಗಾ ಹರಾಜು ನೇರಪ್ರಸಾರ ನೋಡಬಹುದು.

ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?

ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಉಚಿತವಾಗಿ ವೀಕ್ಷಿಸಬಹುದು.

Whats_app_banner