ಕೇವಲ 7 ರನ್‌ಗೆ ತಂಡ ಆಲೌಟ್, 6 ಆಟಗಾರರು 0; ಇದು ಅಂತಾರಾಷ್ಟ್ರೀಯ ಪಂದ್ಯದ ಅತ್ಯಂತ ಕಳಪೆ ದಾಖಲೆ
Nov 25, 2024 03:41 PM IST
ಲಾಗೋಸ್‌ನಲ್ಲಿ ನಡೆದ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಐವರಿ ಕೋಸ್ಟ್ ತಂಡ ಕಳಪೆ ದಾಖಲೆ ನಿರ್ಮಿಸಿದೆ. (ಸಾಂದರ್ಭಿಕ ಚಿತ್ರ)
- ನೈಜೀರಿಯಾ ವಿರುದ್ಧದ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡ ಕಳಪೆ ದಾಖಲೆ ನಿರ್ಮಿಸಿದೆ. ಟಿ20 ಸ್ವರೂಪದಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿ ಅನಗತ್ಯ ರೆಕಾರ್ಡ್ ನಿರ್ಮಾಣವಾಗಿದೆ. ಕೇವಲ 7 ರನ್‌ಗಳಿಗೆ ತಂಡ ಆಲೌಟ್ ಆಗಿದೆ.
ಲಾಗೋಸ್: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಫಲಿತಾಂಶ ಏನಾದರೂ ಆಗಬಹುದು. ಅದರಲ್ಲೂ ಟಿ20 ಕ್ರಿಕೆಟ್ ಅಂದರೆ ಕೇಳಬೇಕೇ. ಹೊಡಿಬಡಿ ಆಟದಲ್ಲಿ ದಾಖಲೆಯೂ ನಿರ್ಮಾಣವಾಗಬಹುದು, ಅನಗತ್ಯ ದಾಖಲೆಯೂ ಸೃಷ್ಟಿಯಾಗಬಹುದು. ಐಸಿಸಿ ಪುರುಷರ ಟಿ20 ವಿಶ್ವಕಪ್ ಉಪಪ್ರಾದೇಶಿಕ ಗ್ರೂಪ್ ಸಿ ಆಫ್ರಿಕಾ ಕ್ವಾಲಿಫೈಯರ್ ಪಂದ್ಯದಲ್ಲಿ ಇಂತಹದೇ ಕಳಪೆ ದಾಖಲೆ ನಿರ್ಮಾಣವಾಗಿದೆ. ಲಾಗೋಸ್‌ನಲ್ಲಿ ನಡೆದ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡ ಬೇಡದ ದಾಖಲೆ ನಿರ್ಮಿಸಿದೆ. ನೈಜೀರಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ಆಲೌಟ್ ಆದ ತಂಡವು, ಬರೋಬ್ಬರಿ 264 ರನ್‌ಗಳಿಂದ ಸೋಲನುಭವಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೈಜೀರಿಯಾ ತಂಡ, ಬರೋಬ್ಬರಿ 271/4 ರನ್ ಗಳಿಸಿತು. ತಂಡದ ಪರ ಸೆಲೀಮ್ ಸಲಾವ್ ಶತಕ ಬಾರಿಸಿದರು. 53 ಎಸೆತಗಳಲ್ಲಿ 112 ರನ್ ಗಳಿಸಿ ದಾಖಲೆ ಬರೆದರು. ಉಳಿದಂತೆ ಸುಲೈಮಾನ್ ರನ್ಸೆವೆ (50) ಮತ್ತು ಐಸಾಕ್ ಒಕ್ಪೆ (ಅಜೇಯ 65) ತಲಾ ಅರ್ಧಶತಕ ಸಿಡಿಸಿದರು.
ಭಾರಿ ಮೊತ್ತ ಚೇಸಿಂಗ್‌ಗೆ ಇಳಿದ ಐವರಿ ಕೋಸ್ಟ್, ಕಳಪೆ ಪ್ರದರ್ಶನ ನೀಡಿತು. ತಂಡ ಬ್ಯಾಟಿಂಗ್ ಕ್ರಮಾಂಕವನ್ನು ನಾಶಪಡಿಸಿದ ನೈಜೀರಿಯಾ, 7 ರನ್‌ಗಳಿಗೆ ಆಲೌಟ್ ಮಾಡಿತು. ಎಡಗೈ ಸ್ಪಿನ್ನರ್ ಐಸಾಕ್ ಡ್ಯಾನ್ಲಾಡಿ ಮತ್ತು ಎಡಗೈ ವೇಗಿ ಪ್ರಾಸ್ಪರ್ ಉಸೇನಿ ಕ್ರಮವಾಗಿ ಮೂರು ವಿಕೆಟ್ ಪಡೆದರು. ಹೀಗಾಗಿ 7.3 ಓವರ್‌ಗಳಲ್ಲಿ ಐವರಿ ಕೋಸ್ಟ್ ಆಟ ಮುಗಿಯಿತು. ಆರಂಭಿಕ ಆಟಗಾರ ಔಟಾರಾ ಮೊಹಮ್ಮದ್ ಆರು ಎಸೆತಗಳಲ್ಲಿ ನಾಲ್ಕು ರನ್ ಗಳಿಸುವ ಮೂಲಕ, ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ತಂಡದ ಬ್ಯಾಟರ್‌ಗಳ ರನ್ ಗಳಿಕೆ ಹೀಗಿದೆ. 4, 0, 1, 0, 0, 1, 0, 1, 0, 0*, 0.
ಅನಗತ್ಯ ದಾಖಲೆ
ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವೊಂದು ಒಂದೇ ಅಂಕಿಗೆ ಆಲೌಟ್ ಆಗಿದ್ದು ಇದೇ ಮೊದಲು. ಇದಕ್ಕೂ ಹಿಂದಿನ ಅತ್ಯಲ್ಪ ಮೊತ್ತ 10 ರನ್. ಅದು ಎರಡು ಬಾರಿ ದಾಖಲಾಗಿದೆ. ಈ ವರ್ಷ ಮಂಗೋಲಿಯಾ ವಿರುದ್ಧ ಸಿಂಗಾಪುರ್ ಪಂದ್ಯದಲ್ಲಿ ಕೊನೆಯ ಬಾರಿ 10 ರನ್ ಬಂದಿತ್ತು. ಕಳೆದ ವರ್ಷ ಐಲ್ ಆಫ್ ಮ್ಯಾನ್ ಮತ್ತು ಸ್ಪೇನ್ ವಿರುದ್ಧದ ಪಂದ್ಯದಲ್ಲೂ 10 ರನ್ ಮಾತ್ರ ಒಟ್ಟಾಗಿತ್ತು.
ಪುರುಷರ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಅತಿ ದೊಡ್ಡ ಗೆಲುವಿನ ಅಂತರದಲ್ಲಿ ನೈಜೀರಿಯಾ 3ನೇ ಸ್ಥಾನಕ್ಕೆ ಏರಿದೆ. ಗಾಂಬಿಯಾ ವಿರುದ್ಧ ಜಿಂಬಾಬ್ವೆ 290 ರನ್‌ಗಳ ಜಯ ಸಾಧಿಸಿದ್ದು, ಈವರೆಗಿನ ದಾಖಲೆ. ಮಂಗೋಲಿಯಾ ವಿರುದ್ಧ ನೇಪಾಳ 273 ರನ್‌ಗಳ ಜಯ ಸಾಧಿಸಿರುವುದು ಎರಡನೇ ದೊಡ್ಡ ವಿಜಯ. ಐವರಿ ಕೋಸ್ಟ್ ತನ್ನ ಮೊದಲ ಪಂದ್ಯದಲ್ಲಿ ಸಿಯೆರಾ ಲಿಯೋನ್ ವಿರುದ್ಧ 21 ರನ್‌ಗಳಿಗೆ ಆಲೌಟ್ ಆಗಿ 168 ರನ್‌ಗಳಿಂದ ಸೋತಿತ್ತು.
ವಿಭಾಗ