logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇದು ಟೆಸ್ಟ್​ ಕ್ರಿಕೆಟ್ ಅಲ್ಲ, ಟಿ20; ಸುನಿಲ್ ಗವಾಸ್ಕರ್ ಬಳಿಕ ರೋಹಿತ್​ ಶರ್ಮಾ ನಾಯಕತ್ವ ತಂತ್ರ ಟೀಕಿಸಿದ ಕಪಿಲ್ ದೇವ್

ಇದು ಟೆಸ್ಟ್​ ಕ್ರಿಕೆಟ್ ಅಲ್ಲ, ಟಿ20; ಸುನಿಲ್ ಗವಾಸ್ಕರ್ ಬಳಿಕ ರೋಹಿತ್​ ಶರ್ಮಾ ನಾಯಕತ್ವ ತಂತ್ರ ಟೀಕಿಸಿದ ಕಪಿಲ್ ದೇವ್

Prasanna Kumar P N HT Kannada

Jun 12, 2024 08:23 PM IST

google News

ಇದು ಟೆಸ್ಟ್​ ಕ್ರಿಕೆಟ್ ಅಲ್ಲ, ಟಿ20; ಸುನಿಲ್ ಗವಾಸ್ಕರ್ ಬಳಿಕ ರೋಹಿತ್​ ಶರ್ಮಾ ನಾಯಕತ್ವ ತಂತ್ರ ಟೀಕಿಸಿದ ಕಪಿಲ್ ದೇವ್

    • Kapil Dev: ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಬಳಿಕ ಟೀಮ್ ಇಂಡಿಯಾ ರೋಹಿತ್​ ಶರ್ಮಾ ನಾಯಕತ್ವದ ತಂತ್ರಗಳನ್ನು ಮಾಜಿ ನಾಯಕ ಕಪಿಲ್ ದೇವ್ ಅವರು ಟೀಕಿಸಿದ್ದಾರೆ.
ಇದು ಟೆಸ್ಟ್​ ಕ್ರಿಕೆಟ್ ಅಲ್ಲ, ಟಿ20; ಸುನಿಲ್ ಗವಾಸ್ಕರ್ ಬಳಿಕ ರೋಹಿತ್​ ಶರ್ಮಾ ನಾಯಕತ್ವ ತಂತ್ರ ಟೀಕಿಸಿದ ಕಪಿಲ್ ದೇವ್
ಇದು ಟೆಸ್ಟ್​ ಕ್ರಿಕೆಟ್ ಅಲ್ಲ, ಟಿ20; ಸುನಿಲ್ ಗವಾಸ್ಕರ್ ಬಳಿಕ ರೋಹಿತ್​ ಶರ್ಮಾ ನಾಯಕತ್ವ ತಂತ್ರ ಟೀಕಿಸಿದ ಕಪಿಲ್ ದೇವ್

ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅವರು ರೋಹಿತ್ ಶರ್ಮಾ (Rohit Sharma) ಅವರ ಬೌಲಿಂಗ್ ತಂತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಮಾಜಿ ಭಾರತ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (Kapil Dev) ಅವರು ರೋಹಿತ್ ನಿರ್ಧಾರ ಗುರಿಯಾಗಿಸಿ ಟೀಕಿಸಿದ್ದಾರೆ. ಇಂಡೋ-ಪಾಕ್ (Ind vs Pak) ಪಂದ್ಯದ ನಂತರ ಅಮೆರಿಕ ಎದುರಿನ ಪಂದ್ಯದಲ್ಲೂ ಜಸ್ಪ್ರೀತ್ ಬುಮ್ರಾಗೆ 5ನೇ ಓವರ್​ ಕೊಟ್ಟಿದ್ದಕ್ಕೆ ಕಪಿಲ್ ದೇವ್ ಈಗ ಕಿಡಿಕಾರಿದ್ದಾರೆ. ಪಾಕ್ ಎದುರಿನ ಪಂದ್ಯದಲ್ಲಿ ಬುಮ್ರಾ 3ನೇ ಓವರ್ ಬೌಲಿಂಗ್ ಮಾಡಿದ್ದರು.

ಟಿ20 ವಿಶ್ವಕಪ್​​ನಲ್ಲಿ ಪಾಕ್ ವಿರುದ್ಧದ ಗೆಲುವಿಗೆ ಜಸ್ಪ್ರೀತ್ ಬುಮ್ರಾ (Jasprit Bumrah) ಪ್ರಮುಖ ಪಾತ್ರವಹಿಸಿದ್ದರು. ಬುಮ್ರಾ 4 ಓವರ್​​ಗಳಲ್ಲಿ 14 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆದುಕೊಂಡಿದ್ದರು. ಆದರೆ ಅವರು ಬೌಲಿಂಗ್ ಆರಂಭಿಸಿದ್ದು ಮೂರನೇ ಓವರ್‌ನಲ್ಲಿ. ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಎರಡು ಓವರ್​ಗಳನ್ನು ಹಾಕಿದ್ದರು. ಇದೀಗ ಅಮೆರಿಕ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲೂ ಬುಮ್ರಾ 5ನೇ ಓವರ್​​ನಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕಪಿಲ್ ದೇವ್, ಬುಮ್ರಾಗೆ ಮೊದಲ ಓವರ್ ಕೊಡದಿರುವ ಬಗ್ಗೆ ಪ್ರಶ್ನಿಸಿದ್ದಾರೆ.

ಕಪಿಲ್ ದೇವ್ ಹೇಳಿದ್ದೇನು?

ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲ್ ಮಾಡಬೇಕಾಗಿದೆ. ಅವರು ವಿಕೆಟ್ ಟೇಕಿಂಗ್ ಬೌಲರ್ ಎಂದು ಕಪಿಲ್ ಎಬಿಪಿ ನ್ಯೂಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ನೀವು ಅವರಿಂದ ಐದನೇ ಅಥವಾ ಆರನೇ ಓವರ್​​ ಬೌಲಿಂಗ್ ಮಾಡಿಸಿದರೆ, ಆಟವು ಕೈ ಜಾರಿ ಹೋದರೂ ಅಚ್ಚರಿ ಇಲ್ಲ. ಇದು ಟೆಸ್ಟ್ ಪಂದ್ಯವಲ್ಲ. ಇದು ಟಿ20. ನೀವು ಬೇಗನೆ ವಿಕೆಟ್ ಪಡೆದಷ್ಟೂ ಎದುರಾಳಿ ತಂಡದ ಮೇಲೆ ಒತ್ತಡ ಹೇರುತ್ತದೆ ಎಂದು 65ರ ಹರೆಯದ ಕಪಿಲ್ ಸಲಹೆ ನೀಡಿದ್ದಾರೆ.

ಸಕಾರಾತ್ಮಕ ಮನಸ್ಥಿತಿ ಹೊಂದಿರುವುದು ಉತ್ತಮ. ಬುಮ್ರಾ ಬೌಲಿಂಗ್ ಆರಂಭಿಸಿ ಒಂದೆರಡು ವಿಕೆಟ್ ಪಡೆದರೆ, ಇತರ ಬೌಲರ್‌ಗಳಿಗೂ ವಿಕೆಟ್​ ಪಡೆಯಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ. ಬುಮ್ರಾ ಅವರ ಪ್ರದರ್ಶನ ಶ್ಲಾಘಿಸಿದ ಕಪಿಲ್, 'ಬುಮ್ರಾ ಅವರು ಇಷ್ಟು ದಿನಗಳ ಕಾಲ ಕ್ರಿಕೆಟ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಏಕೆಂದರೆ ಅವರ ಆಕ್ಷನ್ ಮತ್ತು ಓಟದ ರೀತಿ ಅವರ ದೇಹ ಮತ್ತು ಭುಜದ ಮೇಲೆ ಒತ್ತಡ ಉಂಟು ಮಾಡುತ್ತದೆ. ಇದು ಕ್ರಿಕೆಟ್​ನಿಂದ ಬೇಗ ದೂರ ಮಾಡಬಹುದು ಎಂದುಕೊಂಡಿದ್ದೆ. ಆದರೆ ಅವರು ನಮ್ಮೆಲ್ಲರ ಕಲ್ಪನೆ ತಪ್ಪು ಎಂದು ಸಾಬೀತುಪಡಿಸಿದ್ದಾರೆ ಎಂದು ಕಪಿಲ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್​ ಏನು ಹೇಳಿದ್ದರು?

ಪಾಕಿಸ್ತಾನದ ರನ್ ಚೇಸ್ ಸಮಯದಲ್ಲಿ ಗವಾಸ್ಕರ್ ಅವರು ರೋಹಿತ್ ಅವರ ಬೌಲಿಂಗ್ ತಂತ್ರದ ಮೇಲೆ ಕೇಂದ್ರೀಕರಿಸಿ ಟೀಕಿಸಿದ್ದರು. ವೇಗದ ಬೌಲರ್​​ ಜಸ್ಪ್ರೀತ್ ಬುಮ್ರಾ ಅವರನ್ನು ಚೇಸ್‌ನ 3ನೇ ಓವರ್‌ನವರೆಗೆ ಕಾಯಿಸುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ವಿಕೆಟ್​ಗಳು ಪ್ರಮುಖವಾಗಿದ್ದ ಕಾರಣ, ಬುಮ್ರಾ ಅವರನ್ನು ಔಟ್​ ಮಾಡಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹಾಕುತ್ತಿದ್ದರು ಎಂದು ಗವಾಸ್ಕರ್ ಹೇಳಿದ್ದರು.

ಜಸ್ಪ್ರೀತ್ ಬುಮ್ರಾಗೆ ಮೊದಲ ಓವರ್ ನೀಡಬೇಕಾಗಿತ್ತು. ಅವರನ್ನು ಮೂರನೇ ಓವರ್​ವರೆಗೂ ಕಾಯಿಸುವ ಅಗತ್ಯ ಇರಲಿಲ್ಲ. ಅವರು ವಿಕರ್-ಟೇಕಿಂಗ್ ಬೌಲರ್​. ನೀವು ಅವರನ್ನು ಎಂದೂ ಕಾಯಿಸಬಾರದು ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದರು. ಬುಮ್ರಾ ಮೊದಲ ಓವರ್​​ನಲ್ಲಿ ಬೌಲಿಂಗ್ ಮಾಡದೇ ಇರುವುದು ಅಚ್ಚರಿ ಮೂಡಿಸಿತ್ತು. ಹೀಗಾಗಿ ಮಾಜಿ ಕ್ರಿಕೆಟರ್​​ಗಳು ಮತ್ತು ಅಭಿಮಾನಿಗಳು ರೋಹಿತ್​ ಶರ್ಮಾ ನಿರ್ಧಾರವನ್ನು ಟೀಕಿಸಿದ್ದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ