logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿಗಿಂತಲೂ ವೆಂಕಟೇಶ್​​ ಅಯ್ಯರ್ ದುಬಾರಿ, ಮ್ಯಾಕ್ಸಿ ಬೇಡ ಎಂದ ಆರ್​ಸಿಬಿ; ಯಾರಿಗೂ ಬೇಡವಾದ ವಾರ್ನರ್, ಪಡಿಕ್ಕಲ್

ವಿರಾಟ್ ಕೊಹ್ಲಿಗಿಂತಲೂ ವೆಂಕಟೇಶ್​​ ಅಯ್ಯರ್ ದುಬಾರಿ, ಮ್ಯಾಕ್ಸಿ ಬೇಡ ಎಂದ ಆರ್​ಸಿಬಿ; ಯಾರಿಗೂ ಬೇಡವಾದ ವಾರ್ನರ್, ಪಡಿಕ್ಕಲ್

Prasanna Kumar P N HT Kannada

Nov 24, 2024 08:29 PM IST

google News

ವಿರಾಟ್ ಕೊಹ್ಲಿಗಿಂತಲೂ ವೆಂಕಟೇಶ್​​ ಅಯ್ಯರ್ ದುಬಾರಿ, ಮ್ಯಾಕ್ಸಿ ಬೇಡ ಎಂದ ಆರ್​ಸಿಬಿ; ಯಾರಿಗೂ ಬೇಡವಾದ ವಾರ್ನರ್, ಪಡಿಕ್ಕಲ್

    • IPL 2025 Mega Auction: ವೆಂಕಟೇಶ್ ಅಯ್ಯರ್​ 23.75 ಕೋಟಿಗೆ ಕೆಕೆಆರ್​ ಪಾಲಾಗಿದ್ದರೆ, ಗ್ಲೆನ್ ಮ್ಯಾಕ್ಸ್​ವೆಲ್​ ಅವರನ್ನು ಬೇಡವೆಂದ ಆರ್​​ಸಿಬಿ ಜಿತೇಶ್ ಶರ್ಮಾ ಮತ್ತು ಫಿಲ್ ಸಾಲ್ಟ್​ಗೆ ಕೋಟಿ ಕೋಟಿ ಸುರಿದಿದೆ. ಆದರೆ ವಾರ್ನರ್, ಪಡಿಕ್ಕಲ್ ಅನ್​ಸೋಲ್ಡ್ ಆಗಿದ್ದಾರೆ.
ವಿರಾಟ್ ಕೊಹ್ಲಿಗಿಂತಲೂ ವೆಂಕಟೇಶ್​​ ಅಯ್ಯರ್ ದುಬಾರಿ, ಮ್ಯಾಕ್ಸಿ ಬೇಡ ಎಂದ ಆರ್​ಸಿಬಿ; ಯಾರಿಗೂ ಬೇಡವಾದ ವಾರ್ನರ್, ಪಡಿಕ್ಕಲ್
ವಿರಾಟ್ ಕೊಹ್ಲಿಗಿಂತಲೂ ವೆಂಕಟೇಶ್​​ ಅಯ್ಯರ್ ದುಬಾರಿ, ಮ್ಯಾಕ್ಸಿ ಬೇಡ ಎಂದ ಆರ್​ಸಿಬಿ; ಯಾರಿಗೂ ಬೇಡವಾದ ವಾರ್ನರ್, ಪಡಿಕ್ಕಲ್

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಎಡಗೈ ಬ್ಯಾಟರ್​ ವೆಂಕಟೇಶ್ ಅಯ್ಯರ್ ಅಚ್ಚರಿಯ ತಾರೆಯಾಗಿ ಹೊರಹೊಮ್ಮಿದ್ದಾರೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಆರ್​ಸಿಬಿ ಜೊತೆಗೆ ಗುದ್ದಾಡಿ ವೆಂಕಿ ಅವರನ್ನು ಮರಳಿ ತಂಡಕ್ಕೆ ಕರೆತರಲು 23.75 ಕೋಟಿ ರೂಪಾಯಿ ಕೋಟಿ ನೀಡಿದೆ. ವೆಂಕಟೇಶ್ ಪಡೆದಿರುವ ಮೊತ್ತವು, ಬ್ಯಾಟಿಂಗ್​ ಸೂಪರ್​ ಸ್ಟಾರ್​ ವಿರಾಟ್ ಕೊಹ್ಲಿ ಅವರಿಗಿಂತಲೂ ಹೆಚ್ಚು. ಆ ಮೂಲಕ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿರಾಟ್ 21 ಕೋಟಿಗೆ ರಿಟೈನ್ ಆಗಿದ್ದರೆ, ವೆಂಕಟೇಶ್ 23.75 ಕೋಟಿ ಪಡೆದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರು. ಅಚ್ಚರಿ ಏನೆಂದರೆ ವೆಂಕಿ ಖರೀದಿಗೆ 23.50 ಕೋಟಿ ತನಕ ಆರ್​ಸಿಬಿ ಬಿಡ್ ಸಲ್ಲಿಸಿತು. ಆದರೆ ಅಂತಿಮವಾಗಿ ಬಿಡ್​ನಿಂದ ಹಿಂದೆ ಸರಿಯಿತು. ಅಯ್ಯರ್ 50 ಐಪಿಎಲ್ ಪಂದ್ಯಗಳಲ್ಲಿ 1,326 ರನ್ ಗಳಿಸಿದ್ದಾರೆ. 2 ಕೋಟಿ ಮೂಲ ಬೆಲೆ ಹೊಂದಿದ್ದರು.

ಕೆಕೆಆರ್​ ಆರಂಭಿಕ ಬಿಡ್ ಪಡೆಯಿತು. ಬಳಿಕ ಎಲ್‌ಎಸ್‌ಜಿ ಜೊತೆಯಾಯಿತು. ಎಲ್​ಎಸ್​ಜಿ ಬಿಡ್ ಅನ್ನು 6 ಕೋಟಿಗೆ ಏರಿಸಿತು. ಆದರೆ ಶೀಘ್ರದಲ್ಲೇ ಕೈಬಿಟ್ಟಿತು. ಕೆಕೆಆರ್​ 7.75 ಕೋಟಿ ರೂಪಾಯಿಗೆ ಮುನ್ನಡೆಯಿತು. ಇನ್ನೇನು ಬಿಡ್ ಮುಗಿಯಿತು ಎನ್ನುವಷ್ಟರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯ ಪ್ರವೇಶಿಸಿತು.12 ಕೋಟಿ ರೂ.ಗಳನ್ನು ದಾಟಿದಂತೆ ಬಿಡ್ಡಿಂಗ್ ವಾರ್ ತೀವ್ರಗೊಂಡಿತು. ಕೆಕೆಆರ್ ಅದನ್ನು 14 ಕೋಟಿ ರೂ.ಗೆ ಏರಿಸಿತು. ಆರ್​ಸಿಬಿ ಕೂಡ ಇದ್ದೇನೆ ಎಂದು ಏರಿಸಿತು. ನೋಡ ನೋಡುತ್ತಿದ್ದಂತೆ ಬಿಡ್ 19 ಕೋಟಿ ತಲುಪಿತು. ಉಭಯ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಬಳಿಕ ಕೆಕೆಆರ್ ಮತ್ತೆ ಏರಿಸಿತು. 20 ಕೋಟಿ ರೂ ದಾಟಿದಂತೆ ಪ್ಯಾಡ್ಲ್‌ಗಳು ಏರುತ್ತಲೇ ಇದ್ದವು. ಆದರೂ ಆರ್‌ಸಿಬಿ ಹಿಂದೆ ಸರಿಯಲಿಲ್ಲ. ಬಿಡ್ಡಿಂಗ್ ಹೊಸ ಎತ್ತರಕ್ಕೆ ತಲುಪಿದ ಬಳಿಕ ಅಂದರೆ 23.50 ಕೋಟಿ ಬಳಿಕ ಆರ್​ಸಿಬಿ ಹಿಂದೆ ಸರಿಯಿತು. ಅಯ್ಯರ್ ಕೆಕೆಆರ್​​ಗೆ 23.75 ಕೋಟಿಗೆ ಮಾರಾಟವಾದರು.

ಮ್ಯಾಕ್ಸ್​ವೆಲ್ ಬೇಡ ಎಂದ ಆರ್​ಸಿಬಿ

ಆಸ್ಟ್ರೇಲಿಯಾ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ 2 ಕೋಟಿ ರೂಪಾಯಿ ಮೂಲಬೆಲೆಗೆ ಹರಾಜಿಗೆ ಬಂದರು. ಸನ್‌ರೈಸರ್ಸ್‌ ಹೈದರಾಬಾದ್‌ ಜೊತೆಗೆ ಪಂಜಾಬ್‌ ಕಿಂಗ್ಸ್‌ ಬಿಡ್‌ ಕೂಗಿತು. ಕೊನೆಗೆ 4.20 ಕೋಟಿಗೆ ಪಂಜಾಬ್‌ ಕಿಂಗ್ಸ್‌ ಖರೀದಿ ಮಾಡಿತು. ಆದರೆ, ಆರ್‌ಸಿಬಿ ತಂಡ ಅಲ್ಪಮೊತ್ತಕ್ಕೆ ಆರ್‌ಟಿಎಂ ಕಾರ್ಡ್‌ ಬಳಸಲು ಹಿಂದೆ ಸರಿಯಿತು.

11.50 ಕೋಟಿ ಕೊಟ್ಟು ಫಿಲ್‌ ಸಾಲ್ಟ್‌ ಖರೀದಿಸಿದ ಆರ್‌ಸಿಬಿ

ಫಿಲ್‌ ಸಾಲ್ಟ್‌ ಖರೀದಿಗೆ ಆರ್‌ಸಿಬಿ ಆಸಕ್ತಿ ತೋರಿತು. ಇದೇ ವೇಳೆ ಕೆಕೆಆರ್‌ ಕೂಡಾ ತಂಡದ ಮಾಜಿ ಆಟಗಾರನನ್ನು ತೆಕ್ಕೆಗೆ ಹಾಕಿಕೊಳ್ಳಲು ಮುಂದಾಯಿತು. ಆದರೆ, ಕೊನೆಗೆ ಇಂಗ್ಲೆಂಡ್‌ ವಿಕೆಟ್‌ ಕೀಪರ್ ಅನ್ನು 11.50 ಕೋಟಿ ರೂ ಕೊಟ್ಟು ಆರ್‌ಸಿಬಿ ಖರೀದಿಸಿದೆ.

2 ಕೋಟಿ ಮೂಲ ಬೆಲೆಯೊಂದಿಗೆ ಬಂದಿದ್ದ ಹ್ಯಾರಿ ಬ್ರೂಕ್ (ಇಂಗ್ಲೆಂಡ್) ಅವರನ್ನು 6 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.

1 ಕೋಟಿ ಮೂಲ ಬೆಲೆ ಹೊಂದಿದ್ದ ಜಿತೇಶ್​ ಶರ್ಮಾಗೆ 11 ಕೋಟಿ ನೀಡಿ ಆರ್​ಸಿಬಿ ಖರೀದಿಸಿತು. ಜೋಶ್ ಹೇಜಲ್​ವುಡ್​ಗೆ 12.50 ಕೋಟಿ ನೀಡಿತು.

ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ) ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ 2 ಕೋಟಿಗೆ ಖರೀದಿಸಿತು.

2 ಕೋಟಿ ಮೂಲ ಬೆಲೆಯೊಂದಿಗೆ ಬಂದಿದ್ದ ಡೆವೊನ್ ಕಾನ್ವೆ (ನ್ಯೂಜಿಲೆಂಡ್) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 6.25 ಕೋಟಿಗೆ ತೆಕ್ಕೆಗೆ ಹಾಕಿಕೊಂಡಿತು.

ರಾಹುಲ್ ತ್ರಿಪಾಠಿ (ಭಾರತ) ಮೂಲ ಬೆಲೆ 75 ಲಕ್ಷಗಳಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 3.4 ಕೋಟಿಗೆ ಖರೀದಿಸಿತು.

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 2 ಕೋಟಿಗಳ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಾಗ, ಯಾವುದೇ ಫ್ರಾಂಚೈಸಿ ಅದನ್ನು ಖರೀದಿಸಲು ಆಸಕ್ತಿ ತೋರಿಸಲಿಲ್ಲ. ಇದರಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಮಾರಾಟವಾಗದೆ ಉಳಿದರು.

ಕನಿಷ್ಠ 2 ಕೋಟಿಗೆ ಹರಾಜಾದ ದೇವದತ್ ಪಡಿಕ್ಕಲ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಪ್ರಸ್ತುತ, ಪಡಿಕ್ಕಲ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ಟೆಸ್ಟ್ ತಂಡದಲ್ಲಿ ಆಡುತ್ತಿದ್ದಾರೆ.

2 ಕೋಟಿ ರೂ.ಗಳ ಮೂಲ ಬೆಲೆಯೊಂದಿಗೆ ಬಂದಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ಆರ್‌ಟಿಎಂ ಕಾರ್ಡ್‌ನೊಂದಿಗೆ ದೆಹಲಿ ಕ್ಯಾಪಿಟಲ್ಸ್ 9 ಕೋಟಿಗೆ ಸ್ವಾಧೀನಪಡಿಸಿಕೊಂಡಿತು.

ಹರ್ಷಲ್ ಪಟೇಲ್ (ಭಾರತ) ಅವರನ್ನು ಸನ್​​​​​ರೈಸರ್ಸ್ ಹೈದರಾಬಾದ್ 8 ಕೋಟಿಗೆ ಖರೀದಿಸಿದರೆ ಮೂಲ ಬೆಲೆ 2 ಕೋಟಿ.

1.5 ಕೋಟಿ ಮೂಲ ಬೆಲೆಯೊಂದಿಗೆ ಬಂದ ರಚಿನ್ ರವೀಂದ್ರ (ನ್ಯೂಜಿಲೆಂಡ್) ಅವರನ್ನು 4 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತು.

ರವಿಚಂದ್ರನ್ ಅಶ್ವಿನ್ (ಭಾರತ) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ರೂ.9.75 ಕೋಟಿಗೆ ಖರೀದಿಸಿದರೆ ಮೂಲ ಬೆಲೆ 2 ಕೋಟಿ.

ಮಿಚೆಲ್‌ ಮಾರ್ಷ್ 3.40 ಕೋಟಿಗೆ ಎಲ್‌ಎಸ್‌ಜಿ ಪಾಲಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಟಿಎಂ ಕಾರ್ಡ್‌ ಬಳಸಲು ಹಿಂದೆ ಸರಿದಿದೆ.

ಆಸೀಸ್‌ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌, 11 ಕೋಟಿಗೆ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದಾರೆ. ಆರ್‌ಟಿಎಂ ಕಾರ್ಡ್‌ ಬಳಸಲು ಎಲ್ಎಸ್‌ಜಿ ಹಿಂದೆ ಸರಿದ ಕಾರಣದಿಂದ ಪಂಜಾಬ್‌ ಆಲ್‌ರೌಂಡರ್‌ ತೆಕ್ಕೆಗೆ ಹಾಕಿಕೊಂಡಿದೆ.

ಐಪಿಎಲ್ ಲೈವ್ ಹರಾಜು ಅಪ್ಡೇಟ್ಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ