ಅಭಿಮಾನಿಗಳಿಗೆ ಖುಷಿ; ಪರ್ತ್ ಟೆಸ್ಟ್‌ಗೂ ಮುನ್ನ ಬ್ಯಾಟಿಂಗ್ ಆರಂಭಿಸಿದ ಕೆಎಲ್ ರಾಹುಲ್, ಗಿಲ್ ಆಡೋದು ಅನುಮಾನ
Nov 17, 2024 02:10 PM IST
ಅಭಿಮಾನಿಗಳಿಗೆ ಖುಷಿ; ಪರ್ತ್ ಟೆಸ್ಟ್‌ಗೂ ಮುನ್ನ ಬ್ಯಾಟಿಂಗ್ ಆರಂಭಿಸಿದ ಕೆಎಲ್ ರಾಹುಲ್
- ಮೊಣಕೈಗೆ ಗಾಯ ಮಾಡಿಕೊಂಡಿದ್ದ ಕೆಎಲ್ ರಾಹುಲ್ ಅಭ್ಯಾಸಕ್ಕೆ ಮರಳಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಪರ್ತ್ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯದ ಚಿಂತೆಯಲ್ಲಿರುವ ಭಾರತ ತಂಡಕೆ, ರಾಹುಲ್ ಕಮ್‌ಬ್ಯಾಕ್ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಅತ್ತ ಶುಭ್ಮನ್ ಗಿಲ್ ಚೇತರಿಸುವುದು ಅನುಮಾನ ಎಂಬಂತಾಗಿದೆ.
ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ಆರಂಭಕ್ಕೆ ಇನ್ನು 5 ದಿನಗಳು ಮಾತ್ರ ಬಾಕಿ ಉಳಿದಿವೆ. ಪರ್ತ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾಗೆ ಗಾಯದ ಚಿಂತೆ ಕಾಡುತ್ತಿದೆ. ಅಲ್ಲದೆ ಕೌಟುಂಬಿಕ ಕಾರಣಗಳಿಂದಾಗಿ ತಂಡದ ನಾಯಕ ರೋಹಿತ್ ಶರ್ಮಾ ಕೂಡಾ ಪ್ರಥಮ ಟೆಸ್ಟ್‌ನಿಂದ ಹೊರಗೆ ಉಳಿಯುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಗಾಯದ ಭೀತಿ ಮೂಡಿಸಿದ್ದ ಕನ್ನಡಿಗ ಕೆಎಲ್ ರಾಹುಲ್, ಅಭಿಮಾನಿಗಳು ತುಸು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಈ ಹಿಂದೆ ಭಾರತ ಎ ವಿರುದ್ಧದ ಸಿಮ್ಯುಲೇಶನ್ ಪಂದ್ಯದ ವೇಳೆ ಆದ ಗಾಯದಿಂದಾಗಿ ಅಭಿಮಾನಿಗಳಿಗೆ ಆತಂಕವಾಗಿತ್ತು. ಹೀಗಾಗಿ ಅವರು ಪರ್ತ್ ಟೆಸ್ಟ್ ಆಡುವ ಅನುಮಾನವಿತ್ತು. ಇದೀಗ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ರಾಹುಲ್ ಮರಳಿದ್ದಾರೆ. ಅಭ್ಯಾಸ ಪಂದ್ಯದ ಮೊದಲ ದಿನದಂದು ಪ್ರಸಿದ್ಧ್ ಕೃಷ್ಣ ಎಸೆತ ಎದುರಿಸುವಾಗ ರಾಹುಲ್ ಮೊಣಕೈಗೆ ಪೆಟ್ಟಾಗಿತ್ತು. ಹೀಗಾಗಿ ಇನ್ನಿಂಗ್ಸ್ ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಪರ್ತ್‌ನಲ್ಲಿ ಎರಡನೇ ದಿನದಾಟದುದ್ದಕ್ಕೂ ರಾಹುಲ್ ಗೈರು ಹಾಜರಾಗಿದ್ದರು. ಆದರೆ ಮೂರನೇ ದಿನದಾಟಕ್ಕೂ ಮುನ್ನ ನೆಟ್ಸ್ ಅಭ್ಯಾಸಕ್ಕೆ ಮರಳಿದರು. ಹೀಗಾಗಿ ರಾಹುಲ್ ಸರಣಿಯಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ರೋಹಿತ್ ಶರ್ಮಾ ಮೊದಲ ಟೆಸ್ಟ್‌ಗೆ ಅಲಭ್ಯರಾಗುವುದು ಬಹುತೇಕ ಖಚಿತ. ಹೀಗಾಗಿ ರಾಹುಲ್ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತದೆ.
ಅತ್ತ ಅಗ್ರ ಕ್ರಮಾಂಕದ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಎಡ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಆರಂಭಿಕ ಟೆಸ್ಟ್ ಪಂದ್ಯದಿಂದ ಗಿಲ್ ಹೊರಗುಳಿಯುವುದು ಕೂಡಾ ಬಹುತೇಕ ಖಚಿತವಾಗಿದೆ. ಕೊನೆಯ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವಿನ ಹೀರೋಗಳಲ್ಲಿ ಒಬ್ಬರಾದ ಗಿಲ್ ಮೂಳೆ ಮುರಿತದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಅತ್ತ ನಾಯಕ ರೋಹಿತ್ ಶರ್ಮಾ ಕೂಡಾ ಮೊದಲ ಟೆಸ್ಟ್‌ನಿಂದ ಹೊರಗುಳಿದರೆ, ಭಾರತದ ಅಗ್ರ ಕ್ರಮಾಂಕ ಶಕ್ತಿಹೀನವಾಗಲಿದೆ.
ಇಂಟ್ರಾ-ಸ್ಕ್ವಾಡ್ ಪಂದ್ಯದ ಸಿಮ್ಯುಲೇಶನ್‌ನ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಗಿಲ್ ಗಾಯಗೊಂಡಿದ್ದರು. ನೋವಿನಿಂದ ಬಳಲುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಮೈದಾನವನ್ನು ತೊರೆದರು.
ಅನುಭವದ ಕೊರತೆ
ಸದ್ಯ ಕೆಎಲ್ ರಾಹುಲ್ ಆಡುವುದು ಬಹುತೇಕ ಖಚಿತವಾಗಿದ್ದು, ಅಗ್ರ ಕ್ರಮಾಂಕದಲ್ಲಿ ಅನುಭವದ ಸೇರ್ಪಡೆಯೊಂದಿಗೆ ತುಸು ಸ್ಥಿರತೆ ಬರಲಿದೆ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಸಿಮ್ಯುಲೇಶನ್ ಪಂದ್ಯದಲ್ಲಿ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಇದೀಗ ನವೆಂಬರ್ 22ರಂದು ಆರಂಭವಾಗುವ ಪಂದ್ಯಕ್ಕೆ ಸ್ಟಾರ್ ಬ್ಯಾಟರ್ ಫಿಟ್ ಆಗುವ ನಿರೀಕ್ಷೆಯಲ್ಲಿ ಮ್ಯಾನೇಜ್‌ಮೆಂಟ್ ಇದೆ.
ಗಿಲ್ ಅನುಪಸ್ಥಿತಿಯಲ್ಲಿ, ಅಭಿಮನ್ಯು ಈಶ್ವರನ್ ಅಥವಾ ದೇವದತ್ ಪಡಿಕ್ಕಲ್ ಟೆಸ್ಟ್ ಪದಾರ್ಪಣೆ ಮಾಡಬಹುದು. ಒಂದು ವೇಳೆ ನಾಯಕನಾಗಿ ರೋಹಿತ್ ಶರ್ಮಾ ಮರಳಿದರೆ, ತಂಡ ಭಿನ್ನವಾಗಿರಲಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.