ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗಿಂದ; ಟೆಸ್ಟ್ ಸರಣಿ ವೇಳಾಪಟ್ಟಿ, ಪಂದ್ಯಗಳ ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಗೆಲುವು ಅನಿವಾರ್ಯವಾಗಿದೆ. ನವೆಂಬರ್ 22ರಿಂದ ಸರಣಿ ಆರಂಭವಾಗುತ್ತಿದ್ದು, ಸರಣಿಯ ಸಂಪೂರ್ಣ ವೇಳಾಪಟ್ಟಿ, ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಆರಂಭ ಸಮಯ ಹಾಗೂ ನೇರಪ್ರಸಾರ ವಿವರ ಇಲ್ಲಿದೆ.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ವೈಟ್‌ವಾಶ್ ಮುಖಭಂಗಕ್ಕೊಳಗಾದ ಭಾರತ ತಂಡವು, ಇದೀಗ ಮಹತ್ವದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲೇ ಮಹತ್ವದ ಸರಣಿ ಎಂದೇ ಕರೆಯಲಾಗುವ ಸೀರೀಸ್‌ನಲ್ಲಿ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಸೆಣಸಲಿವೆ. ಈ ಬಾರಿ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಸರಣಿ ನಡೆಯುತ್ತಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಈ ಸರಣಿ ಪ್ರಮುಖ ಸವಾಲಾಗಿದೆ. ಸತತ ನಾಲ್ಕು ಆವೃತ್ತಿಗಳಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿರುವ ಭಾರತವು, ತನ್ನ ಪ್ರಾಬಲ್ಯವನ್ನು ಮುಂದುವರಿಸಿ ಟ್ರೋಫಿ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ಭಾರತ ತಂಡವು ಕೊನೆಯ ನಾಲ್ಕು ಆವೃತ್ತಿಯ ಬಿಜಿಟಿ ಸರಣಿಯಲ್ಲಿ ಸೋತಿಲ್ಲ. ಇದರಲ್ಲಿ ಎರಡು ಬಾರಿ ತವರು ಹಾಗೂ ಇನ್ನೆರಡು ಬಾರಿ ಆಸ್ಟ್ರೇಲಿಯಾ ನೆಲದಲ್ಲಿಯೂ ಸರಣಿ ವಶಪಡಿಸಿಕೊಂಡಿದೆ. ಕೊನೆಯ ಬಾರಿಗೆ ಭಾರತದಲ್ಲಿ ನಡೆದ 4 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತ್ತು. ಅತ್ತ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ, ಕೊನೆಯದಾಗಿ 2014–15ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ತನ್ನದೇ ನೆಲದಲ್ಲಿ 2-0 ಅಂತರದಿಂದ ಭಾರತವನ್ನು ಬಗ್ಗುಬಡಿದಿತ್ತು. ಅದಾದ ನಂತರ ಭಾರತವನ್ನು ಸೋಲಿಸಲು ಕಾಂಗರೂಗಳಿಂದ ಸಾಧ್ಯವಾಗಿಲ್ಲ. ತವರಿನಲ್ಲೂ ಎರಡು ಬಾರಿ ಸರಣಿ ಸೋತು ಭಾರತದ ಪ್ರಾಬಲ್ಯಕ್ಕೆ ಮಂಡಿಯೂರಿತ್ತು. ಇದೀಗ ತಮ್ಮ ದಶಕದ ಬರಗಾಲವನ್ನು ಕೊನೆಗೊಳಿಸಲು ಕಾಂಗರೂಗಳು ಉತ್ಸುಕರಾಗಿದ್ದಾರೆ.
ಅತ್ತ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-0 ಅಂತರದ ಸರಣಿ ಸೋತಿರುವುದು ಆಸೀಸ್ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ, ಭಾರತವೀಗ ಗಾಯಗೊಂಡ ಹುಲಿಯಂತಾಗಿದ್ದು, ತಿರುಗಿ ಬೀಳಲು ಹಾತೊರೆಯುತ್ತಿದೆ ಎಂಬುದನ್ನು ಆಸೀಸ್ ಆಟಗಾರರು ಒಪ್ಪಿಕೊಂಡೊದ್ದಾರೆ. ಈ ಬಗ್ಗೆ ವೇಗಿ ಜೋಶ್ ಹೇಜಲ್‌ವುಡ್ ಇತ್ತೀಚೆಗಷ್ಟೇ ಮಾತನಾಡಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಉಭಯ ತಂಡಗಳಿಗೂ ಈ ಸರಣಿ ನಿರ್ಣಾಯಕವಾಗಿದೆ. ಸದ್ಯ ಎರಡೂ ತಂಡಗಳು ಪ್ರಸ್ತುತ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಹೀಗಾಗಿ ಈ ಸರಣಿಯನ್ನು ದೊಡ್ಡ ಅಂತರದಿಂದ ಗೆಲ್ಲುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ವೇಳಾಪಟ್ಟಿ ಹೀಗಿದೆ (ಭಾರತೀಯ ಕಾಲಮಾನ
- 1ನೇ ಟೆಸ್ಟ್: ನವೆಂಬರ್ 22ರಿಂದ 26, 2024 - ಪರ್ತ್, ಬೆಳಗ್ಗೆ 7:50
- 2ನೇ ಟೆಸ್ಟ್ (ರಾತ್ರಿ ಮತ್ತು ಹಗಲು): ಡಿಸೆಂಬರ್ 6ರಿಂದ 10, 2024 - ಅಡಿಲೇಡ್, ಬೆಳಗ್ಗೆ 9:30
- 3ನೇ ಟೆಸ್ಟ್: ಡಿಸೆಂಬರ್ 14ರಿಂದ 18, 2024 - ಬ್ರಿಸ್ಬೇನ್, ಬೆಳಗ್ಗೆ 5:50
- 4ನೇ ಟೆಸ್ಟ್: ಡಿಸೆಂಬರ್ 26ರಿಂದ 30, 2024 - ಮೆಲ್ಬೋರ್ನ್, ಬೆಳಗ್ಗೆ 5:00
- 5ನೇ ಟೆಸ್ಟ್: ಜನವರಿ 3ರಿಂದ 7, 2025 - ಸಿಡ್ನಿ, ಬೆಳಗ್ಗೆ 5:00
ಬಾರ್ಡರ್-ಗವಾಸ್ಕರ್ ಟ್ರೋಫಿ ನೇರಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್
ಟೆಸ್ಟ್ ಸರಣಿಯು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಪ್ರಯಾಣ ಮೀಸಲು: ಮುಖೇಶ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್
ಆಸ್ಟ್ರೇಲಿಯಾ ತಂಡ (1ನೇ ಟೆಸ್ಟ್‌ಗೆ)
ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.