logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿಗೆ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಎಂಟ್ರಿ; ಚಹಾಲ್ ಖರೀದಿಸಿದ ಪಂಜಾಬ್, ಗುಜರಾತ್ ಪಾಲಾದ್ರು ಸಿರಾಜ್

ಆರ್‌ಸಿಬಿಗೆ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಎಂಟ್ರಿ; ಚಹಾಲ್ ಖರೀದಿಸಿದ ಪಂಜಾಬ್, ಗುಜರಾತ್ ಪಾಲಾದ್ರು ಸಿರಾಜ್

Jayaraj HT Kannada

Nov 24, 2024 05:47 PM IST

google News

ಆರ್‌ಸಿಬಿಗೆ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಎಂಟ್ರಿ; ಚಹಾಲ್ ಖರೀದಿಸಿದ ಪಂಜಾಬ್

    • ಆರ್‌ಸಿಬಿ ತಂಡವು ಆಲ್‌ರೌಂಡರ್ ಲಿಯಾಮ್‌ ಲಿವಿಂಗ್‌ಸ್ಟನ್‌ ಅವರನ್ನು ಖರೀದಿ ಮಾಡಿದೆ. ಯುಜ್ವೇಂದ್ರ ಚಹಾಲ್‌ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದಾರೆ. ಮೊಹಮ್ಮದ್‌ ಸಿರಾಜ್‌ ಗುಜರಾತ್‌ ಟೈಟಾನ್ಸ್‌ ಪಾಲಾದರೆ, ಮಹಮ್ಮದ್‌ ಶಮಿ ಸನ್‌ರೈಸರ್ಸ್‌ ಹೈದರಾಬಾದ್‌ ಸೇರಿಕೊಂಡಿದ್ದಾರೆ.
ಆರ್‌ಸಿಬಿಗೆ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಎಂಟ್ರಿ; ಚಹಾಲ್ ಖರೀದಿಸಿದ ಪಂಜಾಬ್
ಆರ್‌ಸಿಬಿಗೆ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಎಂಟ್ರಿ; ಚಹಾಲ್ ಖರೀದಿಸಿದ ಪಂಜಾಬ್

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ಮೊದಲ ಆಟಗಾರನಾಗಿ ವಿದೇಶಿ ಆಲ್‌ರೌಂಡರ್ ಲಿಯಾಮ್‌ ಲಿವಿಂಗ್‌ಸ್ಟನ್‌ ಅವರನ್ನು ಖರೀದಿ ಮಾಡಿತು. ಇಂಗ್ಲೆಂಡ್‌ ಆಲ್‌ರೌಂಡರ್‌ ಲಿವಿಂಗ್‌ಸ್ಟನ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 8.75 ಕೋಟಿ ರೂಪಾಯಿ ಕೊಟ್ಟು ತಂಡ ಸೇರಿಸಿಕೊಂಡಿದೆ. ಕಳೆದ ಬಾರಿ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದ ಇಂಗ್ಲೆಂಡ್‌ ಆಟಗಾರನನ್ನು ಖರೀದಿ ಮಾಡಿದ ಆರ್‌ಸಿಬಿ, ಆಲ್‌ರೌಂಡ್‌ ಬಳಗವನ್ನು ಗಟ್ಟಿಗೊಳಿಸಲು ಮುಂದಾಗಿದೆ. ಇದು ಪ್ರಸಕ್ತ ಹರಾಜಿನಲ್ಲಿ ಆರ್‌ಸಿಬಿಯ ಮೊದಲ ಖರೀದಿಯಾಗಿದೆ. ಉಳಿದಂತೆ ಕನ್ನಡಿಗೆ ಕೆಎಲ್‌ ರಾಹುಲ್‌, ಸಿರಾಜ್‌ ಅಥವಾ ಯುಜ್ವೇಂದ್ರ ಚಹಾಲ್‌ ಖರೀದಿಗೆ ತಂಡ ಆಸಕ್ತಿ ತೋರಿಸಲಿಲ್ಲ.

ಯುಜ್ವೇಂದ್ರ ಚಹಾಲ್‌ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದಾರೆ. ಬರೋಬ್ಬರಿ 18 ಕೋಟಿ ರೂಪಾಯಿ ಪಡೆದ ಸ್ಪಿನ್ನರ್‌, ಐಪಿಎಲ್‌ನಲ್ಲಿ ದುಬಾರಿ ಮೊತ್ತ ಪಡೆದ ಭಾರತೀಯ ಸ್ಪಿನ್ನರ್‌ ಎಂಬ ದಾಖಲೆ ನಿರ್ಮಿಸಿದರು. ಆರ್‌ಸಿಬಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ಮಾಜಿ ಆಟಗಾರನಾಗಿರು ಯುಜ್ವೇಂದ್ರ ಚಹಾಲ್‌ ಅವರನ್ನು ಆರ್‌ಸಿಬಿ ತಂಡ ಖರೀದಿಸುವ ನಿರೀಕ್ಷೆ ಇತ್ತು. ಆದರೆ ತಂಡ ಆರ್‌ಟಿಎಂ ಕಾರ್ಡ್‌ ಬಳಸಲಿಲ್ಲ. ಚಹಾಲ್‌ಗೆಎ ಬಿಡ್ಡಿಂಗ್ 2‌ ಕೋಟಿಯಿಂದ ಆರಂಭವಾಯ್ತು. ಗುಜರಾತ್‌ ಮತ್ತು ಸಿಎಸ್‌ಕೆ ಬಿಡ್‌ ವಾರ್‌ಗೆ ಇಳಿಯಿತು. ಈ ನಡುವೆ ಎಲ್‌ಎಸ್‌ಜಿ ಮತ್ತು ಪಂಜಾಬ್‌ ಕಿಂಗ್ಸ್‌ ಕೂಡಾ ಅಖಾಡಕ್ಕೆ ಧುಮುಕಿತು.

ಹರಾಜು 14 ಕೋಟಿ ದಾಟಿದ ಬಳಿಕ ಆರ್‌ಸಿಬಿ ಬಿಡ್‌ಗೆ ಬಂತು. ಒಮ್ಮೆ ಹರಾಜು ಕೂಗಿ ಬಿಡ್ಡಿಂಗ್‌ ನಿಲ್ಲಿಸಿತು. ಈ ವೇಳೆ ಎಸ್‌ಆರ್‌ಎಚ್‌ ಎಂಟ್ರಿ ಕೊಟ್ಟಿತು. ಪಂಜಾಬ್‌ ಮತ್ತು ಹೈದರಾಬಾದ್‌ ಬಿಡ್‌ ನಡೆಸುತ್ತಾ ಸಾಗಿತು. ಕೊನೆಗೆ ಪಂಜಾಬ್‌ ಕಿಂಗ್ಸ್‌ ತಂಡ 18 ಕೋಟಿಗೆ ಯೂಜಿ ಖರೀದಿಸಿತು.

ಅತ್ತ ಮೊಹಮ್ಮದ್‌ ಸಿರಾಜ್‌ 12.25 ಕೋಟಿ ರೂಪಾಯಿಗೆ ಗುಜರಾತ್‌ ಟೈಟಾನ್ಸ್‌ ಪಾಲಾದರು. ಆರ್‌ಸಿಬಿ ತಂಡ ಆರ್‌ಟಿಎಂ ಕಾರ್ಡ್‌ ಬಳಕೆಗೆ ಹಿಂದೆ ಸರಿಯಿತು. ಮಹಮ್ಮದ್‌ ಶಮಿ 10 ಕೋಟಿ ರೂಗೆ ಸನ್‌ರೈಸರ್ಸ್‌ ಹೈದರಾಬಾದ್‌ ಪಾಲಾದರು.

ಮಿಲ್ಲರ್‌ ಲಕ್ನೋ ಸೂಪರ್‌ ಜೈಂಟ್ಸ್‌ ಪಾಲು

ಡೇವಿಡ್‌ ಮಿಲ್ಲರ್‌ ಮೂಲಬೆಲೆ 1.50 ಕೋಟಿ ರೂಪಾಯಿಗೆ ಬಿಡ್‌ಗೆ ಬಂದರು. ಆರ್‌ಸಿಬಿ ತಂಡವು ಆರಂಭದಿಂದಲೇ ಮಿಲ್ಲರ್‌ ಖರೀದಿಗೆ ಆಸಕ್ತಿ ತೋರಿತು. ಈ ವೇಳೆ ಮಿಲ್ಲರ್‌ ಮಾಜಿ ತಂಡ ಗುಜರಾತ್‌ ಟೈಟಾನ್ಸ್‌ ಕೂಡಾ ಸಾಥ್‌ ನೀಡಿತು. ಅಷ್ಟರಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಬಿಡ್‌ ವಾರ್‌ಗೆ ಬಂತು. ದಕ್ಷಿಣ ಆಫ್ರಿಕಾ ಹಿಟ್ಟರ್‌ ಖರೀದಿಗೆ ತಂತ್ರ ರೂಪಿಸಿದ್ದ ಆರ್‌ಸಿಬಿ, ಬಿಡ್‌ ಮುಂದುವರೆಸುತ್ತಲೇ ಹೋಯ್ತು. ಈ ವೇಳೆ ಲಕ್ನೋ ಸೂಪರ್‌ ಜೈಂಟ್ಸ್‌ 7.50 ಕೋಟಿಗೆ ಖರೀದಿ ಮಾಡಿತು.

ಕೆಎಲ್‌ ರಾಹುಲ್‌ ಖರೀದಿ ಮಾಡದ ಬೆಂಗಳೂರು

ಐಪಿಎಲ್‌ ಹರಾಜಿನಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಖರೀದಿಗೆ ಆರ್‌ಸಿಬಿ ಆರಂಭದಿಂದಲೇ ಬಿಡ್‌ ಮಾಡಿತು. ಅತ್ತ ಕೆಕೆಆರ್‌ ಕೂಡಾ ಪ್ರಬಲ ಪೈಪೋಟಿ ನೀಡಿತು. ಹರಾಜಿಗೂ ಮುನ್ನವೇ ಕನ್ನಡಿಗನನ್ನು ಆರ್‌ಸಿಬಿ ತಂಡ ಖರೀದಿ ಮಾಡುವ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಅದರಂತೆಯೇ ಬೆಂಗಳೂರು ತಂಡ ಕೂಡಾ ಬಿಡ್‌ ನಡೆಸಿತು. 10 ಕೋಟಿ ದಾಟುತ್ತಿದ್ದಂತೆಯೇ ಆರ್‌ಸಿಬಿ ಬಿಡ್ಡಿಂಗ್‌ನಿಂದ ಹಿಂದೆ ಸರಿಯಿತು. ಅಷ್ಟರಲ್ಲಿ ಡೆಲ್ಲಿ ಅಖಾಡಕ್ಕೆ ಬಂತು. ಕೊನೆಗೆ 14 ಕೋಟಿ ರೂಪಾಯಿಗೆ ರಾಹುಲ್‌ ಡೆಲ್ಲಿ ಪಾಲಾದರು.

ಐಪಿಎಲ್‌ ಲೈವ್‌ ಅಪ್ಡೇಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ