ಎರಡು ಬಾರಿ ಗೆಲುವಿನ ಸಿಹಿ, ಮತ್ತೊಮ್ಮೆ ಆಘಾತ; ಭಾರತದ ಮೂರು ವಿಶ್ವಕಪ್ ಫೈನಲ್‌ಗಳ ಮೆಲುಕು
Nov 18, 2023 07:14 AM IST
ನಾಲ್ಕನೇ ವಿಶ್ವಕಪ್ ಫೈನಲ್‌ನಲ್ಲಿ ಮೂರನೇ ಟ್ರೋಫಿಯತ್ತ ಕಣ್ಣಿಟ್ಟ ಭಾರತ
- India vs Australia Final: ಭಾರತ ತಂಡವು ನಾಲ್ಕನೇ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ತಲುಪಿದ್ದು, ಭಾನುವಾರ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಸುಮಾರು ಒಂದು ದಶಕದ ಬಳಿಕ ಭಾರತ ಕ್ರಿಕೆಟ್ ತಂಡವು (Indian Cricket team) ಏಕದಿನ ವಿಶ್ವಕಪ್ (ODI World Cup) ಫೈನಲ್‌ಗೆ ಲಗ್ಗೆ ಇಟ್ಟಿದೆ. ಕೊನೆಯ ಬಾರಿಗೆ ತವರಿನಲ್ಲೇ ನಡೆದ ಪಂದ್ಯಾವಳಿಯ ಫೈನಲ್ ತಲುಪಿ ವಿಶ್ವಕಪ್ ಎತ್ತಿಹಿಡಿದಿದ್ದ ಟೀಮ್ ಇಂಡಿಯಾ, ಮತ್ತೆ ಇತಿಹಾಸ ಪುನರ್ನಿರ್ಮಿಸುವ ಉತ್ಸಾಹದಲ್ಲಿದೆ. ಅಂದು ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಯಶಸ್ಸಿನ ಶಿಖರ ಹತ್ತಿದರೆ, ಇಂದು ರೋಹಿತ್ ಶರ್ಮಾಗೆ ಆ ಜವಾಬ್ದಾರಿ ಇದೆ.
ಹಿಟ್‌ಮ್ಯಾನ್ ನಾಯಕತ್ವದಲ್ಲಿ ಸದ್ಯ ಭಾರತ ಯಶಸ್ಸಿನ ಉತ್ತುಂಗದಲ್ಲಿದೆ. ಆಡಿದ 10 ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದೆ. ಆ ಎಲ್ಲಾ ಗೆಲುವುಗಳು ಭರ್ಜರಿ ಮತ್ತು ಸುಲಭ ಗೆಲುವು ಎಂಬುದು ವಿಶೇಷ. ಇದೀಗ ಭಾರತದ ಫೈನಲ್ ಎದುರಾಳಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ. ಪಂದ್ಯಾವಳಿಯ ಆರಂಭದಲ್ಲಿ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ತಮ್ಮ ಅಭಿಯಾನ ಆರಂಭಿಸಿದ್ದವು. ಇದೀಗ ಟೂರ್ನಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ. ಮತ್ತೊಂದೆಡೆ 20 ವರ್ಷಗಳ ಹಿಂದೆ, ಅಂದರೆ 2003ರ ಫೈನಲ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು. ಆ ಸಮಯದಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಆಸ್ಟ್ರೇಲಿಯಾ ಸಹಜವಾಗಿ ಟ್ರೋಫಿ ಗೆದ್ದಿತು. ಆದರೆ, ಈ ಭಾರಿ ಭಾರತ ಫೇವರೆಟ್ ಮಾತ್ರವಲ್ಲದೆ ಹೆಚ್ಚು ಬಲಿಷ್ಠ ತಂಡವಾಗಿದೆ.
ಪುರುಷರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ನಾಲ್ಕನೇ ನಾಯಕ ರೋಹಿತ್. ಸದ್ಯ 2023ರ ವಿಶ್ವಕಪ್ ಫೈನಲ್ ಪಂದ್ಯವು ನವೆಂಬರ್ 19ರ ಭಾನುವಾರ ನಡೆಯುತ್ತಿದೆ. ಅದಕ್ಕೂ ಮುನ್ನ ಭಾರತ ಈ ಹಿಂದೆ ಆಡಿದ ಮೂರು ವಿಶ್ವಕಪ್ ಫೈನಲ್ ಪಂದ್ಯಗಳು ಹೇಗಿದ್ದವು? ಭಾರತದ ಪ್ರದರ್ಶನ ಹೇಗಿತ್ತು ಎಂದು ನೋಡೋಣ.
- 1983: ವೆಸ್ಟ್ ಇಂಡೀಸ್‌ಗೆ 43 ರನ್‌ಗಳ ಸೋಲುಣಿಸಿದ ಭಾರತ
ವಿಶ್ವಕಪ್ ಇತಿಹಾಸದಲ್ಲೇ ಜಗತ್ತಿಗೆ ಭಾರತವು ಅಚ್ಚರಿಯ ಫಲಿತಾಂಶ ನೀಡಿದ ವರ್ಷವದು. ಕ್ರಿಕೆಟ್ ಎಂದರೆ ವೆಸ್ಟ್ ಇಂಡೀಸ್ ಎಂಬ ಕಾಲದಲ್ಲಿ ಭಾರತವು ಅದೇ ಬಲಿಷ್ಠ ತಂಡದ ವಿರುದ್ಧ ವಿಶ್ವಕಪ್ ಗೆದ್ದು ಬೀಗಿದ ವರ್ಷ. 1983ರ ಜೂನ್ 25, ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆ ಸಮಯದಲ್ಲಿ ಭಾರತವು ಫೈನಲ್‌ಗೆ ಬಂದಿರುವುದು ಆ ಯುಗದ ದೊಡ್ಡ ಶಾಕ್ ಆಗಿತ್ತು. ಇನ್ನು ಕಪ್ ಗೆದ್ದರೆ, ಹೇಗಿರಬೇಡ?
ಕ್ಲೈವ್ ಲಾಯ್ಡ್ ನಾಯಕತ್ವದ ಬಲಿಷ್ಠ ವೆಸ್ಟ್ ಇಂಡೀಸ್, ಆ ಸಮಯದಲ್ಲಿ ವಿಶ್ವಕಪ್ ಗೆದ್ದ ಏಕೈಕ ತಂಡ. ಸತತ ಮೂರನೇ ಟ್ರೋಫಿಗಾಗಿ ವಿಂಡೀಸ್ ಚೇಸಿಂಗ್‌ಗೆ ಇಳಿದಿತ್ತು. ಮೊದಲು ಬ್ಯಾಟ್ ಬೀಸಿದ ಭಾರತ 60 ಓವರ್‌ಗಳಲ್ಲಿ ಕೇವಲ 183 ರನ್‌ಗಳಿಗೆ ಆಲೌಟ್ ಆಗಿತ್ತು. ಚೇಸಿಂಗ್‌ನಲ್ಲಿ ನಡೆದಿದೇ ಮ್ಯಾಜಿಕ್. ಗಾರ್ಡನ್ ಗ್ರೀನಿಡ್ಜ್, ಡೆಸ್ಮಂಡ್ ಹೇನ್ಸ್, ವಿವ್ ರಿಚರ್ಡ್ಸ್ ಅವರಂಥ ಬಲಾಢ್ಯ ಬ್ಯಾಟಿಂಗ್ ಲೈನ್ಅಪ್ ಅನ್ನು ಟೀಮ್ ಇಂಡಿಯಾ ಕಟ್ಟಿಹಾಕಿತು. ರೋಚಕವಾಗಿ ವಿಶ್ವಕಪ್ ಗೆದ್ದು ಬೀಗಿತು.
2003: ಭಾರತವನ್ನು 125 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ
ಅದು ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯನ್ನರ ಪ್ರಾಬಲ್ಯವಿದ್ದ ಕಾಲ. ಸೌರವ್ ಗಂಗೂಲಿ ನೇತೃತ್ವದ ತಂಡಕ್ಕೆ ಗೆಲುವು ಅಸಂಭವವೆಂದು ಪರಿಗಣಿಸಲಾಗಿತ್ತು. ಭಾರತವು ಆ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಆ ಎರಡೂ ಸೋಲುಗಳು ಆಸೀಸ್ ವಿರುದ್ಧವೇ ಆಗಿತ್ತು. ಅದರಲ್ಲಿ ಒಂದು ಫೈನಲ್ ಪಂದ್ಯದಲ್ಲಿ ಕಹಿ ಸೋಲು. ಆ ಆವೃತ್ತಿಯಲ್ಲಿ ಆಸೀಸ್ ಆಡಿದ ಎಲ್ಲಾ 11 ಪಂದ್ಯಗಳನ್ನು ಗೆದ್ದು ಅಜೇಯವಾಗಿತ್ತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಆಸ್ಟ್ರೇಲಿಯಾ, ಪಾಂಟಿಂಗ್ ಶತಕದ (121 ಎಸೆತಗಳಲ್ಲಿ ಅಜೇಯ 140) ನೆರವಿನಿಂದ 359/2 ರನ್ ಗಳಿಸಿತು. ಚೇಸಿಂಗ್ ನಡೆಸಿದ ಭಾರತ 234 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಹೀಗಾಗಿ 125 ರನ್‌ಗಳಿಂದ ಸೋತಿತು. ಭಾರತದ ಪರ ವೀರೇಂದ್ರ ಸೆಹ್ವಾಗ್ 81 ಎಸೆತಗಳಲ್ಲಿ 82 ರನ್ ಗಳಿಸಿದರೆ, ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 57 ಎಸೆತಗಳಲ್ಲಿ 47 ರನ್ ಗಳಿಸಿದರು.
- 2011: ಶ್ರೀಲಂಕಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಭಾರತ
1983ರ ಬಳಿಕ ಎರಡನೇ ವಿಶ್ವಕಪ್ ಗೆಲ್ಲುವ ಹೆಬ್ಬಯಕೆಯಲ್ಲಿ ಭಾರತವಿತ್ತು. ಸಹಜವಾಗಿ ಆತಿಥೇಯ ಭಾರತವು ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡ. ಭಾರತ ಮತ್ತು ಶ್ರೀಲಂಕಾ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದವು. ಮಹೇಲ ಜಯವರ್ಧನೆ 88 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿ ಶ್ರೀಲಂಕಾ 274/6 ರನ ಗಳಿಸಲು ನೆರವಾದರು.
ಚೇಸಿಂಗ್ ವೇಳೆ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ವೀರೇಂದ್ರ ಸೆಹ್ವಾಗ್ ಡಕೌಟ್ ಆದರು. ಸಚಿನ್ ತೆಂಡೂಲ್ಕರ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ವೇಳೆ ಗೌತಮ್ ಗಂಭೀರ್ ಮತ್ತು ಯುವ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 83 ರನ್ ಜೊತೆಯಾಟ ನೀಡಿದರು. ನಂತರ ಗಂಭೀರ್ ಹಾಗೂ ನಾಯಕ ಎಂಎಸ್ ಧೋನಿ ಅವರೊಂದಿಗೆ 109 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಶತಕಕ್ಕೆ ಮೂರು ರನ್‌ಗಳ ಅಂತರದೊಂದಿಗೆ ಗಂಭೀರ್ ಔಟಾದರು. ಆದರೆ ಧೋನಿ ಕೇವಲ 79 ಎಸೆತಗಳಲ್ಲಿ 91 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೆ ಸುಮಾರು ಮೂರು ದಶಕಗಳ ನಂತರ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದರು.