logo
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂಎಸ್ ಧೋನಿ ಫ್ಯಾನ್ಸ್​ಗೆ ಸಿಹಿ ಸುದ್ದಿ; ಸಿಎಸ್​ಕೆ ಒತ್ತಾಯದಂತೆ ಹಳೆಯ ನಿಯಮವನ್ನೇ ಜಾರಿಗೆ ಮುಂದಾದ ಬಿಸಿಸಿಐ

ಎಂಎಸ್ ಧೋನಿ ಫ್ಯಾನ್ಸ್​ಗೆ ಸಿಹಿ ಸುದ್ದಿ; ಸಿಎಸ್​ಕೆ ಒತ್ತಾಯದಂತೆ ಹಳೆಯ ನಿಯಮವನ್ನೇ ಜಾರಿಗೆ ಮುಂದಾದ ಬಿಸಿಸಿಐ

Prasanna Kumar P N HT Kannada

Aug 18, 2024 09:58 AM IST

google News

ಎಂಎಸ್ ಧೋನಿಯನ್ನು ಉಳಿಸಲು ಸಿಎಸ್​ಕೆ ಮಾಸ್ಟರ್ ಪ್ಲಾನ್

    • MS Dhoni: ಎಂಎಸ್ ಧೋನಿ ಅವರನ್ನು ಉಳಿಸಿಕೊಳ್ಳಲು ಹಳೆಯ ನಿಯಮವನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದ ಸಿಎಸ್​ಕೆ ಬೇಡಿಕೆ ಈಗ ಬಿಸಿಸಿಐ ಸಮ್ಮತಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಎಂಎಸ್ ಧೋನಿಯನ್ನು ಉಳಿಸಲು ಸಿಎಸ್​ಕೆ ಮಾಸ್ಟರ್ ಪ್ಲಾನ್
ಎಂಎಸ್ ಧೋನಿಯನ್ನು ಉಳಿಸಲು ಸಿಎಸ್​ಕೆ ಮಾಸ್ಟರ್ ಪ್ಲಾನ್

MS Dhoni: ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ಆಟಗಾರರನ್ನು ಉಳಿಸಿಕೊಳ್ಳುವ ನಿಯಮದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಬಿಸಿಸಿಐ ಇತ್ತೀಚೆಗೆ ಲೀಗ್‌ನ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿತ್ತು. ಈ ಸಮಯದಲ್ಲಿ ಮೆಗಾ ಹರಾಜು, ಇಂಪ್ಯಾಕ್ಟ್ ಪ್ಲೇಯರ್ ಮತ್ತು ರಿಟೈನ್ ನೀತಿಯನ್ನು ನಿಲ್ಲಿಸುವ ಬಗ್ಗೆ ಚರ್ಚೆಗಳು ನಡೆದವು. ಜೊತೆಗೆ ಸಭೆಯಲ್ಲಿ ಎಂಎಸ್ ಧೋನಿ ಅವರನ್ನು ಉಳಿಸಿಕೊಳ್ಳಲು ಹಳೆಯ ನಿಯಮವನ್ನು ಜಾರಿಗೆ ತರಲು ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ಸೂಚಿಸಿತ್ತು. ಇದೀಗ ಬಿಸಿಸಿಐ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಸಿಎಸ್‌ಕೆ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ. ಈ ಮೂಲಕ ಧೋನಿ ಅವರನ್ನು ಅನ್​ಕ್ಯಾಪ್ಡ್​ ಪ್ಲೇಯರ್​​ ಆಗಿ ಐಪಿಎಲ್‌ನಲ್ಲಿ ಕಣಕ್ಕಿಳಿಸಲು ಸಿಎಸ್​ಕೆ ಫ್ರಾಂಚೈಸಿ ದೊಡ್ಡ ಹೆಜ್ಜೆ ಇಡಲು ಮುಂದಾಗಿದೆ. ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆಗೆ ಮತ್ತು ಫ್ಯಾನ್ಸ್​ಗೆ ಇದೊಂದು ದೊಡ್ಡ ಗುಡ್ ನ್ಯೂಸ್ ಆಗಲಿದೆ. ಧೋನಿ ಅವರನ್ನು ಅನ್​ಕ್ಯಾಪ್ಡ್​ ಆಟಗಾರ ಎಂದು ಖರೀದಿಸಿದರೆ, ಸಿಎಸ್​ಕೆ ಮತ್ತೊಬ್ಬ ಭಾರತೀಯ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಹೀಗಾಗಿ ಈ ಪ್ಲಾನ್​ ಅನ್ನು ಸಿಎಸ್​ಕೆ ಸಿದ್ಧಪಡಿಸಿತ್ತು. ಇದೀಗ ಅದಕ್ಕೆ ಜಯ ಸಿಕ್ಕಂತಾಗಿದೆ.

ಐಪಿಎಲ್ ಮೊದಲ ಸೀಸನ್​ನಲ್ಲಿ ಈ ನಿಯಮ ತರಲಾಗಿತ್ತು. ಇದರ ಅಡಿಯಲ್ಲಿ, ಯಾವುದೇ ಫ್ರಾಂಚೈಸಿಯು ಅನ್‌ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಕಡಿಮೆ ಹಣಕ್ಕೆ ಖರೀದಿಸಬಹುದು. ಇದಕ್ಕಿದ್ದ ಒಂದೇ ಷರತ್ತು ಎಂದರೆ ಅವರು ನಿವೃತ್ತಿಯಾಗಿ 5 ವರ್ಷವಾಗಬೇಕು. ಈ ನಿಯಮವನ್ನು ಎಂದಿಗೂ ಬಳಸದ ಕಾರಣ 2021 ರಲ್ಲಿ ಬಿಸಿಸಿಐ ತೆಗೆದುಹಾಕಿತು. ಆದರೀಗ ಈ ನಿಯಮವನ್ನು ಮತ್ತೆ ಮುಂದುವರೆಸಲು ನಿರ್ಧರಿಸಿದೆ.

ಇದೀಗ ನ್ಯೂಸ್ 18 ವರದಿಯ ಪ್ರಕಾರ, ಜುಲೈ 31 ರಂದು ನಡೆದ ಸಭೆಯಲ್ಲಿ ಚೆನ್ನೈ ತನ್ನ ಪ್ರಮುಖ ಆಟಗಾರ ಧೋನಿಯನ್ನು ಉಳಿಸಿಕೊಳ್ಳಲು ಈ ನಿಯಮವನ್ನು ಮರಳಿ ತರಲು ಒತ್ತಾಯಿಸಿತ್ತು. ಜೊತೆಗೆ ಕೆಲವೇ ಫ್ರಾಂಚೈಸಿಗಳು ನಿಯಮಕ್ಕೆ ಸಿಎಸ್​ಕೆಗೆ ಬೆಂಬಲಿಸಿದ್ದವು. ಆದರೆ ಸಿಎಸ್​ಕೆ ಮನವಿಗೆ ಎಸ್​ಆರ್​ಹೆಚ್​ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರು ಈ ವಿಚಾರದ ವಿರುದ್ಧ ವಿಶೇಷವಾಗಿ ಧ್ವನಿ ಎತ್ತಿದ್ದು, ಇದು ಆಟಗಾರ ಮತ್ತು ಮಾರುಕಟ್ಟೆ ಮೌಲ್ಯವನ್ನು ಅಗೌರವಗೊಳಿಸುತ್ತದೆ ಎಂದು ವಾದಿಸಿದ್ದರು.

ಅತ್ತ ಕೆಲವು ಐಪಿಎಲ್ ಫ್ರಾಂಚೈಸಿಗಳು ಮೆಗಾ ಹರಾಜನ್ನು ತೆಗೆದುಹಾಕಲು ಬಯಸಿವೆ ಎನ್ನಲಾಗಿದೆ. ಆದರೆ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಬಿಸಿಸಿಐ ಇದನ್ನು ಸದ್ಯಕ್ಕೆ ಕೊನೆಗೊಳಿಸುವ ಯೋಚನೆಯಲ್ಲಿಲ್ಲ. ಈ ಕುರಿತು ಚರ್ಚೆ ನಡೆಯುತ್ತಿದೆ. ಇದಲ್ಲದೆ, ಮೆಗಾ ಹರಾಜಿನ ಮೊದಲು ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಮಂಡಳಿಯು ತಂಡಗಳಿಗೆ ಅವಕಾಶ ನೀಡುತ್ತದೆ. ಹಾಗೆಯೆ ರೈಟ್ ಟು ಮ್ಯಾಚ್ ಕಾರ್ಡ್ ನಿಯಮವನ್ನೂ ಹಿಂಪಡೆಯಬಹುದು.

ಎಂಎಸ್ ಧೋನಿ ಐಪಿಎಲ್ 2025 ಆಡುತ್ತಾರಾ?

ಐಪಿಎಲ್ 2025 ರಲ್ಲಿ ಆಡುವ ಬಗ್ಗೆ ಧೋನಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ನನ್ನ ಕೈಯಲ್ಲಿ ಏನೂ ಇಲ್ಲ, ಎಲ್ಲವೂ ಹೊಸ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದರು. ಸದ್ಯ ಮೆಗಾ ಹರಾಜಿಗೂ ಮುನ್ನ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವುದು ನಿಯಮ. ಆದರೆ ಅನ್‌ಕ್ಯಾಪ್ಡ್ ಕೆಟಗರಿ ಮತ್ತು ರಿಟೈನ್ ನಿಯಮಗಳಲ್ಲಿ ಬದಲಾವಣೆಯಾದರೆ ಧೋನಿ ಆಡುವುದು ಬಹುತೇಕ ಖಚಿತ ಎನ್ನಬಹುದು.

ಎಂಎಸ್ ಧೋನಿ ಐಪಿಎಲ್ ವೃತ್ತಿಜೀವನ

ಎಂಎಸ್ ಧೋನಿ ಅವರು 2008ರ ಐಪಿಎಲ್​ನಿಂದಲೂ ಆಡುತ್ತಿದ್ದು, 264 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 229 ಇನ್ನಿಂಗ್ಸ್​​​ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 39.13ರ ಬ್ಯಾಟಿಂಗ್ ಸರಾಸರಿಯಲ್ಲಿ 5243 ರನ್ ಗಳಿಸಿದ್ದಾರೆ. 137.54 ಸ್ಟ್ರೈಕ್​ರೇಟ್ ಹೊಂದಿರುವ ಧೋನಿ, 363 ಬೌಂಡರಿ, 252 ಸಿಕ್ಸರ್​​ಗಳನ್ನು ಚಚ್ಚಿದ್ದಾರೆ. ನಾಯಕನಾಗಿ ಸಿಎಸ್​ಕೆಗೆ 5 ಟ್ರೋಫಿಗಳನ್ನು ಗೆದ್ದಿರುವ ಕೊಟ್ಟಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ