ನೋವು ಕಡಿಮೆಯಾಗಲು ವಿಶ್ವಕಪ್ ಟೂರ್ನಿಯುದ್ದಕ್ಕೂ ಇಂಜೆಕ್ಷನ್ ಪಡೆದಿದ್ದ ಶಮಿ; ಸಹ ಆಟಗಾರ ಹೇಳಿದ್ದೇನು
Dec 30, 2023 05:03 PM IST
ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ್ದ ಮೊಹಮ್ಮದ್ ಶಮಿ
- Mohammed Shami: ಏಕದಿನ ವಿಶ್ವಕಪ್ 2023ರ ಸಮಯದಲ್ಲಿ ನೋವು ಕಡಿಮೆ ಮಾಡಲು ಮೊಹಮ್ಮದ್ ಶಮಿ ನಿಯಮಿತವಾಗಿ ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂಬುದು ಬಹಿರಂಗವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಮೊಹಮ್ಮದ್ ಶಮಿಯ (Mohammed Shami) ಅನುಪಸ್ಥಿತಿ ಭಾರಿ ಕಾಡಿತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಘಟಾನುಘಟಿ ಬ್ಯಾಟರ್‌ಗಳನ್ನು ಕಾಡಿದ್ದ ವೇಗಿ, ರೋಹಿತ್ ಬಳಗದ ಪ್ರಮುಖ ಅಸ್ತ್ರವಾಗಿದ್ದರು. ದಕ್ಷಿಣ ಆಫ್ರಿಕಾ ನೆಲದಲ್ಲಿ ಹರಿಣಗಳ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಭಾರತೀಯ ವೇಗಿಗಳು ವಿಫಲರಾಗುತ್ತಿರುವಾಗ, ಶಮಿ ತಂಡದಲ್ಲಿ ಇರಬೇಕಿತ್ತು ಎಂಬ ಮಾತು ಎಲ್ಲೆಡೆಯಿಂದ ಕೇಳಿಬರುತ್ತಿದೆ.
ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಅಗ್ರ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ ಶಮಿ, ಸದ್ಯ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ವಕಪ್ ಸಮಯದಲ್ಲಿ ಭಾರಿ ಗಾಯದ ಸಮಸ್ಯೆ ಅನುಭವಿಸಿದ್ದ ವೇಗಿ, ನೋವಿನಲ್ಲೇ ಪಂದ್ಯಾವಳಿಯಲ್ಲಿ ಆಡಿ ಗಮನಸೆಳೆದಿದ್ದರು.
ಸದ್ಯ ಸುದ್ದಿಸಂಸ್ಥೆ ಪಿಟಿಐ ಮಾಡಿದ ವರದಿಯು ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದೆ. ಶಮಿ ನೋವಿನಿಂದಲೇ ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಆಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ | ಈ ಮಗು ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸಿದ್ಧವಾಗಿಲ್ಲ; ಪ್ರಸಿದ್ಧ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟಿಗ
“ಶಮಿ ದೀರ್ಘಕಾಲದ ಎಡ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ವಿಶ್ವಕಪ್ ಪಂದ್ಯಾವಳಿಯ ವೇಳೆ ಪ್ರತಿದಿನವೂ ಇಂಜೆಕ್ಷನ್ ತೆಗೆದುಕೊಂಡು ಮೈದಾನಕ್ಕಿಳಿದಿದ್ದರು. ನೋವಿನಿಂದಲೇ ಸಂಪೂರ್ಣ ಪಂದ್ಯಾವಳಿಯಲ್ಲಿ ಆಡಿದರು. ಈ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ವಯಸ್ಸಾದಂತೆ, ಪ್ರತಿಯೊಂದು ಸಣ್ಣ ಗಾಯ ಅಥವಾ ದೊಡ್ಡ ಮಟ್ಟದ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಶಮಿ ಅವರ ಮಾಜಿ ಸಹ ಆಟಗಾರ (ಬಂಗಾಳ ತಂಡ), ಪಿಟಿಐಗೆ ತಿಳಿಸಿದ್ದಾರೆ. ಶಮಿಯ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾಹಿತಿ ಇದೆ.
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ 24 ವಿಕೆಟ್‌ಗಳೊಂದಿಗೆ ಅಗ್ರ ಸಾಧನೆ ಮಾಡಿದ ಶಮಿ, ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ. ಆ ಬಳಿಕ ಎಲ್ಲಾ ಪಂದ್ಯಗಳಲ್ಲಿಯೂ ಕಾಯಂ ಸದಸ್ಯರಾದರು.
ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಮಾತನಾಡಿದ ಶಮಿ, "ಇಡೀ ರಾಷ್ಟ್ರವೇ ನಿರಾಶೆಗೊಂಡಿದೆ. ನಾವು ಆರಂಭದಲ್ಲಿ ಪಡೆದ ಆ ವೇಗವನ್ನು ಕೊನೆಯವರೆಗೂ ಮುಂದುವರಿಸಲು ಸಾಧ್ಯವಾಗಲಿಲ್ಲ. ಫೈನಲ್ ಪಂದ್ಯವನ್ನು ಗೆಲ್ಲಲು ನಾವು ನೂರಕ್ಕೆ ನೂರು ಪ್ರಯತ್ನಿಸಿದ್ದೇವೆ. ಆದರೆ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ವಿವರಿಸುವುದು ಕಷ್ಟ ಎಂದು ಶಮಿ ಬೇಸರಿಸಿದ್ದರು.
ಇದನ್ನೂ ಓದಿ | ಭಾರತ ತಂಡ ನಿಜಕ್ಕೂ ಆತನನ್ನು ಮಿಸ್ ಮಾಡಿಕೊಳ್ತಿದೆ; ಸ್ಟಾರ್ ಆಟಗಾರನ ಅನುಪಸ್ಥಿತಿಗೆ ದಿನೇಶ್ ಕಾರ್ತಿಕ್ ಬೇಸರ
ಅವರು ಒಬ್ಬ ಬೌಲರ್ ಆಗಿ ತಂಡದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಜೊತೆಗೆ ಅವರು ಸಮರ್ಥ ವೇಗಿಯಾದ್ದಾರೆ. ಇಂಥಹ ಪಿಚ್‌ನಲ್ಲಿ ಸೀಮ್ ಅನ್ನು ನೀವು ಊಹಿಸಬಹುದು. ಇಲ್ಲಿ ಅವರು ಖಂಡಿತವಾಗಿಯೂ ಕೆಲವು ವಿಕೆಟ್‌ಗಳನ್ನು ಪಡೆಯುತ್ತಿದ್ದರು. ಭಾರತ ತಂಡವು ಅವರನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತಿದೆ, ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
2023ರ ಐಸಿಸಿ ವಿಶ್ವಕಪ್ನಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲೀಗ್ನಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಹಾಗೂ ಸೆಮಿಫೈನಲ್ನಲ್ಲಿ ಮತ್ತೆ ಕಿವೀಸ್ ವಿರುದ್ಧ 5 ವಿಕೆಟ್ಗಳ ಗುಚ್ಛ ಪಡೆದಿದ್ದರು. ಅಲ್ಲದೆ, ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೇ ವೇಳೆ ವಿಶ್ವಕಪ್ ಇತಿಹಾಸದಲ್ಲಿ ವೇಗದ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ವಿಡಿಯೋ ನೋಡಿ | ಕಾಟೇರ ಸಂಭ್ರಮ; ಬಿರಿಯಾನಿ ತಿಂದು ಕುಣಿದು ಕುಪ್ಪಳಿಸಿದ ಡಿ ಬಾಸ್ ಫ್ಯಾನ್ಸ್