ಗೆದ್ದಿದ್ದು ಹೈದರಾಬಾದ್, ಸೋತಿದ್ದು ಲಕ್ನೋ; ಆದರೆ ಅಧಿಕೃತವಾಗಿ ಎಲಿಮಿನೇಟ್ ಆಗಿದ್ದು ಮುಂಬೈ ಇಂಡಿಯನ್ಸ್, ಅದ್ಹೇಗೆ?
May 09, 2024 01:50 AM IST
ಗೆದ್ದಿದ್ದು SRH, ಸೋತಿದ್ದು LSG; ಎಲಿಮಿನೇಟ್ ಆಗಿದ್ದು ಮುಂಬೈ ಇಂಡಿಯನ್ಸ್, ಪ್ಲೇಆಫ್ನಿಂದ ಹೊರಬಿದ್ದ ಎಂಐ
- Mumbai Indians : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 10 ವಿಕೆಟ್ಗಳ ಗೆಲುವು ಸಾಧಿಸಿದೆ. ಆದರೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಐಪಿಎಲ್ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಮೊದಲ ತಂಡವಾಗಿ ಮುಂಬೈ ಇಂಡಿಯನ್ಸ್ (Mumbai Indians) ಎಲಿಮಿನೇಟ್ ಆಗಿದೆ. 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH vs LSG) 10 ವಿಕೆಟ್ಗಳ ಭರ್ಜರಿ ಜಯ ಸಾಧಿಸುತ್ತಿದ್ದಂತೆ 5 ಬಾರಿಯ ಚಾಂಪಿಯನ್ ಮುಂಬೈ, ಅಧಿಕೃತವಾಗಿ ಪ್ಲೇಆಫ್ ರೇಸ್ನಿಂದ ಹೊರಬಿತ್ತು. ನೂತನ ನಾಯಕ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಮುಂಬೈ ಪಲ್ಟನ್ಸ್ ಪಲ್ಟಿ ಹೊಡೆದು ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಪ್ರಸ್ತುತ 12 ಪಂದ್ಯಗಳಿಂದ 8 ಅಂಕಗಳನ್ನು ಸಂಪಾದಿಸಿ ಒಂಬತ್ತನೇ ಸ್ಥಾನದಲ್ಲಿರುವ ಎಂಐ, ತಮ್ಮ ಕೊನೆಯ 2 ಪಂದ್ಯಗಳನ್ನು ಗೆದ್ದರೂ 12 ಅಂಕ ಪಡೆಯಲು ಮಾತ್ರ ಸಾಧ್ಯ. ಈ ಅಂಕಗಳು ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾರ್ದಿಕ್ ನೇತೃತ್ವದ ಮುಂಬೈ, ತನ್ನ ಉಳಿದ 2 ಪಂದ್ಯಗಳಲ್ಲಿ ಮೇ 11ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮೇ 17ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳು ಸಹ ಎಂಐ ಪಾಲಿಗೆ ಔಪಚಾರಿಕವಷ್ಟೆ.
ಮುಂಬೈ ಹೊರ ಬಿದ್ದಿದ್ದೇಗೆ?
ಪ್ರಸ್ತುತ ಮುಂಬೈ ಜೊತೆಗೆ ಪಂಜಾಬ್, ಆರ್ಸಿಬಿ, ಜಿಟಿ ತಂಡಗಳು 8 ಅಂಕ ಪಡೆದಿವೆ. ಆದರೆ, ಮುಂಬೈ ಮಾತ್ರವೇ ಪ್ಲೇಆಫ್ ರೇಸ್ನಿಂದ ಹೊರ ಬೀಳಲು ಕಾರಣವೇನು ಎಂದು ಮುಂಬೈ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡು ತಂಡಗಳು ತಲಾ 16 ಅಂಕ ಸಂಪಾದಿಸಿವೆ. ಇದೀಗ 12 ಪಂದ್ಯಗಳಿಂದ ಎಸ್ಆರ್ಹೆಚ್ 7ರಲ್ಲಿ ಗೆದ್ದು 14 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಆದರೆ ಎಂಐ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೂ 12 ಅಂಕ ಮಾತ್ರ ಪಡೆಯಲಿದೆ.
ತಲಾ 12 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನಡುವೆ ಮೇ 14ರಂದು ಪಂದ್ಯ ನಡೆಯಲಿದೆ. ಈ ಫೈಟ್ನಲ್ಲಿ ಯಾವುದೇ ತಂಡ ಗೆದ್ದರೂ 14 ಅಂಕ ಪಡೆಯಲಿದೆ. ಒಂದು ವೇಳೆ ಮಳೆ ಅಡಚಣೆಯಿಂದ ಪಂದ್ಯ ರದ್ದುಗೊಂಡರೂ ತಲಾ 1 ಅಂಕ ಪಡೆಯಲಿವೆ. ಹೀಗಾಗಿ 2 ಗೆದ್ದರೂ ಮುಂಬೈ 12 ಅಂಕಕ್ಕೆ ಸೀಮಿತಗೊಳ್ಳಲಿದ್ದು, ಅಧಿಕೃತವಾಗಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
ಪಂಜಾಬ್, ಆರ್ಸಿಬಿ, ಗುಜರಾತ್ ತಲಾ 8 ಅಂಕ ಪಡೆದರೂ ಯಾಕೆ ಹೊರ ಬಿದ್ದಿಲ್ಲ ಅಂದರೆ, ಮೂರು ತಂಡಗಳು ಸಹ ಮುಂಬೈಗಿಂತ ಒಂದು ಕಡಿಮೆ ಪಂದ್ಯಗಳನ್ನಾಡಿವೆ. ಮೂರು 11 ಪಂದ್ಯಗಳಲ್ಲಿ ಕಣಕ್ಕಿಳಿದಿವೆ. ಆದರೆ ಮುಂಬೈ 12 ಪಂದ್ಯಗಳನ್ನಾಡಿದೆ. ಪಿಬಿಕೆಎಸ್, ಆರ್ಸಿಬಿ, ಜಿಟಿ ಉಳಿದ 3 ಪಂದ್ಯಗಳಲ್ಲಿ ಗೆದ್ದರೆ 14 ಅಂಕ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ ಇದೆ. ಮೇ 9ರಂದು ಜರುಗುವ ಆರ್ಸಿಬಿ vs ಪಂಜಾಬ್ ಪಂದ್ಯದಲ್ಲಿ ಯಾವುದೇ ತಂಡ ಸೋತರೂ ಪ್ಲೇಆಫ್ನಿಂದ ಹೊರಬೀಳಲಿದೆ.
57 ಪಂದ್ಯ ಮುಗಿದರೂ ಅಧಿಕೃತವಾಗಿಲ್ಲ ಪ್ಲೇಆಫ್ ತಂಡಗಳು
ಮಾರ್ಚ್ 22 ರಂದು ಆರಂಭಗೊಂಡ ಐಪಿಎಲ್, ಮೇ 8ರ ತನಕ 57 ಪಂದ್ಯಗಳನ್ನಾಡಿದೆ. ಆದರೆ ಇದುವರೆಗೂ ಯಾವೊಂದು ತಂಡವೂ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿಲ್ಲ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಲಾ 16 ಅಂಕ ಪಡೆದಿದ್ದರೂ ಫ್ಲೇಆಫ್ಗೆ ಅಧಿಕೃತಗೊಂಡಿಲ್ಲ. ಈ ತಂಡಗಳು ಸಹ ಉಳಿದ ಎಲ್ಲಾ ಪಂದ್ಯಗಳಲ್ಲಿ ಸೋತರೆ, ಪ್ಲೇಆಫ್ ರೇಸ್ನಿಂದ ಹೊರಗುಳಿಯುವ ಸಾಧ್ಯತೆಯೂ ಇದೆ. ಏಕೆಂದರೆ ಈ ಎರಡು ತಂಡಗಳು ಅಲ್ಲದೆ, ಸಿಎಸ್ಕೆ, ಚೆನ್ನೈ, ಡೆಲ್ಲಿ, ಲಕ್ನೋ ತಂಡಗಳಿಗೂ 16 ಅಂಕ ಪಡೆಯುವ ಅವಕಾಶ ಇದೆ. ಹಾಗಾಗಿ ಎಚ್ಚರಿಕೆಯಿಂದ ಆಟವಾಡಬೇಕಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ