logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತಕ್ಕೆ ಪಾಕಿಸ್ತಾನ ವಿರುದ್ಧ ಸೋಲುವ ಭಯವೇ; ಏಷ್ಯಾಕಪ್‌ ಆತಿಥ್ಯ ಕುರಿತು ಗುಡುಗಿದ ನಜಮ್‌ ಸೇಥಿ

ಭಾರತಕ್ಕೆ ಪಾಕಿಸ್ತಾನ ವಿರುದ್ಧ ಸೋಲುವ ಭಯವೇ; ಏಷ್ಯಾಕಪ್‌ ಆತಿಥ್ಯ ಕುರಿತು ಗುಡುಗಿದ ನಜಮ್‌ ಸೇಥಿ

Jayaraj HT Kannada

Dec 22, 2023 06:08 PM IST

google News

ಎಸಿಸಿ ಹಾಗೂ ಬಿಸಿಸಿಐ ವಿರುದ್ಧ ನಜಮ್‌ ಸೇಥಿ ಆಕ್ರೋಶ

    • Asia Cup 2023: ಏಷ್ಯಾಕಪ್ ಸೂಪರ್ ಫೋರ್ ಪಂದ್ಯಗಳನ್ನು ಕೊಲಂಬೊ‌ದಲ್ಲಿ ನಡೆಸುವುದರ ಹಿಂದಿನ ತರ್ಕವನ್ನು ಪ್ರಶ್ನಿಸಿದ ನಜಮ್ ಸೇಥಿ‌, ಬಿಸಿಸಿಐ ಮತ್ತು ಎಸಿಸಿ ವಿರುದ್ಧ ಕೆಂಡಕಾರಿದ್ದಾರೆ.
ಎಸಿಸಿ ಹಾಗೂ ಬಿಸಿಸಿಐ ವಿರುದ್ಧ ನಜಮ್‌ ಸೇಥಿ ಆಕ್ರೋಶ
ಎಸಿಸಿ ಹಾಗೂ ಬಿಸಿಸಿಐ ವಿರುದ್ಧ ನಜಮ್‌ ಸೇಥಿ ಆಕ್ರೋಶ

ಏಷ್ಯಾಕಪ್‌ 2023ರ (Asia Cup 2023) ಗುಂಪು ಹಂತದ ಪಂದ್ಯದ ಪಂದ್ಯಗಳು ಮುಕ್ತಾಯಗೊಂಡಿವೆ. ಇದರಲ್ಲಿ ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಿಗೆ ಮಳೆ ಎಡೆಬಿಡದೆ ಕಾಡಿತ್ತು. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಣ ರೋಚಕ ಪಂದ್ಯವು ಮಳೆಯಿಂದ ರದ್ದುಗೊಂಡಿತು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಯ್ತು. ಭಾರಿ ಮಳೆಯ ಮುನ್ಸೂಚನೆಯ ಹೊರತಾಗಿಯೂ ದ್ವೀಪ ರಾಷ್ಟ್ರದಲ್ಲಿ ಟೂರ್ನಿ ಆಯೋಜಿಸಿದ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೇಲೆ ಭಾರಿ ಟೀಕೆಗಳು ಕೇಳಿ ಬಂದವು. ಅದರಲ್ಲೂ ಸಿಕ್ಕ ಅವಕಾಶವನ್ನು ಬಿಡದ ಪಿಸಿಬಿಯು ಎಸಿಸಿ ಮೇಲೆ ಎಗರಿ ಬಿದ್ದಿತು.

ಮಳೆಯ ಮುನ್ಸೂಚನೆಯಿದ್ದರೂ ಕೊಲಂಬೊದಲ್ಲಿ ಸೂಪರ್ ಫೋರ್ ಹಂತದ ಪಂದ್ಯಗಳನ್ನು ಆಯೋಜಿಸುತ್ತಿರುವುದಕ್ಕಾಗಿ, ಪಿಸಿಬಿ ಮಾಜಿ ಮುಖ್ಯಸ್ಥ ನಜಮ್ ಸೇಥಿ ಎಸಿಸಿ ಮೇಲೆ ಕಿಡಿಕಾರಿದ್ದಾರೆ. ಏಷ್ಯಾಕಪ್‌ಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದನ್ನು ನಿರಾಕರಿಸಿದ್ದ ಬಿಸಿಸಿಐ, ನಂತರ ಶ್ರೀಲಂಕಾದಲ್ಲಿ ಭಾರತದ ಪಂದ್ಯ ನಡೆಸಲು ಒಪ್ಪಿಗೆ ಸೂಚಿಸಿತ್ತು. ಈ ನಡುವೆ, ಯುಎಇಯಲ್ಲಿ ಭಾರತದ ಪಂದ್ಯಗಳನ್ನು ನಡೆಸುವಂತೆ ಸೇಥಿ ಒತ್ತಾಯಿಸಿದ್ದರು. ಆದರೆ ಯುಎಇಯಲ್ಲಿ ಹವಾಮಾನವು ತೀರಾ ಬಿಸಿಯಾಗಿರುತ್ತದೆ ಎಂದ ಎಸಿಸಿ, ಪಿಸಿಬಿಯ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಬಹಿರಂಗಪಡಿಸಿದ ಸೇಥಿ, ತನ್ನ ಮಾತನ್ನು ಎಸಿಸಿ ಕಿವಿಗೆ ಹಾಕಿಕೊಂಡಿಲ್ಲ ಎಂದು ಕೆಂಡಕಾರಿದ್ದಾರೆ.

ನಮ್ಮ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ

ಲಂಕಾ ರಾಜಧಾನಿ ಕೊಲಂಬೊದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಸೂಪರ್‌ ಫೋರ್‌ ಹಂತದ ಪಂದ್ಯಗಳ ಆತಿಥ್ಯ ಸ್ಥಳವನ್ನು ಮತ್ತೆ ಬದಲಾಯಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂಬ ವರದಿಗಳು ಮುನ್ನೆಲೆಗೆ ಬರುತ್ತಿದ್ದಂತೆಯೇ, ಮತ್ತೊಮ್ಮೆ ಸೇಥಿ ಎದ್ದು ನಿಲ್ಲುತ್ತಾರೆ. ಸೂಪರ್ ಫೋರ್ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸುವಂತೆ ಎಸಿಸಿ ಮುಂದೆ ಪಿಸಿಬಿ ಅಧಿಕಾರಿಗಳು ಸಾರಿ ಸಾರಿ ಹೇಳಿದರು. ಆದರೂ ನಮ್ಮ ಮಾತನ್ನು ಅವರು ಕೇಳಿಲ್ಲ ಎಂದು ಮತ್ತೊಮ್ಮೆ ಅಬ್ಬರಿಸಿದ್ದಾರೆ.

ಸ್ಪಷ್ಟನೆ ನೀಡಿದ ಜಯ್‌ ಶಾ

ಈ ಕುರಿತು ಸ್ಪಷ್ಟನೆ ನೀಡಿದ್ದ ಎಸಿಸಿ ಮುಖ್ಯಸ್ಥ ಜಯ್‌ ಶಾ, ಯುಎಇಯಲ್ಲಿ ಈ ಸಮಯದಲ್ಲೇನಾದರೂ ಪಂದ್ಯ ನಡೆಸಿದರೆ ಆಟಗಾರರಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಅರಬ್‌ ರಾಷ್ಟ್ರದ ಹವಾಮಾನವು ಈಗ ಬಿಸಿಯಾಗಿದ್ದು, ಮುಂದೆ ವಿಶ್ವಕಪ್‌ ಪಂದ್ಯಗಳು ಇರುವುದರಿಂದ ಆಟಗಾರರ ಆರೋಗ್ಯ ಮುಖ್ಯ. ಯುಎಇಯಲ್ಲಿ ಪಂದ್ಯಗಳನ್ನು ಆಯೋಜಿಸಿದರೆ, ಅನಾರೋಗ್ಯ ಸಮಸ್ಯೆ ಹೆಚ್ಚಬಹುದು ಎಂದು ಶಾ ಸ್ಪಷ್ಟನೆ ನೀಡಿದ್ದಾರೆ.

ಭಾರತಕ್ಕೆ ಪಾಕ್‌ ವಿರುದ್ಧ ಆಡುವ ಭಯ

ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸೇಥಿ, ಕೊಲಂಬೋ ಮತ್ತು ಹಂಬಂಟೋಟಾದ ಹವಾಮಾನ ಮುನ್ಸೂಚನೆಯ ವರದಿಯನ್ನು ಹಂಚಿಕೊಂಡು ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಕೊಲಂಬೊದಲ್ಲಿ ಸೂಪರ್ ಫೋರ್ ಪಂದ್ಯಗಳನ್ನು ನಡೆಸುವುದರ ಹಿಂದಿನ ತರ್ಕವನ್ನು ಅವರು ಪ್ರಶ್ನಿಸಿದ್ದಾರೆ.

“ಬಿಸಿಸಿಐ/ಎಸಿಸಿ ಇಂದು ಪಿಸಿಬಿಗೆ ಮಾಹಿತಿ ನೀಡಿ, ಮಳೆಯ ಮುನ್ಸೂಚನೆಯ ಕಾರಣದಿಂದ ಕೊಲಂಬೊದಿಂದ ಹಂಬನ್‌ಟೋಟಕ್ಕೆ ಭಾರತ-ಪಾಕ್ ಪಂದ್ಯವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು. ಅದಾದ ಒಂದು ಗಂಟೆಯೊಳಗೆ ಅವರು ತಮ್ಮ ಮನಸ್ಸನ್ನೇ ಬದಲಾಯಿಸಿದ್ದಾರೆ. ಕೊಲಂಬೊವನ್ನೇ ಆತಿಥ್ಯ ಸ್ಥಳವೆಂದು ಘೋಷಿಸಿದ್ದಾರೆ. ಇಲ್ಲಿ ಏನಾಗುತ್ತಿದೆ? ಭಾರತಕ್ಕೆ ಪಾಕಿಸ್ತಾನ ವಿರುದ್ಧ ಆಡುವ ಮತ್ತು ಸೋಲುವ ಭಯವೇ? ಕೊಲಂಬೋದಲ್ಲಿ ಮಳೆಯ ಮುನ್ಸೂಚನೆಯನ್ನೊಮ್ಮೆ ನೋಡಿ!” ಎಂದು ಸೇಥಿ ಪೋಸ್ಟ್ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ