ಎರಡನೇ ಟೆಸ್ಟ್ನಲ್ಲೂ ನ್ಯೂಜಿಲೆಂಡ್ಗೆ ಗೆಲುವು; 2012ರ ನಂತರ ತವರಿನಲ್ಲಿ ಸರಣಿ ಸೋತ ಟೀಮ್ ಇಂಡಿಯಾ, ದಾಖಲೆ ಬರೆದ ಕಿವೀಸ್
Oct 26, 2024 07:33 PM IST
ಭಾರತದ ವಿರುದ್ಧ ಗೆದ್ದ ನಂತರ ಸಂಭ್ರಮಿಸಿದ ನ್ಯೂಜಿಲೆಂಡ್ ಆಟಗಾರರು.
- India vs New Zealand 2nd Test: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ 113 ರನ್ಗಳ ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡು ಐತಿಹಾಸಿಕ ದಾಖಲೆ ಬರೆದಿದೆ.
ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ನ್ಯೂಜಿಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ತಂಡವು 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಆದರೆ, ಭಾರತದಲ್ಲಿ ನ್ಯೂಜಿಲೆಂಡ್ ತನ್ನ ಮೊದಲ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. 2012 ರಿಂದ ಸ್ವದೇಶದಲ್ಲಿ ಸೋಲೇ ಕಾಣದ ಭಾರತ ವಿರುದ್ಧ ಕಿವೀಸ್ ತಂಡದ ಶತಮಾನದ ಅತಿ ದೊಡ್ಡ ಗೆಲುವುಗಳಲ್ಲಿ ಒಂದಾಗಿದೆ. ರೋಹಿತ್ ಪಡೆ, ಇದಕ್ಕೂ ಮೊದಲು ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದು ದಾಖಲೆ ಬರೆದಿತ್ತು. ಇದೀಗ ಬೆಂಗಳೂರು ಬಳಿಕ ಪುಣೆ ಟೆಸ್ಟ್ನಲ್ಲಿ ಮುಗ್ಗರಿಸಿದ ಭಾರತ, ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಸರಣಿಯನ್ನು ಕಳೆದುಕೊಂಡಿದೆ.
ಗೆಲುವಿಗೆ 359 ರನ್ಗಳ ಗುರಿ ಪಡೆದಿದ್ದ ಭಾರತ, 113 ರನ್ಗಳಿಂದ ಪಂದ್ಯವನ್ನು ಕೈ ಚೆಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ದುರ್ಗಮಗೊಂಡಿದೆ. ಇತ್ತೀಚೆಗೆ ಶ್ರೀಲಂಕಾದಲ್ಲಿ 0-2 ಅಂತರದಲ್ಲಿ ಸರಣಿ ಸೋತಿದ್ದ ನ್ಯೂಜಿಲೆಂಡ್, ಇದೀಗ ಅದ್ಭುತ ಕಂಬ್ಯಾಕ್ ಮಾಡಿ ಡಬ್ಲ್ಯುಟಿಸಿ ಫೈನಲ್ ರೇಸ್ಗೆ ಬಲಿಷ್ಠ ಸ್ಪರ್ಧಿಯಾಗಿದೆ. ಆದರೆ ಭಾರತ ಉಳಿದಿರುವ ಆರು ಟೆಸ್ಟ್ಗಳಲ್ಲೂ ಗೆಲ್ಲುವುದು ಅನಿವಾರ್ಯವಾಗಿದೆ. ಬ್ಯಾಟರ್ಗಳ ಕಳಪೆ ಪ್ರದರ್ಶನದ ಹಿನ್ನೆಲೆ ಭಾರತ ಹೀನಾಯ ಸೋಲಿಗೆ ಶರಣಾಗಿದೆ. ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಅನನುಭವಿ ತಂಡವನ್ನು ಹೊಂದಿದ್ದ ಕಿವೀಸ್, ತವರಿನಲ್ಲಿ ಗೆಲುವಿನ ಸರದಾರನಾಗಿ ಮೆರೆಯುತ್ತಿದ್ದ ಭಾರತದ ಸೊಕ್ಕನ್ನು ಮುರಿದಿದೆ.
ಪಂದ್ಯದ 3ನೇ ದಿನದ 3ನೇ ಸೆಷನ್ ಅಂತ್ಯಕ್ಕೂ ಮುನ್ನವೇ ರೋಹಿತ್ ಪಡೆ ಪ್ರವಾಸಿಗರ ಎದುರು ಶರಣಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕಿವೀಸ್, ಮೊದಲ ಇನ್ನಿಂಗ್ಸ್ನಲ್ಲಿ 259 ರನ್ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ 103 ರನ್ಗಳ ಹಿನ್ನಡೆ ಅನುಭವಿಸಿತು. ತದನಂತರ ಎರಡನೇ ಇನ್ನಿಂಗ್ಸ್ ನ್ಯೂಜಿಲೆಂಡ್ 225 ರನ್ ಗಳಿಸಿತು. ಒಟ್ಟಾರೆ 359 ರನ್ಗಳ ಗುರಿ ನೀಡಿತು. ಆದರೆ, ಭಾರತ ಗಳಿಸಿದ್ದು 245 ರನ್ ಅಷ್ಟೆ. ಮಿಚೆಲ್ ಸ್ಯಾಂಟ್ನರ್ ಒಟ್ಟು 13 ವಿಕೆಟ್ ಉರುಳಿಸಿ ಭಾರತದ ಗೆಲುವಿಗೆ ಅಡ್ಡಿಯಾದರು. ಅಲ್ಲದೆ, ತಂಡದ ಸಂಘಟಿತ ಪ್ರದರ್ಶನವೂ ಕಿವೀಸ್ ಗೆಲುವಿಗೆ ಕಾರಣವಾಯಿತು.
ಬ್ಯಾಟರ್ಗಳ ವೈಫಲ್ಯ, ಅತಿಯಾದ ಆತ್ಮವಿಶ್ವಾಸ
ಪಂದ್ಯದ ಸೋಲಿಗೆ ಟೀಮ್ ಇಂಡಿಯಾ ಬ್ಯಾಟರ್ಗಳ ವೈಫಲ್ಯವೇ ಪ್ರಮುಖ ಕಾರಣ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಅನುಭವಿ ಆಟಗಾರರು ಪ್ರವಾಸಿ ಬೌಲರ್ಗಳ ಎದುರು ರನ್ ಗಳಿಸಲು ಪರದಾಟ ನಡೆಸಿದರು. ಮತ್ತೊಂದೆಡೆ ಅನಾನುಭವಿ ಆಟಗಾರರು ತಮಗೆ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದರು. ಇದರ ಜೊತೆಗೆ ತವರಿನಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೊಂದಿದ್ದ ಅತಿಯಾದ ಆತ್ಮವಿಶ್ವಾಸವೂ ಸಹ ಪರಾಭವಕ್ಕೆ ಕಾರಣವಾಯಿತು.
ಸಂಕ್ಷಿಪ್ತ ಸ್ಕೋರ್
- ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ - 259 /10
- ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ - 156/10 - 103 ರನ್ಗಳ ಹಿನ್ನಡೆ
- ಎರಡನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ - 255/10 - 359 ರನ್ಗಳ ಗುರಿ
- ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ - 245/10 - 113 ರನ್ಗಳ ಸೋಲು
ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಪ್ರವಾಸಿ ತಂಡಗಳು
- ಇಂಗ್ಲೆಂಡ್ (ಐದು ಬಾರಿ, ಕೊನೆಯದಾಗಿ 2012/13 ರಲ್ಲಿ)
- ವೆಸ್ಟ್ ಇಂಡೀಸ್ (ಐದು ಬಾರಿ, ಕೊನೆಯದಾಗಿ 1983/84 ರಲ್ಲಿ)
- ಆಸ್ಟ್ರೇಲಿಯಾ (ನಾಲ್ಕು ಬಾರಿ, ಕೊನೆಯದಾಗಿ 2004/05 ರಲ್ಲಿ)
- ಪಾಕಿಸ್ತಾನ (1986/87)
- ದಕ್ಷಿಣ ಆಫ್ರಿಕಾ (1999/00)
- ನ್ಯೂಜಿಲೆಂಡ್ (2024/25)
ಈ ಸರಣಿ ಸೋಲಿನೊಂದಿಗೆ, ಭಾರತ ತಂಡದ ಸತತ 18 ದ್ವಿಪಕ್ಷೀಯ ಸ್ವದೇಶಿ ಸರಣಿ ಗೆಲುವುಗಳ ದಾಖಲೆಯು ಅಂತ್ಯಗೊಂಡಿದೆ. ಇದು ಯಾವುದೇ ತಂಡಕ್ಕೆ ಹೋಲಿಸಿದರೆ ಸುದೀರ್ಘ ಸರಣಿಯ ಗೆಲುವಾಗಿದೆ.