2015ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ; ಬಾಬರ್-ಅಫ್ರಿದಿ ಹೊರಗಿಟ್ಟು ಒಲಿಯಿತು ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  2015ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ; ಬಾಬರ್-ಅಫ್ರಿದಿ ಹೊರಗಿಟ್ಟು ಒಲಿಯಿತು ಜಯ

2015ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ; ಬಾಬರ್-ಅಫ್ರಿದಿ ಹೊರಗಿಟ್ಟು ಒಲಿಯಿತು ಜಯ

Pakistan vs England: ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಪಾಕಿಸ್ತಾನ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶವನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೆ ಜಿಗಿದಿದೆ. ಅತ್ತ ಸೋಲಿನ ಹೊರತಾಗಿಯೂ, ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ​ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿಯೇ ಉಳಿದಿದೆ.

2015ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ
2015ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ (REUTERS)

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ (India vs New Zealand) 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. 2021ರ ಬಳಿಕ ತವರು ನೆಲದಲ್ಲಿ ಪಾಕಿಸ್ತಾನಕ್ಕೆ ಇದು ಮೊದಲ ಸರಣಿ ಗೆಲುವಾಗಿದೆ. ತವರಿನಲ್ಲಿ ನಾಲ್ಕು ಟೆಸ್ಟ್‌ ಸರಣಿಗಳ ಬಳಿಕ ಕೊನೆಗೂ ಪಾಕ್‌ ಗೆಲುವು ಒಲಿಸಿಕೊಂಡಿದೆ. ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಹಾಗೂ 47 ರನ್‌ಗಳಿಂದ ಸೋತಿದ್ದ ತಂಡ, ಆ ಬಳಿಕ ಎರಡನೇ ಪಂದ್ಯದಲ್ಲಿ 152 ರನ್‌ಗಳ ಜಯ ಸಾಧಿಸಿತ್ತು. ಇದೀಗ ಮೂರನೇ ಪಂದ್ಯವನ್ನು ಭರ್ಜರಿಯಾಗಿ ಜಯಿಸಿ, ಇಂಗ್ಲೆಂಡ್‌ ವಿರುದ್ಧ 2015ರ ನಂತರ ಮೊದಲ ಟೆಸ್ಟ್ ಸರಣಿ ಗೆದ್ದ ಖುಷಿ ಪಟ್ಟಿದೆ.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ 267 ರನ್‌ ಗಳಿಸಿ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 344 ರನ್‌ ಕಲೆ ಹಾಕಿತು. ಸೌದ್‌ ಶಕೀಲ್‌ ಆಕರ್ಷಕ ಶತಕ ಸಿಡಿಸಿ (134) ಮಿಂಚಿದರು. ಹಿನ್ನಡೆಯೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತನ್ನ ಪಾಲಿನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 112 ರನ್‌ಗಳಿಗೆ ಆಲೌಟ್‌ ಆಯ್ತು. ತಂಡದ ಪರ ರೂಟ್‌ ಗಳಿಸಿದ 33 ರನ್‌ ಗರಿಷ್ಟ ಮೊತ್ತವಾಯ್ತು. ಗೆಲುವಿಗೆ 36 ರನ್‌ಗಳ ಅಲ್ಪ ಗುರಿ ಪಡೆದ ಪಾಕಿಸ್ತಾನ 3.1 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಪಾಕಿಸ್ತಾನ ಕ್ರಿಕೆಟ್‌ ತಂಡ ಹಾಗೂ ಕ್ರಿಕೆಟ್‌ ಮಂಡಳಿ ಪಾಲಿಗೆ ಈ ಗೆಲುವು ತೃಪ್ತಿ ತಂದಿದೆ. ಗೆಲುವಿಗಾಗಿ ಹುಡುಕಾಡುತ್ತಿದ್ದ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಯ್ತು. ಶಾನ್ ಮಸೂದ್ ನಾಯಕತ್ವದಲ್ಲಿ ತಂಡಕ್ಕೆ ಮೊದಲ ಸರಣಿ ಒಲಿದಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿ ನಂತರ ತಂಡದ ಮ್ಯಾನೇಜ್‌ಮೆಂಟ್‌ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತು. ಬಾಬರ್‌ ಅಜಮ್‌, ಶಾಹೀನ್‌ ಅಫ್ರಿದಿ ಸೇರಿದಂತೆ ಪ್ರಮುಖ ಹಾಗೂ ಬಲಿಷ್ಠ ಆಟಗಾರರನ್ನೇ ತಂಡದಿಂದ ಕೈಬಿಡಲಾಯ್ತು. ಅಚ್ಚರಿಯ ನಿರ್ಧಾರ ಹಾಗೂ ಹಲವು ಟೀಕೆ ಟಿಪ್ಪಣಿಗಳ ನಡುವೆ, ಪಾಕ್‌ ಪಿಚ್‌ ಪರಿಸ್ಥಿತಿಗೆ ಅನುಗುಣವಾಗಿ ತಂಡವನ್ನು ಕಟ್ಟಲಾಯ್ತು. ಈ ಎಲ್ಲಾ ಬದಲಾವಣೆಗಳು ತಂಡದ ಕೈಹಿಡಿದಿದ್ದು ವಿಶೇಷ.

ಸ್ಪಿನ್ನರ್‌ಗಳದ್ದೇ ಸಿಂಹಪಾಲು

ತಂಡದ ಸ್ಪಿನ್ ದಾಳಿಯು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಸಾಜಿದ್ ಖಾನ್ ಮತ್ತು ನೋಮನ್ ಅಲಿ ಆಂಗ್ಲರಿಗೆ ಕಂಟಕರಾದರು. ಇಂಗ್ಲೆಂಡ್‌ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಸಾಜಿದ್ ಖಾನ್ 6 ವಿಕೆಟ್‌ ಕಬಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದರು. ಮತ್ತೊಂಡೆಡೆ ನೋಮನ್ ಅಲಿ ಕೂಡಾ 6 ವಿಕೆಟ್‌ ತಮ್ಮದಾಗಿಸಿಕೊಂಡರು. ಇಬ್ಬರು ಅನುಭವಿ ಸ್ಪಿನ್ನರ್‌ಗಳು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿದರು. ಕೊನೆಯ ಎರಡು ಟೆಸ್ಟ್‌ಗಳಲ್ಲಿ ಪಾಕ್‌ ಪಡೆದ 40 ವಿಕೆಟ್‌ಗಳಲ್ಲಿ 39 ವಿಕೆಟ್‌ ಇವರ ಖಾತೆಗೆ ಸೇರಿದ್ದು ವಿಶೇಷ.

ಡಬ್ಲ್ಯುಟಿಸಿ ಅಂಕಪಟ್ಟಿ

ಸೋಲಿನ ಹೊರತಾಗಿಯೂ, ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ​ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿಯೇ ಉಳಿದಿದೆ. 40.79 ಶೇಕಡಾವಾರು ಅಂಕಗಳೊಂದಿಗೆ ತಂಡ ಆರನೆ ಸ್ಥಾನ ಪಡೆದರೆ, ಗೆಲುವಿನೊಂದಿಗೆ ಪಾಕಿಸ್ತಾನ ತಂಡವು ಬಾಂಗ್ಲಾದೇಶವನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೆ ಜಿಗಿದಿದೆ.

Whats_app_banner