ಐತಿಹಾಸಿಕ ಕಂಬ್ಯಾಕ್ ಮಾಡಿದರೂ ಗೆಲ್ಲಲಿಲ್ಲ ಟೀಮ್ ಇಂಡಿಯಾ; 36 ವರ್ಷಗಳ ನಂತರ ಸೋಲಿಸಿ ದಾಖಲೆ ಬರೆದ ನ್ಯೂಜಿಲೆಂಡ್
Oct 20, 2024 01:11 PM IST
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡಿಕೊಂಡ ಕ್ಷಣ.
- India vs New Zealand 1st Test: ಟೀಮ್ ಇಂಡಿಉಆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಿದೆ. ಪ್ರವಾಸಿ ತಂಡವು 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 0-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿ 2ನೇ ಇನ್ನಿಂಗ್ಸ್ನಲ್ಲಿ ಐತಿಹಾಸಿಕ ಕಂಬ್ಯಾಕ್ ಮಾಡಿದರೂ ಭಾರತ ತಂಡಕ್ಕೆ ಗೆಲುವು ದಕ್ಕಲಿಲ್ಲ. ಮತ್ತೊಂದೆಡೆ ಭಾರತದ ನೆಲದಲ್ಲಿ 1988ರ ನಂತರ ಅಂದರೆ 36 ವರ್ಷಗಳ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆಲುವು ಸಾಧಿಸಿ ಕಿವೀಸ್ ದಾಖಲೆ ಬರೆಯಿತು. ಅದಕ್ಕೂ ಮುನ್ನ 1969ರಲ್ಲಿ ಭಾರತದ ತವರಿನಲ್ಲಿ ಜಯಿಸಿತ್ತು. ಭಾರತದ ನೆಲದಲ್ಲಿ ಕಿವೀಸ್ ಗೆದ್ದ ಮೂರನೇ ಪಂದ್ಯ ಇದಾಗಿದೆ.
107 ರನ್ಗಳ ಗುರಿ ನೀಡಿದ್ದ ಭಾರತ
ಮೊದಲ ಇನ್ನಿಂಗ್ಸ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಭಾರತ ಕೇವಲ 46 ರನ್ಗೆ ಔಟಾಗಿ ಕಳಪೆ ದಾಖಲೆ ಬರೆದಿತ್ತು. ಆದರೆ ಈ ಗುರಿ ಬೆನ್ನಟ್ಟಿದ ಕಿವೀಸ್ ಪ್ರಥಮ ಇನ್ನಿಂಗ್ಸ್ನಲ್ಲಿ 402 ರನ್ ಕಲೆ ಹಾಕಿ ರೋಹಿತ್ ಪಡೆಗೆ ಸವಾಲು ಹಾಕಿತು. ಅಲ್ಲದೆ, 356 ರನ್ಗಳ ಭರ್ಜರಿ ಮುನ್ನಡೆ ಪಡೆಯಿತು. ಆದರೆ, ಮೊದಲ ಇನ್ನಿಂಗ್ಸ್ನಿಂದ ಅವಮಾನ ಮೆಟ್ಟಿ ನಿಂತ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಐತಿಹಾಸಿಕ ಕಂಬ್ಯಾಕ್ ಮಾಡಿತು. ಭಾರೀ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾ ಮುನ್ನಡೆ ಪಡೆಯಿತು. ಪರಿಣಾಮ 107 ರನ್ಗಳ ಅಲ್ಪ ಟಾರ್ಗೆಟ್ ನೀಡಿತು. ಕೊನೆಯ ದಿನದಾಟದಲ್ಲಿ 107 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 27.4 ಓವರ್ಗಳಲ್ಲಿ ಬೆನ್ನಟ್ಟಿ ಐತಿಹಾಸಿಕ ದಾಖಲೆಗೆ ಪಾತ್ರವಾಯಿತು. ಆದರೆ ಭಾರತ ತಂಡವು ಹೀನಾಯ ಸೋಲಿಗೆ ಶರಣಾಯಿತು.
ರಚಿನ್ ರವೀಂದ್ರ ಮಿಂಚು, ಕಾನ್ವೆ-ಸೌಥಿ ಸಾಥ್
ನ್ಯೂಜಿಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ಬೆಂಗಳೂರಿನ ಮೂಲದ ರಚಿನ್ ರವೀಂದ್ರ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. 157 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ ಸಹಿತ 134 ರನ್ ಬಾರಿಸಿದ್ದರು. ಪರಿಣಾಮ ಭರ್ಜರಿ ಮುನ್ನಡೆ ಸಾಧಿಸಲು ಕಾರಣವಾಗಿತ್ತು. ರಚಿನ್ಗೆ ಡೆವೋನ್ ಕಾನ್ವೆ 105 ಎಸೆತಗಳಲ್ಲಿ 91 ಮತ್ತು ಟಿಮ್ ಸೌಥಿ 73 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು. ಹೀಗಾಗಿ ಕಿವೀಸ್ 91.3 ಓವರ್ಗಳಲ್ಲಿ402 ರನ್ ಬಾರಿಸಿತ್ತು. ಅದೇ ರೀತಿ ಎರಡನೇ ಇನ್ನಿಂಗ್ಸ್ನಲ್ಲಿ 107 ರನ್ ಗುರಿ ಬೆನ್ನಟ್ಟುವಾಗ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡರೂ ರಚಿನ್ ರವೀಂದ್ರ ಅಜೇಯ 39 ರನ್ ಬಾರಿಸಿ ಮತ್ತೊಮ್ಮೆ ಗಮನ ಸೆಳೆದರು. ವಿಲ್ ಯಂಗ್ ಅಜೇಯ 48 ರನ್ ಸಿಡಿಸಿದರು. ರಚಿನ್ ಅವರ ಅದ್ಭುತ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂದಿದೆ.
ಸರ್ಫರಾಜ್-ಪಂತ್-ಕೊಹ್ಲಿ ಅಬ್ಬರ, ಮೊದಲ ಇನ್ನಿಂಗ್ಸ್ ಫೇಲ್
ಪಂದ್ಯದ ಸೋಲಿಗೆ ಪ್ರಮುಖ ಕಾರಣ ಏನೆಂದರೆ ಮೊದಲ ಇನ್ನಿಂಗ್ಸ್ನಲ್ಲಿ ಕಡಿಮೆ ರನ್ಗಳಿಗೆ ಕುಸಿದಿದ್ದು. ಯಾರೂ ಕ್ರೀಚ್ ಕಚ್ಚಿ ನಿಲ್ಲುವ ಸಾಹಸ ಮಾಡಲಿಲ್ಲ. ಕಿವೀಸ್ ಬೌಲರ್ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಭಾರತೀಯ ಬ್ಯಾಟರ್ಗಳು 46ಕ್ಕೆ ಕುಸಿದರು. ಆದರೆ ಇನ್ನಿಂಗ್ಸ್ನಲ್ಲಿ ಐತಿಹಾಸಿಕವಾಗಿ ಕಂಬ್ಯಾಕ್ ಮಾಡಿದರು. ರೋಹಿತ್ ಶರ್ಮಾ 52 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 70 ರನ್ ಚಚ್ಚಿದರು. ಆ ಮೂಲಕ ಇಬ್ಬರು ಫಾರ್ಮ್ಗೆ ಮರಳಿದರು. ಗಿಲ್ ಸ್ಥಾನದಲ್ಲಿ ಅವಕಾಶ ಪಡೆದ ಸರ್ಫರಾಜ್, ಚೊಚ್ಚಲ ಟೆಸ್ಟ್ (150) ಶತಕ ಸಿಡಿಸಿದರು. ಪಂತ್ 1 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಪರಿಣಾಮ 107 ರನ್ಗಳ ಅಲ್ಪ ಗುರಿ ನೀಡಿದರು. ಆದರೆ ಕೊನೆಯ ದಿನದಂದು ಈ ಸ್ಕೋರ್ ಡಿಪೆಂಡ್ ಮಾಡಿಕೊಳ್ಳಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್ ವಿವರ
ಮೊದಲ ಇನ್ನಿಂಗ್ಸ್ನಲ್ಲಿ ಭಾರತ - 46/10 (31.2)
ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ - 402/10 (91.3) - 356 ರನ್ಗಳ ಮುನ್ನಡೆ
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ - 462/10 (99.3) - 107 ರನ್ಗಳ ಗುರಿ
ಎರಡನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ - 110/2 (27.4) - 8 ವಿಕೆಟ್ ಗೆಲುವು
ಉಳಿದ ಎರಡು ಟೆಸ್ಟ್ ಪಂದ್ಯಗಳು ಯಾವಾಗ ಎಲ್ಲಿ?
ಮೊದಲ ಟೆಸ್ಟ್ ಪಂದ್ಯ - ಭಾರತಕ್ಕೆ ಸೋಲು (ಬೆಂಗಳೂರು)
ಎರಡನೇ ಟೆಸ್ಟ್ ಪಂದ್ಯ - ಅಕ್ಟೋಬರ್ 24 ರಿಂದ 28, ಪುಣೆ
ಮೂರನೇ ಟೆಸ್ಟ್ ಪಂದ್ಯ - ನವೆಂಬರ್ 01 ರಿಂದ 05, ಮುಂಬೈ