ನೀವಂದುಕೊಂಡಂತೆ ಜೀವನ ನಡೆಯಲ್ಲ, ನನಗಿದು ಹೊಸದೂ ಅಲ್ಲ; ಎಂಐ ನಾಯಕತ್ವ ಕಿತ್ತಾಕಿದ್ದಕ್ಕೆ ರೋಹಿತ್ ಮೊದಲ ಪ್ರತಿಕ್ರಿಯೆ
May 02, 2024 08:40 PM IST
ನೀವಂದುಕೊಂಡಂತೆ ಜೀವನ ನಡೆಯಲ್ಲ, ನನಗಿದು ಹೊಸದೂ ಅಲ್ಲ; ಎಂಐ ನಾಯಕತ್ವ ಕಿತ್ತಾಕಿದ್ದಕ್ಕೆ ರೋಹಿತ್ ಮೊದಲ ಪ್ರತಿಕ್ರಿಯೆ
- Rohit Sharma MI Captaincy: ಮುಂಬೈ ಇಂಡಿಯನ್ಸ್ ನಾಯಕತ್ವ ಕಳೆದುಕೊಂಡಿದ್ದಕ್ಕೆ ಸಂಬಂಧಿಸಿ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕತ್ವದಿಂದ ಕಿತ್ತೊಗೆದಿರುವ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿರುವ ರೋಹಿತ್ ಶರ್ಮಾ (Rohit Sharma), ಜೀವನದಲ್ಲಿ ನೀವಂದುಕೊಂಡಂತೆ ಎಲ್ಲಾ ನಡೆಯುವುದಿಲ್ಲ ಎಂದು ಹೇಳಿದ್ದಾರೆ. 2023ರ ಡಿಸೆಂಬರ್ 29ರಂದು ಐಪಿಎಲ್ ಮಿನಿ ಹರಾಜು ಜರುಗಿದ ಕೆಲವೇ ದಿನಗಳಲ್ಲಿ 5 ಬಾರಿ ಟ್ರೋಫಿ ಗೆದ್ದುಕೊಟ್ಟ ರೋಹಿತ್ ಅವರನ್ನು ಜವಾಬ್ದಾರಿಯಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಯಿತು. ಈ ಘಟನೆ ನಡೆದು 5 ತಿಂಗಳ ನಂತರ ಮೊದಲ ಬಾರಿಗೆ ರೋಹಿತ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಐದು ಬಾರಿ ಐಪಿಎಲ್ ವಿಜೇತ ನಾಯಕ ಈ ವಿಷಯದ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ ರೋಹಿತ್, ಇದು ಅವರ ದಾರಿಯಲ್ಲಿ ನಡೆಯದ ಘಟನೆ. ಆದರೆ, ನಾಯಕೇತರನಾಗಿ ಆಡುವುದು ತನಗೆ ಹೊಸದೇನಲ್ಲ ಎಂದು ಗಮನ ಸೆಳೆದಿದ್ದಾರೆ. ಮೊದಲು ನಾಯಕನಾಗಿರಲಿಲ್ಲ, ಮತ್ತೆ ನಾಯಕನಾದೆ, ಇದೀಗ ನಾಯಕನಾಗಿಲ್ಲ. ಆದರೆ ಇದು ಜೀವನದ ಒಂದು ಭಾಗ. ಎಲ್ಲವೂ ನೀವಂದುಕೊಂಡಂತೆ ನಡೆಯುವುದಿಲ್ಲ. ಇದು ಉತ್ತಮ ಅನುಭವವಾಗಿದೆ ಎಂದು ರೋಹಿತ್, ಪತ್ರಿಕಾಗೋಷ್ಠಿಯಲ್ಲಿ ಹೇಳುವಾಗ ಬೇಸರವು ಎದ್ದು ಕಾಣುತ್ತಿತ್ತು.
ಆಟಗಾರನಾಗಿ ಆಡಲು ಪ್ರಯತ್ನಿಸುತ್ತೇನೆ ಎಂದ ರೋಹಿತ್
ನನ್ನ ಜೀವನದಲ್ಲಿ ಮೊದಲು, ನಾನು ನಾಯಕನಾಗಿರಲಿಲ್ಲ. ವಿಭಿನ್ನ ನಾಯಕರ ಅಡಿಯಲ್ಲಿ ಆಡಿದ್ದೇನೆ. ಇದು ಏನೂ ಅಲ್ಲ. ನಾನು ಯಾವಾಗಲೂ ಆಟಗಾರನಾಗಿ ಅಗತ್ಯವಿರುವುದನ್ನು ಮಾಡಲು ಪ್ರಯತ್ನಿಸಿದೆ. ಕಳೆದ 1 ತಿಂಗಳಲ್ಲಿ ನಾನು ಅದನ್ನು ಮಾಡಲು ಪ್ರಯತ್ನಿಸಿದೆ ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಮುಂಬೈ ಇಂಡಿಯನ್ಸ್ ನಾಯಕನಾಗಿ 2013, 2015, 2017, 2019, 2020ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಎಂಎಸ್ ಧೋನಿ ಸಹ 5 ಟ್ರೋಫಿ ಗೆದ್ದಿದ್ದಾರೆ. ಇಬ್ಬರು ಸಹ ಐಪಿಎಲ್ ಇತಿಹಾಸದಲ್ಲಿ ಜಂಟಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.
ರೋಹಿತ್ 2013ರ ಋತುವಿನ ದ್ವಿತಿಯಾರ್ಧದಿಂದ 2023ರ ಐಪಿಎಲ್ವರೆಗೆ 1 ದಶಕದವರೆಗೆ ಫ್ರಾಂಚೈಸಿಯನ್ನು ಮುನ್ನಡೆಸಿದ್ದಾರೆ. ಎಂಐ ನಾಯಕರಾಗಿ ಹಾರ್ದಿಕ್ ಅವರ ಮೊದಲ ಸೀಸನ್ ಇಲ್ಲಿಯವರೆಗೆ ದುರಂತವಾಗಿದೆ, ಮುಂಬೈ ಮೂಲದ ಫ್ರಾಂಚೈಸ್ ಪ್ಲೇಆಫ್ ಪ್ರವೇಶಿಸುವ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಇದುವರೆಗೆ 10 ಪಂದ್ಯಗಳನ್ನು ಆಡಿದ್ದು ಕೇವಲ ಮೂರು ಪಂದ್ಯಗಳಲ್ಲಿ ಗೆದ್ದಿದೆ. ಇನ್ನು ರೋಹಿತ್ 10 ಪಂದ್ಯಗಳಲ್ಲಿ 35.00 ಸರಾಸರಿ ಮತ್ತು 158.29 ರ ಸ್ಟ್ರೈಕ್ ರೇಟ್‌ನಲ್ಲಿ 315 ರನ್‌ಗಳನ್ನು ಗಳಿಸಿದ್ದಾರೆ. ಎಲ್ಲಾ ಒಂಬತ್ತು T20 ವಿಶ್ವಕಪ್ ತಂಡಗಳಲ್ಲಿ ಭಾಗವಾಗಿರುವ ಏಕೈಕ ಭಾರತೀಯ ರೋಹಿತ್.
2007ರಲ್ಲಿ ಟಿ20ಐ ಕ್ರಿಕೆಟ್ಗೆ ಪದಾರ್ಪಣೆ
ರೋಹಿತ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಟಿ20ಐಗೆ ಪದಾರ್ಪಣೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಕ್ವಾರ್ಟರ್-ಫೈನಲ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಪ್ರಮುಖ ಅರ್ಧಶತಕ ಸಿಡಿಸಿದ್ದರು. ಆಗ ರೋಹಿತ್ಗೆ 20 ವರ್ಷ. ರೋಹಿತ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 16 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಎಂಎಸ್ ಧೋನಿ ನೇತೃತ್ವದ ತಂಡವು ಕೊನೆಯ ಓವರ್‌ನ ರೋಚಕ ಪಂದ್ಯದಲ್ಲಿ ಐದು ರನ್‌ಗಳ ವಿಜಯದ ನಂತರ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.