logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕುಸಿದ ಭಾರತಕ್ಕೆ ಆಸರೆಯಾದ ಕಿಶನ್-ಹಾರ್ದಿಕ್ ತಲಾ ಅರ್ಧಶತಕ; ಪಾಕ್ ಗೆಲುವಿಗೆ 267 ರನ್‌ಗಳ ಸವಾಲಿನ ಗುರಿ

ಕುಸಿದ ಭಾರತಕ್ಕೆ ಆಸರೆಯಾದ ಕಿಶನ್-ಹಾರ್ದಿಕ್ ತಲಾ ಅರ್ಧಶತಕ; ಪಾಕ್ ಗೆಲುವಿಗೆ 267 ರನ್‌ಗಳ ಸವಾಲಿನ ಗುರಿ

Prasanna Kumar P N HT Kannada

Sep 02, 2023 08:33 PM IST

google News

ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಅರ್ಧಶತಕ ಸಿಡಿಸಿದ ಸಂದರ್ಭ.

    • India vs Pakistan, Asia Cup 2023: ಏಷ್ಯಾಕಪ್ ಟೂರ್ನಿಯ 3ನೇ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ 48.5 ಓವರ್​​ಗಳಲ್ಲಿ 266 ರನ್​ ಗಳಿಸಿ ಆಲೌಟ್​ ಆಗಿದೆ.
ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಅರ್ಧಶತಕ ಸಿಡಿಸಿದ ಸಂದರ್ಭ.
ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಅರ್ಧಶತಕ ಸಿಡಿಸಿದ ಸಂದರ್ಭ.

ಪಾಕಿಸ್ತಾನದ ಮಾರಕ ಬೌಲಿಂಗ್ ದಾಳಿಯ ನಡುವೆಯೂ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಆರ್ಭಟಿಸಿದರು. ಸತತ ವಿಕೆಟ್​ ಪಡೆದು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಪಾಕಿಸ್ತಾನದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಇಶಾನ್​ ಮತ್ತು ಹಾರ್ದಿಕ್, ಭರ್ಜರಿ ಬ್ಯಾಟಿಂಗ್ ನಡೆಸಿದರು. ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನೆರವಾದ ಈ ಜೋಡಿ, ಸತತ ವಿಕೆಟ್​ಗಳ ನಡುವೆಯೂ ನಿರ್ಭೀತವಾಗಿ ಬ್ಯಾಟ್​ ಬೀಸಿ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು.

ಬದ್ಧವೈರಿಗಳ ಎದುರು ಹೋರಾಟದ ಆಟವಾಡಿದ ಹಾರ್ದಿಕ್-ಇಶಾನ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೆ, 5ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿ ಏಷ್ಯಾಕಪ್ ಇತಿಹಾಸದಲ್ಲಿ ದಾಖಲೆ ಬರೆದರು. ಒಂದು ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಪಾಕ್​ ಬೌಲರ್​​ಗಳಿಗೆ ಬೆಂಡೆತ್ತಿದಲ್ಲದೆ, ಸ್ಕೋರ್​ ಕಾರ್ಡ್​​ನಲ್ಲಿ ರನ್​​ ತೇರು ಎಳೆದರು. ಪರಿಣಾಮ ಭಾರತ 266 ರನ್​ಗಳ ಚಾಲೆಂಜಿಂಗ್​ ಮೊತ್ತ ಕಲೆ ಹಾಕುವಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಆರಂಭಿಕ ಆಘಾತ, 66ಕ್ಕೆ 4 ವಿಕೆಟ್

ಮೊದಲು ಬ್ಯಾಟಿಂಗ್​​ ನಡೆಸಿದ ಟೀಮ್​ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೇಲಿಂದ ಮೇಲೆ ಅಗ್ರ ನಾಲ್ವರು ಬ್ಯಾಟರ್​ಗಳ​​ ವಿಕೆಟ್‌ ಕಳೆದುಕೊಂಡಿತು. ರೋಹಿತ್​ ಶರ್ಮಾ 11 ರನ್, ಶುಭ್ಮನ್ ಗಿಲ್ 10, ವಿರಾಟ್ ಕೊಹ್ಲಿ 4 ರನ್, ಶ್ರೇಯಸ್ ಅಯ್ಯರ್ 14 ರನ್ ಸಿಡಿಸಿ ವೈಫಲ್ಯ ಅನುಭವಿಸಿದರು. ಇವರು ಔಟಾದ ಸಮಯದಲ್ಲಿ ಭಾರತದ ಮೊತ್ತ 66 ಆಗಿತ್ತು. ಶಾಹೀನ್​ ಶಾ ಅಫ್ರಿದಿ, ಹ್ಯಾರಿಸ್ ರವೂಫ್, ನಸೀಮ್ ಶಾ ತ್ರಿವಳಿ ಬೌಲರ್​ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸಿ ಕುಸಿತಕ್ಕೆ ಕಾರಣರಾಗಿದ್ದರು. ಈ ಹಂತದಲ್ಲಿ150 ರನ್ ಗಳಿಸಲೂ ಸಾಧ್ಯವಾಗದ ಪರಿಸ್ಥಿತಿಗೆ ಭಾರತ ಸಿಲುಕಿತ್ತು.

ತಂಡವನ್ನು ಪಾರು ಮಾಡಿದ ಹಾರ್ದಿಕ್-ಇಶಾನ್

ಈ ಹಂತದಲ್ಲಿ ಹಾರ್ದಿಕ್​-ಇಶಾನ್ ಜವಾಬ್ದಾರಿಯುತ ಮತ್ತು ರಕ್ಷಣಾತ್ಮಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತ ತಂಡವನ್ನು ಆಧರಿಸಿದರು. ಅಲ್ಲದೆ ಪಾಕಿಸ್ತಾನ ಬೌಲರ್​ಗಳನ್ನು ಕಾಡಿದ ಈ ಬ್ಯಾಟ್ಸ್​​ಮನ್​​ಗಳು, 141 ಎಸೆತಗಳಲ್ಲಿ 138 ರನ್​ ಪೇರಿಸಿದರು. ಆ ಮೂಲಕ ನೆರವಾದ ಈ ಜೋಡಿ, 5ನೇ ವಿಕೆಟ್​ಗೆ ದಾಖಲೆಯ ಶತಕದ ಜೊತೆಯಾಡಿವಾಡಿ ದಿಗ್ಗಜರ ರೆಕಾರ್ಡ್​ ಮುರಿದರು. ಹಾಗೆಯೇ ಸಂಕಷ್ಟದಿಂದ ಪಾರು ಮಾಡಿದರು. ಇವರ ಅಮೋಘ ಬ್ಯಾಟಿಂಗ್‌ ನೆರವಿನಿಂದ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ಸು ಕಂಡಿತು.

ತಲಾ ಅರ್ಧಶತಕ ಸಿಡಿಸಿದ ಬಲಗೈ-ಎಡಗೈ ಜೋಡಿ

ಕೆಎಲ್ ರಾಹುಲ್​ಗೆ ಬ್ಯಾಕಪ್ ವಿಕೆಟ್ ಕೀಪರ್​ ಆಗಿ ಆಯ್ಕೆಯಾದ ಇಶಾನ್ ಕಿಶನ್, ಅವರ ಅಲಭ್ಯತೆಯಲ್ಲಿ ತಂಡದಲ್ಲಿ ಸ್ಥಾನ ಪಡೆದು ಟೀಮ್ ಮ್ಯಾನೇಜ್​ಮೆಂಟ್​ ತನ್ನ ಮೇಲೇ ಇಟ್ಟಿದ್ದ ನಂಬಿಕೆಯನ್ನು ಇಶಾನ್‌ ಉಳಿಸಿಕೊಂಡರು. ‌ಅಮೋಘ ಬ್ಯಾಟ್ ನಡೆಸುತ್ತಾ ಶತಕದತ್ತ ಹೆಜ್ಜೆ ಹಾಕುತ್ತಿದ್ದ ಕಿಶನ್, 81 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ ಸಹಾಯದಿಂದ 82 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಇದು ಅವರ ಸತತ 4ನೇ ಏಕದಿನ ಅರ್ಧಶತಕ ಎಂಬುದು ವಿಶೇಷ.

ಮತ್ತೊಂದೆಡೆ ಹಾರ್ದಿಕ್​ಗೆ ಅದ್ಭುತ ಸಾಥ್​ ನೀಡಿದ ಹಾರ್ದಿಕ್ ಆರಂಭದಲ್ಲಿ ನಿಧಾನವಾ್ಗಿ ಬ್ಯಾಟ್ ಬೀಸಿದರು. ಕಿಶನ್ ಅರ್ಧಶತಕದ ನಂತರ ಬೌಲರ್​​ಗಳ ಮೇಲೆ ಸವಾರಿ ನಡೆಸಿದ ಹಾರ್ದಿಕ್, ತಾನೂ ಕೂಡ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ 90 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​​​ ನೆರವಿನಿಂದ 87 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಆ ಮೂಲಕ ಫಾರ್ಮ್​ಗೂ ಮರಳಿದರು. ಅಲ್ಲದೆ, ಉಪನಾಯಕನ ಜವಾಬ್ದಾರಿಗೆ ತಕ್ಕಂತೆ ಆಟವಾಡಿ ಗಮನ ಸೆಳೆದರು.

ಜಡೇಜಾ ನಿರಾಸೆ, ಕೊನೆಯಲ್ಲಿ ಪೆವಿಲಿಯನ್ ಪರೇಡ್

ಹಾರ್ದಿಕ್-ಇಶಾನ್ ವಿಕೆಟ್​ ಒಪ್ಪಿಸಿದ ಬೆನ್ನಲ್ಲೇ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್​ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. ಜಡೇಜಾ 14 ರನ್, ಶಾರ್ದೂಲ್ 3 ರನ್ ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ 4 ರನ್, ಜಸ್ಪ್ರೀತ್​ ಬುಮ್ರಾ 14 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಮಧ್ಯಮ ಓವರ್​ಗಳಲ್ಲಿ ಹಿಡಿತ ತಪ್ಪಿದ್ದ ಪಾಕ್ ಬೌಲರ್​​​ಗಳು ಕೊನೆಯಲ್ಲಿ ಮತ್ತೆ ಮೇಲುಗೈ ಸಾಧಿಸಿದರು. ಅಂತಿಮವಾಗಿ ಭಾರತ 48.5 ಓವರ್​ಗಳಲ್ಲಿ 266 ರನ್​​ಗಳಿಗೆ ಸರ್ವಪತನ ಕಂಡಿತು. ಶಾಹೀನ್​ ಶಾ ಅಫ್ರಿದಿ 4 ವಿಕೆಟ್, ನಸೀಮ್ ಶಾ, ಹ್ಯಾರಿಸ್ ರವೂಫ್ ತಲಾ 3 ವಿಕೆಟ್ ಪಡೆದು ಮಿಂಚಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ