ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಪಾಕ್ ಆಟಗಾರ; ಕೊಹ್ಲಿಗಿಂತ ಈತನ ದಾಖಲೆ ಚೆನ್ನಾಗಿದೆಯಂತೆ
Oct 08, 2024 01:51 PM IST
ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಪಾಕ್ ಆಟಗಾರ; ಕೊಹ್ಲಿಗಿಂತ ಈತನ ದಾಖಲೆ ಚೆನ್ನಾಗಿದೆಯಂತೆ
- ಅಬ್ದುಲ್ಲಾ ಶಫೀಕ್ ಫಾರ್ಮ್ ಕುರಿತು ಮಾತನಾಡಿದ ಪಾಕಿಸ್ತಾನ ನಾಯಕ ಶಾನ್ ಮಸೂದ್, ವಿರಾಟ್ ಕೊಹ್ಲಿಯನ್ನು ಉಲ್ಲೇಖಿಸಿ ತಮ್ಮ ಸಹ ಆಟಗಾರನನ್ನು ಸಮರ್ಥಿಸಿಕೊಂಡಿದ್ದಾರೆ. ಶಫೀಕ್ ದಾಖಲೆ ವಿರಾಟ್ ಕೊಹ್ಲಿಗಿಂತ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.
ಮುಲ್ತಾನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟರ್ ಅಬ್ದುಲ್ಲಾ ಶಫೀಕ್ (Abdullah Shafique) ಅಮೋಘ ಶತಕ ಸಿಡಿಸಿದರು. ಅದರೊಂದಿಗೆ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದರು. ಅಕ್ಟೋಬರ್ 7ರ ಸೋಮವಾರ ನಡೆದ ಮೊದಲ ದಿನದಾಟದಲ್ಲಿ ಅವರು ಗಸ್ ಅಟ್ಕಿನ್ಸನ್ ಅವರ ಎಸೆತದಲ್ಲಿ ಔಟಾದರು. ಅಷ್ಟರಲ್ಲೇ 184 ಎಸೆತಗಳನ್ನು ಎದುರಿಸಿ 102 ರನ್ ಗಳಿಸಿದ ಶಫೀಕ್ ಪ್ರಚಂಡ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ನಾಯಕನೊಂದಿಗೆ ಜೊತೆಗೂಡಿ ಎರಡನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟವಾಡಿ ಗಮನ ಸೆಳೆದರು.
ಶಫೀಕ್ ಆಡಿದ್ದ ಕೊನೆಯ ಮೂರು ಪಂದ್ಯಗಳಲ್ಲಿ ಮೂರು ಬಾರಿ ಡಕ್ ಔಟ್ ಆಗಿದ್ದರು. ಹೀಗಾಗಿ ಪಾಕಿಸ್ತಾನ ತಂಡವು ಅವರನ್ನು ಟೆಸ್ಟ್‌ನಿಂದ ಹೊರಗುಳಿಸುವ ನಿರೀಕ್ಷೆ ಇತ್ತು. ಆದರೆ, ತನ್ನ ಸಾಮರ್ಥ್ಯ ಪ್ರದರ್ಶಿಸಿದ ಆಟಗಾರ, ಗಮನಾರ್ಹವಾದ ಹೊಡೆತದೊಂದಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿದರು.
ಶಫೀಕ್ ಅವರ ಫಾರ್ಮ್ ಕುರಿತು ಪಾಕ್ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್ ಮಾತನಾಡಿದರು, ಈ ವೇಳೆ ಅವರು ಭಾರತದ ದಿಗ್ಗಜ ಆಟಗಾರ ಹಾಗೂ ದಾಖಲೆಯ ಸರದಾರ ವಿರಾಟ್ ಕೊಹ್ಲಿಯನ್ನು ಉಲ್ಲೇಖಿಸಿ ತಮ್ಮ ಸಹ ಆಟಗಾರನನ್ನು ಸಮರ್ಥಿಸಿಕೊಂಡರು. ಈವರೆಗೆ 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಶಫೀಕ್ ಅವರ ದಾಖಲೆ ಕೊಹ್ಲಿಗಿಂತ ಉತ್ತಮವಾಗಿದೆ ಎಂದು ಮಸೂದ್ ಹೇಳಿದ್ದಾರೆ.
ಕೊಹ್ಲಿಗಿಂತ ಶಫೀಕ್ ದಾಖಲೆ ಉತ್ತಮವಾಗಿದೆ
2024ರಲ್ಲಿ ಪಾಕಿಸ್ತಾನ ತಂಡವು ಉತ್ತಮ ಕ್ರಿಕೆಟ್ ಆಡಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಎಲ್ಲಾ ವಿಷಯಗಳನ್ನು ವಸ್ತುನಿಷ್ಠವಾಗಿ ನೋಡಬೇಕು. ನೀವು ಅಂಕಿ-ಅಂಶಗಳ ಬಗ್ಗೆ ಮಾತನಾಡುತ್ತೀರಿ. ನಾನು ಅಬ್ದುಲ್ಲಾ ಶಫೀಕ್ ಅವರ ಅಂಕಿ ಅಂಶಗಳ ಬಗ್ಗೆ ನೋಡುತ್ತಿದ್ದೆ. ಈವರೆಗೆ 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಬ್ದುಲ್ಲಾ ಶಫೀಕ್, ವಿರಾಟ್ ಕೊಹ್ಲಿಗಿಂತ ಉತ್ತಮ ದಾಖಲೆ ಹೊಂದಿದ್ದಾರೆ" ಎಂದು ಅವರು ಹೇಳಿದ್ದಾರೆ.
ಮುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶಾನ್ ಮಸೂದ್ ಮತ್ತು ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಫೀಕ್ ಇಬ್ಬರೂ ತಲಾ ಶತಕ ಸಿಡಿಸಿದರು. ಇದರೊಂದಿಗೆ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಪಾಕ್ ಮೇಲುಗೈ ಸಾಧಿಸಿತು. ದಿನದ ಅಂತ್ಯಕ್ಕೆ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು. ನಾಯಕ ಹಾಗೂ ಶಫೀಕ್ ಎರಡನೇ ವಿಕೆಟ್‌ಗೆ 253 ರನ್‌ಗಳ ಬೃಹತ್ ಜೊತೆಯಾಟವಾಡಿದರು.
ಅತ್ತ ಗಾಯಾಳು ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಒಲ್ಲಿ ಪೋಪ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಕಣಕ್ಕಿಳಿದಿದೆ. ಎರಡನೇ ದಿನದಾಟದಲ್ಲಿ 115 ಓವರ್ ವೇಳೆಗೆ ಪಾಕ್ 414 ರನ್ ವೇಳೆಗೆ 6 ವಿಕೆಟ್ ಕಳೆದುಕೊಂಡು ಆಟ ಮುಂದುವರೆಸಿದೆ.