ಐರ್ಲೆಂಡ್ ವಿರುದ್ಧ ವಿಶೇಷ ಮೈಲಿಗಲ್ಲು; ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಬಾಬರ್ ಅಜಮ್
May 15, 2024 06:07 PM IST
ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಬಾಬರ್ ಅಜಮ್
- Babar Azam: ಐರ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಐರ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam) ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಡಬ್ಲಿನ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಪಾಕ್, ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಮೊದಲ ಟಿ20 ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲು ಕಂಡ ಬಳಿಕ, ಎರಡು ಹಾಗೂ ಮೂರನೇ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡಿತು.
ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಬಾಬರ್, 42 ಎಸೆತಗಳಲ್ಲಿ 75 ರನ್ ಸಿಡಿಸಿ ಔಟಾದರು. ಇದರೊಂದಿಗೆ ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಇದು ಬಾಬರ್ 39ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ ನಿದರ್ಶನವಾಗಿದೆ. ಅತ್ತ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 38 ಬಾರಿ ಟಿ20 ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಅದರೊಂದಿಗೆ ಕಿಂಗ್ ಕೊಹ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ 34 ಬಾರಿ ಈ ಸಾಧನೆ ಮಾಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದವರು(ಶತಕ ಹಾಗೂ ಅರ್ಧಶತಕ ಸೇರಿ)
- ಬಾಬರ್ ಅಜಮ್ (ಪಾಕಿಸ್ತಾನ) - 39
- ವಿರಾಟ್ ಕೊಹ್ಲಿ (ಭಾರತ) - 38
- ರೋಹಿತ್ ಶರ್ಮಾ (ಭಾರತ) - 34
- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) - 29
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 27
ಇದನ್ನೂ ಓದಿ | ಅತಿ ಹೆಚ್ಚು ರನ್, ಯಶಸ್ವಿ ಚೇಸಿಂಗ್ ಬಳಿಕ ಮತ್ತೊಂದು ರೆಕಾರ್ಡ್; ಐಪಿಎಲ್ 2024ರಲ್ಲಿ ಸಿಡಿದವು ದಾಖಲೆಯ ಸಿಕ್ಸರ್‌ಗಳು
ಮೂರನೇ ಟಿ20 ಪಂದ್ಯದಲ್ಲಿ ಬಾಬರ್ ಎರಡನೇ ವಿಕೆಟ್‌ಗೆ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ 139 ರನ್‌ಗಳ ಜೊತೆಯಾಟವಾಡಿದರು. ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಈ ಇಬ್ಬರು ಸ್ಟಾರ್ ಜೋಡಿಯ ನಡುವಿನ 10ನೇ ಶತಕದ ಜೊತೆಯಾಟವಾಗಿದೆ. ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಇವರಿಬ್ಬರು ಪಾತ್ರರಾದರು. ಇದೇ ವೇಳೆ ಜೊತೆಯಾಟದಲ್ಲಿ 3,000 ರನ್ ಗಳಿಸಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿ ಮುಗಿದ ಬಳಿಕ ಪಾಕಿಸ್ತಾನ ತಂಡವು ಅಲ್ಲಿಂದ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ವಿಶ್ವಕಪ್ ಪಂದ್ಯಾವಳಿಯ ಆರಂಭಕ್ಕೂ ಮುನ್ನ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಮೇ 22ರಿಂದ ಸರಣಿ ಆರಂಭವಾಗಲಿದ್ದು, ಅಂತಿಮ ಪಂದ್ಯವು ಮೇ 30ರಂದು ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿದೆ. ಈಗಾಗಲೇ ಈ ಸರಣಿಯಲ್ಲಿ ಆಡುವ ಸಲುವಾಗಿ ಆಂಗ್ಲ ಕ್ರಿಕೆಟಿಗರು ಐಪಿಎಲ್‌ನಿಂದ ನಿರ್ಗಮಿಸುತ್ತಿದ್ದಾರೆ.